ಬೆಂಗಳೂರು[ಸೆ.06]: ನಿತ್ಯ ಬೆಳಗಾದರೆ ಕೈಯಲ್ಲಿ ಮೊಬೈಲ್, ಗಾಡಿಯಲ್ಲಿ ಪೆಟ್ರೋಲ್ ಡಿಸೇಲ್ ಮಾತ್ರ ಇರಲೇಬೇಕು.ಇಲ್ಲಾಂದ್ರೆ ಏನೋ ಕಳೆದುಕೊಂಡ ರೀತಿಯ ಫೀಲ್ ಆಗುತ್ತೆ. ಆದರೆ ದಿನ-ದಿನಕ್ಕೆ ರಾಕೇಟ್ ಸ್ವೀಡ್'ನಲ್ಲಿ ಏರುತ್ತೀರುವ ತೈಲ ಬೆಲೆ ರಾಜಧಾನಿಗರ ನಿದ್ದೆಗೆಡಿಸಿದೆ. ಅಷ್ಟಕ್ಕೂ ಇವತ್ತೀನ ಪೆಟ್ರೋಲ್ , ಡಿಸೇಲ್ ಬೆಲೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆಗಸ್ಟ್ 19ರಂದು ಲೀಟರ್ ಪೆಟ್ರೋಲ್ 79.91 ರೂ. ಮತ್ತು ಡೀಸೆಲ್ 71.30 ರೂ.ಇತ್ತು. ಆ.24ರಂದು ಲೀಟರ್ ಪೆಟ್ರೋಲ್ 80.19 ರೂ. ಮತ್ತು ಡೀಸೆಲ್ 71.39 ರೂ.ಗೆ ಏರಿಕೆಯಾಗಿತ್ತು. ಇಂದು ಕೂಡಾ ಪೆಟ್ರೋಲ್ ದರದಲ್ಲಿ ಸರಾಸರಿ 14 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ ಸರಾಸರಿ 16 ಪೈಸೆ ಏರಿಕೆ ಕಂಡು ಬಂದಿದೆ. ಸದ್ಯ ನಗರದಲ್ಲಿ  ಪೆಟ್ರೋಲ್  ದರ  82.03 ರೂ  ಇದ್ದರೆ, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ ರೂ.76.79 ರೂ.ಇದೆ.  

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ನಿತ್ಯ  ಏರಿಕೆಯಾಗುತ್ತಿದೆ. ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ದರ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ. ಕಳೆದ ಹದಿನೈದು ದಿನಗಳಿಂದ ನಿತ್ಯ ದರ ಹೆಚ್ಚಳವಾಗುತ್ತಿರುವ ಪರಿಣಾಮ ನಗರದಲ್ಲಿ ತೈಲ ಮಾರಾಟ ವ್ಯವಹಾರ ಶೇ.5ರಿಂದ 10ರಷ್ಟು ಕುಸಿದಿದ್ದು, ಡೀಲರ್ ಗಳಿಗೂ ಸಮಸ್ಯೆಯಾಗಿದೆ. 

ಕಂಗೆಟ್ಟಿರುವ ವಾಹನ ಸವಾರರು
ಇದೇ ವೇಳೆ  ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಈಗಾಗಲೇ ವಾಹನ ಸವಾರರು ಕಂಗೆಟ್ಟಿದ್ದಾರೆ. ಇದೇ ರೀತಿ ದರ ಮತ್ತಷ್ಟು ಹೆಚ್ಚಳವಾದರೆ ಲಾರಿ, ಆಟೋ, ಟ್ಯಾಕ್ಸಿ, ಬಸ್, ಸರಕು-ಸಾಗಣೆ ವಾಹನ ಬಾಡಿಗೆ ದರವೂ ಏರಿಕೆಯಾಗಲಿದೆ. ಅಂತೆಯೆ ಕೈಗಾರಿಕೆ, ಸಾರಿಗೆ, ವಾಣಿಜ್ಯೋದ್ಯಮ, ನಿರ್ಮಾಣ ಕ್ಷೇತ್ರ ಸೇರಿದಂತೆ ಇತರೆ ಎಲ್ಲ ವಲಯಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಅಗತ್ಯ ವಸ್ತುಗಳ ದರವೂ ಏರಿಕೆಯಾಗಿ ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ದರ ಏರಿಕೆ ಹೀಗೆ ಮುಂದುವರಿದರೆ, ವಾಹನ ಸವಾರರ ನಿದ್ದೆಗೆಡಿಸಿರುವುದಂತು ಸುಳ್ಳಲ್ಲ.