ಕಲಬುರಗಿ(ಜು.26): ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಬಳ್ಳಾರಿಯಲ್ಲಿ ಶನಿವಾರವೂ ಉತ್ತಮ ಮಳೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ತಗ್ಗು ಪ್ರದೇಶಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ. ಉಳಿದಂತೆ ಬಾಗಲಕೋಟೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನೊಬ್ಬನನ್ನು ರಕ್ಷಣೆ ಮಾಡಲಾಗಿದೆ.

"

ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ನಗರದಲ್ಲಿ ವಾಹನಗಳ ಸಂಚಾರ ಸಮಸ್ಯೆಯಾಗಿದೆ. ತುಂಗಭದ್ರಾ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿದ್ದರಿಂದ ಟಿಎಲ್‌ಬಿಸಿಗೆ ನೀರು ಹರಿಸಲಾಗಿದೆ. ಅದೇ ಮಸ್ಕಿ ನಾಲಾ ಜಲಾಶಯ ಭರ್ತಿಯಾಗಿದ್ದರಿಂದ 300 ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗಿದೆ. 

ಕಲಬುರಗಿ: ಭಾರೀ ಮಳೆ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹೋಗುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಾದಾಮಿ ಪಟ್ಟಣದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. 10ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ.

"

ಬಳ್ಳಾರಿಯಲ್ಲಿ ನೂರಾರು ಎಕರೆ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದೆ. ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ 14 ಕುರಿ, ಮೇಕೆಗಳು ಕೊಚ್ಚಿ ಹೋಗಿವೆ. 45 ಮನೆಗಳು ಜಖಂಗೊಂಡಿವೆ. ಉಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ.