Asianet Suvarna News Asianet Suvarna News

ಮಂಡ್ಯ ಕೊರೋನಾ ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್‌ ಸೀಲ್‌ಡೌನ್‌

ಮುಂಬೈನಿಂದ ಖರ್ಜೂರ ತುಂಬಿದ್ದ ಕ್ಯಾಂಟರ್‌ ಮೂಲಕ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದ ಕೊರೋನಾ ಸೋಂಕಿತ ವ್ಯಕ್ತಿ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ನಲ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

 

Petrol bunk where covid19 patient stayed is sealed down
Author
Bangalore, First Published Apr 29, 2020, 9:31 AM IST

ಕುಂದಾಪುರ(ಏ.29): ಮುಂಬೈನಿಂದ ಖರ್ಜೂರ ತುಂಬಿದ್ದ ಕ್ಯಾಂಟರ್‌ ಮೂಲಕ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದ ಕೊರೋನಾ ಸೋಂಕಿತ ವ್ಯಕ್ತಿ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ನಲ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ತೆಕ್ಕಟ್ಟೆಪೆಟ್ರೋಲ್‌ ಬಂಕ್‌ ಬಳಿಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಕ್ಯಾಂಟರ್‌ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿ ವಿಶ್ರಾಂತಿ ಪಡೆದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಂಕ್‌ ಸೀಲ್‌ಡೌನ್‌ಗೆ ಸೋಮವಾರ ರಾತ್ರಿಯೇ ಜಿಲ್ಲಾಡಳಿತ ಆದೇಶ ನೀಡಿದೆ.

ಮಲೇಷ್ಯಾದಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

ಈ ಹಿನ್ನೆಲೆ ಮಂಗಳವಾರ ಬೆಳಿಗ್ಗೆ ತೆಕ್ಕಟ್ಟೆಪೆಟ್ರೋಲ್‌ ಬಂಕ್‌ ಸುತ್ತ ಕೋಟ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಪೊಲೀಸ್‌ ಬ್ಯಾಂಡ್‌ ಹಾಕಿ ಸೀಲ್‌ಡೌನ್‌ ಮಾಡಿದರು. ಪುರಸಭೆ ಕಾರ್ಮಿಕರಿಂದ ಪೆಟ್ರೋಲ್‌ ಬಂಕ್‌ ಸುತ್ತ ಔಷಧೀಯ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರು ಪೆಟ್ರೋಲ್‌ ಬಂಕ್‌ ಆಸುಪಾಸಿನ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ತೆಕ್ಕಟ್ಟೆಪೆಟ್ರೋಲ್‌ ಬಂಕ್‌ ಸೀಲ್‌ಡೌನ್‌ ವಿಚಾರದಲ್ಲಿ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಧ್ಯರಾತ್ರಿಯವರೆಗೂ ಕಾರ್ಯಾಚರಣೆ:

ಮಂಡ್ಯದ ಕೊರೋನಾ ಸೋಂಕಿತ ಕುಂದಾಪುರದಲ್ಲಿ ವಿಶ್ರಾಂತಿ ಪಡೆದಿರುವ ಸುದ್ದಿ ಹಬ್ಬುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರಾತ್ರೋರಾತ್ರಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ತಪಾಸಣೆ ನಡೆಸಿ ಮಾಹಿತಿ ಕೊಡಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್‌, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಸೇರಿದಂತೆ ವಿವಿಧ ಠಾಣೆಗಳ ಪೊಲೀಸರು ತಾಲೂಕಿನ ಬೇರೆ ಬೇರೆ ಪೆಟ್ರೋಲ್‌ ಬಂಕ್‌ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ.

ತಬ್ಲಿಘಿ ಘಟನೆ ಪೋಸ್ಟ್ ಹಾಕಿದರವ್ರನ್ನ ಕೆಲಸದಿಂದ ಕಿತ್ತು ಹಾಕಿದ ಕೊಲ್ಲಿ ರಾಷ್ಟ್ರ

11 ಗಂಟೆಯ ಬಳಿಕ ತೆಕ್ಕಟ್ಟೆಸಮೀಪದ ಪೆಟ್ರೋಲ್‌ ಬಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವಾಗ ಖರ್ಜೂರ ಸಾಗಾಟದ ಕ್ಯಾಂಟರ್‌ ಬಂದಿರುವುದು ದೃಢಪಟ್ಟಿದೆ. ಕೂಡಲೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸರು ಪೆಟ್ರೋಲ್‌ ಬಂಕ್‌ ಮಾಲೀಕ ಸೇರಿದಂತೆ ಏಳು ಮಂದಿ ಸಿಬ್ಬಂದಿಗಳನ್ನು ಉಡುಪಿ ಆಸ್ಪತ್ರೆಯಲ್ಲಿ ಕ್ವಾರೆಂಟೈನ್‌ಗೆ ಕಳುಹಿಸಲಾಗಿದೆ.

ಮೂರು ನಿಮಿಷಗಳ ಕಾಲ ಮಾತುಕತೆ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್‌ ಸ್ಕ್ಯಾ‌ನ್‌ ಆಗದ ಹಿನ್ನೆಲೆ ಟೋಲ್‌ ಸಿಬ್ಬಂದಿ ಸ್ಕ್ಯಾ‌ನರ್‌ ಯಂತ್ರ ಕೈಯಲ್ಲಿ ಹಿಡಿದು ನಿರ್ವಾಹಕರ ಜೊತೆ ಮೂರು ನಿಮಿಷಗಳ ಕಾಲ ಮಾತನಾಡಿರುವ ವಿಡಿಯೋ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 3 ಗಂಟೆ 26 ನಿಮಿಷಕ್ಕೆ ಕ್ಯಾಂಟರ್‌ ಆಗಮನವಾಗಿದ್ದು, ಫಾಸ್ಟ್‌ಟ್ಯಾಗ್‌ ಗೊಂದಲ ನಿವಾರಣೆಯಾದ ಬಳಿಕ ಅದು 3.29ಕ್ಕೆ ಅಲ್ಲಿಂದ ಮುಂದೆ ಸಾಗಿದೆ. ಕ್ಯಾಂಟರ್‌ ಟೋಲ್‌ ಪ್ರವೇಶಿಸಿದ ವೇಳೆಯಲ್ಲಿ ಕರ್ತವ್ಯದಲ್ಲಿದ್ದ 6 ಮಂದಿ ಸಿಬ್ಬಂದಿಗಳನ್ನು ಮುಂಜಾಗೃತ ಕ್ರಮವಾಗಿ ಉಡುಪಿಯ ಆಸ್ಪತ್ರೆಯಲ್ಲಿ ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ.

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

ಸೋಂಕಿತ ವ್ಯಕ್ತಿ ಬಂಕ್‌ನಲ್ಲಿ ತಂಗಿದ್ದ ಎನ್ನುವ ಕಾರಣಕ್ಕಾಗಿ ಪರಿಸರದ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಬಂಕ್‌ ವ್ಯವಹಾರ ಮುಗಿಸಿ ಮುಚ್ಚಿದ್ದ ಬಳಿಕ ಬಂದಿದ್ದ ಆ ವ್ಯಕ್ತಿ ಬಂಕ್‌ನ ಹೊರ ಆವರಣದಲ್ಲಿನ ನೀರಿನ ನಳ್ಳಿಗಳನ್ನು ಬಳಸಿರುವ ಸಾಧ್ಯತೆ ಇರುವುದರಿಂದ ಯಾವುದೆ ರೀತಿಯ ಭಯ ಇಲ್ಲ. ಕ್ವಾರೆಂಟೈನ್‌ ಮಾಡಿರುವ ವ್ಯಕ್ತಿಗಳ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ. ವರದಿ ಯಾವುದೇ ರೀತಿಯಲ್ಲಿ ಬಂದರೂ ಅದನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿಗಳು ಕೆ. ರಾಜು ತಿಳಿಸಿದ್ದಾರೆ.

ತೆಕ್ಕಟ್ಟೆಯ ಪ್ರಕರಣದ ಕುರಿತಂತೆ ಕುಂದಾಪುರ ಪೊಲೀಸ್‌ ಉಪ ವಿಭಾಗದ ಜನರು ಯಾವುದೇ ವದಂತಿಗಳಿಗೆ ಕಿವಿಗೊಡುವುದು ಬೇಡ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಎಚ್ಚರಿಕೆಯ ಕ್ರಮವನ್ನು ತೆಗೆದುಕೊಂಡಿದೆ ಎಂದು ಕುಂದಾಪುರ ಎಎಸ್ಪಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

Follow Us:
Download App:
  • android
  • ios