ಕೊಪ್ಪಳ: ಕ್ಯಾಮೆರಾ ಹಿಡಿದ ಕೈಯ್ಯಲ್ಲೀಗ ಚಹಾದ ಥರ್ಮಸ್..!
* ಕೊರೋನಾ, ಲಾಕ್‌ಡೌನ್ ಹೊಡೆತಕ್ಕೆ ಫೋಟೋಗ್ರಾಫರ್ ಬದುಕು ಬೀದಿಗೆ
* ಫೋಟೋ ತೆಗೆಯಲು ಬುಕ್ ಆಗಿದ್ದ ಆರ್ಡರ್‌ಗಳು ಕಾನ್ಸಲ್
* ಲಾಕ್‌ಡೌನ್‌ನಿಂದ ಬದುಕು ನಿರ್ವಹಣೆ ತೀವ್ರ ಸಮಸ್ಯೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.23): ಸತತ ಲಾಕ್‌ಡೌನ್‌ನಿಂದಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ರದ್ದಾಗುತ್ತಿರುವುದರಿಂದ ಫೋಟೋಗ್ರಾಫರ್ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲೊಬ್ಬ ಫೋಟೋಗ್ರಾಫರ್ ಜನತಾ ಕರ್ಫ್ಯೂ, ಲಾಕ್‌ಡೌನ್‌ನಿಂದ ಯಾವುದೇ ಫೋಟೋಗ್ರಫಿ ಆರ್ಡರ್ ಇಲ್ಲದೇ ಇರುವುದರಿಂದ ಚಹಾ ಮಾರುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಾಲೂಕಿನ ಬಿಸರಳ್ಳಿ ಗ್ರಾಮದ ಫೋಟೋಗ್ರಾಫರ್ ಅಜಯಕುಮಾರ ಹಿರೇಮಠ ತಮ್ಮ ಕೈಯ್ಯಲ್ಲಿದ್ದ ಕ್ಯಾಮೆರಾ ಎತ್ತಿಟ್ಟು, ಚಹಾ ಕಿತ್ತಲಿ ಹಿಡಿದು ಚಹಾ ಮಾರುವ ಕಾಯಕಕ್ಕೆ ಇಳಿದಿದ್ದಾರೆ.
ಮನೆಯಲ್ಲಿ ಪಾಶ್ರ್ವವಾಯು ಆಗಿರುವ ತಂದೆ ಇದ್ದಾರೆ. ಫೋಟೋಗ್ರಾಫರ್ ವೃತ್ತಿಯಲ್ಲಿ ಉತ್ತಮ ಆದಾಯ ಹೊಂದಿದ್ದ ಅಜಯ್ ತಂದೆಗೆ ಅಗತ್ಯ ಚಿಕಿತ್ಸೆ ಕೊಡಿಸಿ ಗುಣಮುಖರಾಗಿಸಿದ್ದಾರೆ. ಆದರೀಗ ಕಳೆದ ವರ್ಷದಿಂದ ಪದೇ ಪದೇ ಲಾಕ್‌ಡೌನ್ ಆಗುತ್ತಿರುವುದರಿಂದ ಮದುವೆಯ ಆರ್ಡರ್ ರದ್ದಾಗುತ್ತಿವೆ. ಶುಭ ಸಮಾರಂಭಗಳು ನಡೆಯುತ್ತಿಲ್ಲ. ಮದುವೆ ನಡೆದರೂ ಅದ್ಧೂರಿತನಕ್ಕೆ ಕಡಿವಾಣ ಬಿದ್ದಿದೆ. ಕರೆದರೂ ಕೆಲವೇ ಕೆಲವು ಫೋಟೋಗಳಿಗೆ ಕಾರ್ಯಕ್ರಮ ಸೀಮಿತವಾಗುತ್ತಿದ್ದು, ನಿರೀಕ್ಷಿತ ಆದಾಯ ಬರುತ್ತಿಲ್ಲ. ಅದರಲ್ಲೂ ಇದೀಗ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಬದುಕು ನಿರ್ವಹಣೆ ತೀವ್ರ ಸಮಸ್ಯೆಯಾಗಿದೆ. ಹೀಗಾಗಿ, ಈಗ ಚಹಾ ಮಾರುತ್ತಿದ್ದಾರೆ. ನಿತ್ಯವೂ 500 ವ್ಯಾಪಾರವಾಗುತ್ತದೆ. ಕ್ಯಾಮರಾ ಹಿಡಿಯಬೇಕಾದ ಕೈಯಲ್ಲಿ ಕಿತ್ತಲಿ (ಥರ್ಮಸ್) ಹಿಡಿದು ಮಾರಾಟ ಮಾಡುವುದನ್ನು ನೋಡಿ ಕೆಲವರು ಆಡಿಕೊಳ್ಳುತ್ತಾರೆ. ಆದರೆ, ಅದ್ಯಾವುದಕ್ಕೂ ಅಜಯಕುಮಾರ ಬೇಸರ ಮಾಡಿಕೊಂಡಿಲ್ಲ. ನಮ್ಮ ಜೀವನ ನಮಗೆ ಎಂದು ನಿತ್ಯ ಚಹಾ ಮಾರುತ್ತಿದ್ದಾರೆ. ಒಂದೊಂದು ದಿನ ಚೆನ್ನಾಗಿಯೇ ಆದಾಯ ಬರುತ್ತದೆ. ಆದರೆ, ಕೆಲವೊಂದು ದಿನ ಬರುವುದಿಲ್ಲ. ಆದರೂ ಜೀವನ ನಿರ್ವಹಣೆಗೆ ಸಮಸ್ಯೆ ಇಲ್ಲ ಎನ್ನುತ್ತಾರೆ.
ಕೊಪ್ಪಳ: ಕೊರೋನಾ ಸೋಂಕಿತರಿಗಾಗಿ ಚಪಾತಿ ಲಟ್ಟಿಸಿದ ಗವಿಶ್ರೀ
ಆರ್ಡರ್ ಕ್ಯಾನ್ಸಲ್:
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಹತ್ತಾರು ಕಾರ್ಯಕ್ರಮಗಳಿಗೆ ಫೋಟೋ ತೆಗೆಯಲು ಬುಕ್ ಆಗಿದ್ದ ಆರ್ಡರ್‌ಗಳು ಕಾನ್ಸಲ್ ಆಗಿವೆ. ಹೀಗಾಗಿ, ಮನೆ ನಿರ್ವಹಣೆ ಮಾಡುವುದು, ತಂದೆಯ ಆರೋಗ್ಯಕ್ಕಾಗಿ ವೆಚ್ಚ ಮಾಡುವುದು ಮನೆಯಲ್ಲಿ ಖಾಲಿ ಕುಳಿತರೆ ಸಾಧ್ಯವಿಲ್ಲ ಎಂದು ಈ ಚಹಾ ಮಾರುವ ವೃತ್ತಿ ಆಯ್ದುಕೊಂಡಿದ್ದೇನೆ. ಮುನ್ನೆಚ್ಚರಿಕೆಯಿಂದ ಮಾಸ್ಕ್ ಹಾಕಿಕೊಂಡರೆ ಚಹಾ ಮಾರಲು ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ. ಪದೇ ಪದೆ ಲಾಕ್‌ಡೌನ್ ಆಗಿದ್ದರಿಂದ ಸಮಸ್ಯೆ ಆಯಿತು. ಮದುವೆಗಳು ರದ್ದಾದವು. ನಡೆದರೂ ಅಷ್ಟಕ್ಕಷ್ಟೇ. ಆದ್ದರಿಂದ ಫೋಟೋಗ್ರಾಫರ್ ಕರೆಯಿಸುವುದಿಲ್ಲ. ಹೀಗಾಗಿ, ಚಹಾ ಮಾರಾಟ ಮಾಡುತ್ತಿದ್ದೇನೆ ಎಂದು ಅಜಯಕುಮಾರ ಹಿರೇಮಠ ತಿಳಿಸಿದ್ದಾರೆ.