ಬೆಂಗಳೂರು [ಜು.20] :   ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಆವರಣದ ಹಾಸ್ಟೆಲ್‌ನಲ್ಲಿ ಅಂತಿಮ ವರ್ಷದ ಸಂಶೋಧನಾ ವಿದ್ಯಾರ್ಥಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

ಪಿಎಚ್‌ಡಿ ವಿದ್ಯಾರ್ಥಿ ಕೆ.ವಿ.ಪವನ್ ಕುಮಾರ್ (26) ಮೃತ ದುರ್ದೈವಿ. ಐಐಎಸ್ಸಿ ಆವರಣದಲ್ಲಿರುವ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಪವನ್ ನೆಲೆಸಿದ್ದರು. ಮಧ್ಯಾಹ್ನ 4 ರ ಸುಮಾರಿಗೆ ಆತನ ಕೊಠಡಿಯಿಂದ ಬರುತ್ತಿದ್ದ ದುರ್ವಾಸನೆಯಿಂದ ಆತಂಕಗೊಂಡ ವಿದ್ಯಾರ್ಥಿಗಳು, ತಕ್ಷಣೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

ಬಳಿಕ ಮೃತನ ಕೊಠಡಿ ಬಾಗಿಲು ಮುರಿದು ಭದ್ರತಾ ಸಿಬ್ಬಂದಿ ಒಳ ಪ್ರವೇಶಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಮೃತ ಪವನ್ ಮೂಲತಃ ಆಂಧ್ರಪ್ರದೇಶ ದವರಾಗಿದ್ದು, ಐಐಎಸ್ಸಿಯಲ್ಲಿ ಅಂತಿಮ ವರ್ಷ ಪಿಎಚ್‌ಡಿ ವ್ಯಾಸಂಗ ಮಾಡಿದ್ದ. ಜೀವನದಲ್ಲಿ ಜಿಗುಪ್ಸೆಗೊಂಡು ಪವನ್‌ಕುಮಾರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಕೊಠಡಿಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನ್ನ ಪೋಷಕರಿಗೆ ಆತ ಕ್ಷಮೆ ಕೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.