ದೈಹಿಕ, ಮಾನಸಿಕ ಸ್ಥಿರತೆ ಮುಖ್ಯ: ಸಿದ್ಧಗಂಗಾ ಶ್ರೀ

ಅರ್ಥರೇಖೆ ಇದ್ದರೇನು ಆರೋಗ್ಯ ರೇಖೆ ಇಲ್ಲದಿದ್ದರೆ ಎನ್ನುವ ಬಸವಣ್ಣನವರ ವಚನದಂತೆ ಮನುಷ್ಯನಿಗೆ ಎಷ್ಟೇ ಐಶ್ವರ್ಯ ಇದ್ದರೂ ಆರೋಗ್ಯ ಇಲ್ಲದಿದ್ದರೆ ಅದು ವ್ಯರ್ಥ. ದೈಹಿಕ ಹಾಗೂ ಮಾನಸಿಕ ಸ್ಥಿರತೆ ಹೊಂದಿರುವ ಯುವಜನತೆಯೇ ದೇಶದ ಸಂಪತ್ತು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

Physical  mental stability is important: Siddhganga Sri snr

 ತುಮಕೂರು : ಅರ್ಥರೇಖೆ ಇದ್ದರೇನು ಆರೋಗ್ಯ ರೇಖೆ ಇಲ್ಲದಿದ್ದರೆ ಎನ್ನುವ ಬಸವಣ್ಣನವರ ವಚನದಂತೆ ಮನುಷ್ಯನಿಗೆ ಎಷ್ಟೇ ಐಶ್ವರ್ಯ ಇದ್ದರೂ ಆರೋಗ್ಯ ಇಲ್ಲದಿದ್ದರೆ ಅದು ವ್ಯರ್ಥ. ದೈಹಿಕ ಹಾಗೂ ಮಾನಸಿಕ ಸ್ಥಿರತೆ ಹೊಂದಿರುವ ಯುವಜನತೆಯೇ ದೇಶದ ಸಂಪತ್ತು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಸಿದ್ಧಗಂಗಾ ವೈದ್ಯಕೀಯ ಕಾಲೇಜು ವತಿಯಿಂದ ನಡೆದ 10ಕೆ ಮ್ಯಾರಥಾನ್‌ನ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣುತ್ತಿರುವುದು ಆತಂಕಕಾರಿಯಾಗಿದೆ. ಇದರ ಜತೆ ಜತೆಗೆ ಪ್ರೌಢ ವಯಸ್ಕರಲ್ಲಿಯೇ ಹೃದಯದ ಕಾಯಿಲೆಗಳು ಹೆಚ್ಚುತ್ತಿರುವುದು ಆಲೋಚಿಸಬೇಕಾದ ವಿಷಯವಾಗಿದ್ದು, ಆರೋಗ್ಯ ಜಾಗೃತಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್. ಪರಮೇಶ್ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಹೃದ್ರೋಗ ಕಾಳಜಿಗಾಗಿ ಪ್ರತಿ ವರ್ಷ ಮ್ಯಾರಥಾನ್ ಆಯೋಜಿಸುತ್ತಾ ಬಂದಿದ್ದು, ದೇಶ-ವಿದೇಶಗಳಿಂದ ಮೂರು ಸಾವಿರಕ್ಕೂ ಹೆಚ್ಚು ಜನರು ಮ್ಯಾರಥಾನ್‌ಗೆ ಆಗಮಿಸಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ದೊರೆಯುತ್ತಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಳಜಿಗೆ ನಮ್ಮ ಆಸ್ಪತ್ರೆಯ ಸೇವೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಿದ್ದಗಂಗಾ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಹೆಚ್.ಎಂ. ಮಾತನಾಡಿ, ಜನರ ಜೀವನ ಶೈಲಿ ಹಾಗೂ ಅಸಮರ್ಪಕ ಆಹಾರ ಪದ್ಧತಿಯಿಂದ ನಿತ್ಯ ಹೃದ್ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಉತ್ತಮ ಆರೋಗ್ಯ ಶೈಲಿ ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನವೇ ದೀರ್ಘಾಯುಷ್ಯದ ಕೀಲಿ ಕೈ ಆಗಿದೆ. ವಾರ್ಷಿಕ ಆರೋಗ್ಯ ಪರೀಕ್ಷೆ, ರೋಗ ಲಕ್ಷಣಗಳು ಕಂಡು ಬಂದ ತಕ್ಷಣವೇ ಚಿಕಿತ್ಸೆ ಪಡೆಯುವುದು ನಮ್ಮ ಆದ್ಯತೆಯಾಗಬೇಕು ಎಂದರು.

ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಎಂ, ಹೃದ್ರೋಗ ತಜ್ಞರಾದ ಡಾ. ಶರತ್‌ಕುಮಾರ್, ಡಾ. ನಿಲೇಶ್, ಸಿಇಓ ಡಾ. ಸಂಜೀವ್‌ಕುಮಾರ್, ಪ್ರಾಯೋಜಕರಾದ ಡಿಎಕ್ಸ್ ಮ್ಯಾಕ್ಸ್‌ನ ಡಾ.ಎಸ್.ಪಿ. ದಯಾನಂದ್, ತುಮುಲ್ ಅಧ್ಯಕ್ಷ ಮಹಲಿಂಗಯ್ಯ, ಗೋಲ್ಡ್ ಜಿಮ್‌ನ ಆಶಾ, ಟಾಟಾ ಮೋಟಾರ್ಸ್‌ನ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮ್ಯಾರಥಾನ್‌ಲ್ಲಿ ಭಾಗವಹಿಸಿದ್ದ ಕೆಎಸ್‌ಆರ್‌ಪಿ, ಎನ್‌ಸಿಸಿ, ತುಮಕೂರು ಅಥ್ಲೆಟಿಕ್ ಅಸೋಸಿಯೇಷನ್, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

10ಕೆ, 5ಕೆ ಹಾಗೂ 2ಕೆ ಮ್ಯಾರಥಾನ್‌ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಹಸಿರುನಿಶಾನೆ ತೋರಿಸಿ ಸ್ಪರ್ಧಿಗಳಿಗೆ ಶುಭಾಶಯ ಕೋರಿದರು. ಕಿನ್ಯಾದಿಂದ ಆಗಮಿಸಿದ್ದ ಸೈಮನ್ 10ಕೆ ಮ್ಯಾರಥಾನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಗಮನ ಸೆಳೆಯಿತು. ಉಳಿದಂತೆ ಕರ್ನಾಟಕದ ಬಹುಪಾಲು ಸ್ಪರ್ಧಿಗಳು ಉಳಿದ ಮ್ಯಾರಥಾನ್‌ನಲ್ಲಿ ವಿಜೇತರಾದರೆ ವೈದ್ಯರಾದ ಡಾ. ಭಾನುಪ್ರಕಾಶ್, ಡಾ. ನಿಲೇಶ್ ಹಾಗೂ ಡಾ. ರವಿಕುಮಾರ್, ಡಾ.ವೀಣಾ, ಡಾ.ಪ್ರಿಯಾ, ಡಾ.ರಜತಾ, ಡಾ.ನಳಿನಾ ಮ್ಯಾರಥಾನ್‌ನಲ್ಲಿ ಸ್ಪರ್ಧಿಗಳಾಗಿದ್ದು ವಿಶೇಷವಾಗಿತ್ತು.

Latest Videos
Follow Us:
Download App:
  • android
  • ios