ಶಿವಮೊಗ್ಗ[ಜ.18]:  ತ್ಯಾವರೆಕೊಪ್ಪ ಹುಲಿ-ಸಿಂಹಧಾಮವನ್ನು ಮೈಸೂರು ಮೃಗಾಲಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಅಭಿವೃದ್ಧಿ ಕಾರ್ಯ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಂಹಧಾಮವನ್ನು ರಾಜ್ಯದ ವಿಶೇಷ ಪ್ರಾಣಿ ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕೇಂದ್ರದ ಸಚಿವ ಜಾವ್ಡೇಕರ್‌ ಅವರಿಗೆ ಮನವಿ ಮಾಡಲಾಗಿದೆ. ಪ್ರಸ್ತುತ 80 ಹೆಕ್ಟೇರ್‌ ವಿಸ್ತೀರ್ಣ ಹೊಂದಿರುವ ಸಿಂಹಧಾಮವನ್ನು 250 ಹೆಕ್ಟೇರ್‌ಗೆ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಸಿಂಹಧಾಮದಿಂದ ಬರುತ್ತಿರುವ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದೆ. ಇದನ್ನು ಸರ್ಕಾರವೇ ಭರಿಸುತ್ತಿದ್ದು, ವೆಚ್ಚ ಸರಿದೂಗಿಸಬೇಕಿದೆ. ಮುಂದೆ ಸಿಂಹಧಾಮವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಚಿಂತನೆ ಇದೆ ಎಂದರು.

ಗಣಪತಿ ಕೆರೆಗೆ ಕಾಯಕಲ್ಪ, ಹಾಲಪ್ಪ-ಕಾಗೋಡು ಜತೆಯಾದ್ರಪ್ಪ!.

ಸಿಂಹಧಾಮ ಅಭಿವೃದ್ಧಿಗೆ 40 ರಿಂದ 50 ಕೋಟಿ ರು. ಬೇಕಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ 9 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಇದರಲ್ಲಿ 4 ಕೋಟಿ ರು. ವೆಚ್ಚದಲ್ಲಿ ವಿವಿಧ ಪ್ರಾಣಿಗಳನ್ನು ಇಡಲಾಗಿರುವ ಬೋನ್‌ಗಳಿಗೆ ಹೊಸ ರೂಪ ನೀಡುವ ಕೆಲಸ ಸಾಗಿದೆ. ಮಾಚ್‌ರ್‍ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ 13 ಪ್ರಾಣಿಗಳಿಗೆ ಹೊಸ ಜಾಗದಲ್ಲಿ ಅವಕಾಶವಾಗಲಿದೆ. ಉಳಿದಂತೆ 5 ಕೋಟಿ ರು. ವೆಚ್ಚದಲ್ಲಿ ಸಿಂಹಧಾಮದ ಇತರೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಪ್ರಸ್ತುತ ಹುಲಿ-ಸಿಂಹಧಾಮದಲ್ಲಿ ವಿವಿಧ 67 ಜಾತಿ 450 ಪ್ರಾಣಿ ಪಕ್ಷಿಗಳಿವೆ. ಅಭಿವೃದ್ಧಿ ನಂತರ ಇದು ಇನ್ನು ಹೆಚ್ಚಾಗಲಿದೆ ಎಂದರು.

ಸಂಸದರು ಹುಲಿ- ಸಿಂಹಧಾಮದ ಸಫಾರಿಯಲ್ಲಿ ಪ್ರಯಾಣ ಬೆಳೆಸಿ ಪ್ರಾಣಿಗಳ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮೃಗಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.