ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ?
* ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮದಲ್ಲಿ ಘಟನೆ
* ಅಕ್ಕಿಯ ಕೆಲ ಕಾಳುಗಳಿಗೆ ಬೆಂಕಿ ಹಚ್ಚಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಅಂಶ ಇರುವುದು ಪತ್ತೆ
* ಅಂಗಡಿ ಮಾಲೀಕನೊಂದಿಗೆ ಗ್ರಾಮಸ್ಥರ ವಾಗ್ವಾದ
ಬೆಳಗಾವಿ(ಮೇ.30): ಕೊರೋನಾ ಸೋಂಕು ಸೆಮಿಲಾಕ್‌ಡೌನ್‌ನಿಂದಾಗಿ ಬಡ ಮತ್ತು ಮಧ್ಯದ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ತಾಲೂಕಿನ ಬಡಾಲಅಂಕಲಗಿ ಗ್ರಾಮದಲ್ಲಿ ಪಡಿತರ ಅಂಗಡಿಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಕುರಿತು ಅಲ್ಲಿನ ಗ್ರಾಮಸ್ಥರು ಆರೋಪ ಮಾಡಿದ್ದಾರೆ. 2 ದಿನಗಳ ಹಿಂದೆ ಗ್ರಾಮದಲ್ಲಿ ವಿತರಣೆ ಮಾಡಿದ ಪಡಿತರ ಅಕ್ಕಿಯ ಕೆಲ ಕಾಳುಗಳಿಗೆ ಬೆಂಕಿ ಹಚ್ಚಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಅಂಶ ಇರುವುದು ಪತ್ತೆ ಆಗಿದೆ. ಹೀಗಾಗಿ ಅಂಗಡಿ ಮಾಲೀಕನೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಲ್ಲದೇ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ ಅವರಿಗೆ ಮಾಹಿತಿ ನೀಡಿದ್ದಾರೆ.
ಪೂಜೆಯಿಂದ ಕೊರೋನಾ ಹೋಗೋದಾದ್ರೆ ವೈದ್ಯರು ಯಾಕೆ ಬೇಕು?: ಸತೀಶ್ ಜಾರಕಿಹೊಳಿ
ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಆಹಾರ ನಿರೀಕ್ಷಕ ಜಿ.ಬಿ.ಬಾಗೋಜಿಕೊಪ್ಪ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡು ಎರಡು ಕೆ.ಜಿ. ಪಡಿತರ ಅಕ್ಕಿಯ ಸ್ಯಾಂಪಲ್ ತಗೆದುಕೊಂಡು ಹೋಗಿದ್ದಾರೆ. ಆಹಾರ ಇಲಾಖೆ ಸಿಬ್ಬಂದಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳಿಸಿ ಎರಡು ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಬಡಾಲ ಅಂಕಲಗಿ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಬಡಾಲ್ ಅಂಕಲಗಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜತೆಗೆ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಆದರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಳಗಾವಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಜಿ.ಬಿ.ಬಾಗೋಜಿಕೊಪ್ಪ ತಿಳಿಸಿದ್ದಾರೆ.