ಹಾಸನ(ಜು.25): ವಾಮಾಚಾರದ ಮೂಲಕ ಸಮಸ್ಯೆ ಪರಿಹರಿಸಿಕೊಡುತ್ತೇನೆಂದು ಜನರನ್ನು ನಂಬಿಸಿ ಹಣ ಕೀಳುತ್ತಿದ್ದ ವ್ಯಕ್ತಿಗಳಿಬ್ಬರನ್ನು ಹಿಡಿದ ಗ್ರಾಮಸ್ಥರು ಥಳಿಸಿ ದಂಡ ಹಾಕಿದ ಘಟನೆ ನಗರದ ಹೊರವಲಯದ ಗಾಣಿಗರಹೊಸಳ್ಳಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಹಾಸನ ನಗರದ ತಣ್ಣೀರುಹಳ್ಳದ ದಿಲೀಪ ಸಿಕ್ಕಿಬಿದ್ದಿರುವ ವಾಮಾಚಾರಿ. ಗಾಣಿಗರ ಹೊಸಳ್ಳಿಯ ಧರ್ಮ ಮತ್ತು ಕುಮಾರ ಎಂಬುವವರು ತಮ್ಮ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಾಮಾಚಾರಿ ದಿಲೀಪನನ್ನು ಸಂಪರ್ಕಿಸಿದ್ದರು. ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ ದಿಲೀಪ ಶಿವಣ್ಣ ಮತ್ತು ಕುಮಾರ್‌ ಅವರಿಂದ ಈವರೆಗೆ ಒಂದೂವರೆ ಲಕ್ಷ ರು. ಪೀಕಿದ್ದಾನೆ.

ನಿಮಗೆ ಆಗದವರು ನಿಮ್ಮ ಮೇಲೆ ವಾಮಾಚಾರ ಮಾಡಿಸಿ ನಿಮ್ಮ ಮನೆ ಬಳಿ ಹಂದಿಯ ತಲೆಯನ್ನು ಹೂತಿದ್ದಾರೆ. ಅದನ್ನು ತೆಗೆದು ಪೂಜೆ ಮಾಡಿಕೊಡುತ್ತೇನೆ. ಆಗ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಹೇಳಿದ್ದ. ಅದರಂತೆ ಧರ್ಮ ಮತ್ತು ಕುಮಾರ ಅವರು ಮಂತ್ರವಾದಿ ದಿಲೀಪ ಹೇಳಿದ ಪೂಜೆಯನ್ನೆಲ್ಲ ಮಾಡಿಸಿ ಈವರೆಗೆ ಒಂದೂವರೆ ಲಕ್ಷ ರು. ಖರ್ಚು ಮಾಡಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿದ ನಂತರವೂ ಸಮಸ್ಯೆ ಬಗೆಹರಿಯದಿದ್ದಾಗ ಅಸಮಾಧಾನಗೊಂಡ ಧರ್ಮ ಮತ್ತು ಕುಮಾರ ಈ ಬಾರಿ ಸಮಸ್ಯೆ ಬಗೆಹರಿಸಿಕೊಡಲೇಬೇಕು ಎಂದು ದಂಬಾಲು ಬಿದ್ದಿದ್ದಾರೆ.

2 ಎಂಗೆಜ್‌ಮೆಂಟ್, 10 ಗರ್ಲ್ ಫ್ರೆಂಡ್...ಚಾಲಾಕಿ ಚತುರನ ರಸಿಕತೆ ಬಟಾಬಯಲು!

ಆಗ ದಿಲೀಪ ನಿಮ್ಮ ಮನೆ ಸಮೀಪ ನಿಮಗೆ ಆಗದವರು ಹಂದಿ ತಲೆಯನ್ನು ಹೂತು ಪೂಜೆ ಮಾಡಿಸಿದ್ದಾರೆ. ಹಾಗಾಗಿ ನಿಮಗೆ ಸಮಸ್ಯೆ ಬಗೆಹರಿಯುತ್ತಿಲ್ಲ. ತಾನು ಪೂಜಿಸಿಕೊಂಡಿರುವ ಕಾಳಿಯ ಉತ್ಸವ ಮೂರ್ತಿಯನ್ನು ತಂದು ಪೂಜೆ ಮಾಡಿ ಹೂತಿರುವ ಹಂದಿ ತಲೆಯನ್ನು ಹೊರತೆಗೆದು ನಿಮ್ಮ ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ್ದ.

ಅದರಂತೆ ಗುರುವಾರ ತಡರಾತ್ರಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಹೇಳಿದ್ದ. ಆತ ಹೇಳಿದಂತೆ ಕುಮಾರ್‌ ಮತ್ತು ಧರ್ಮ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದರು. ತಡರಾತ್ರಿಯಲ್ಲಿ ಪೂಜೆ ಆರಂಭಿಸಿದ ದಿಲೀಪ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಯಿಂದ ಸ್ವಲ್ಪ ದೂರ ಕರೆದುಕೊಂಡುಹೋಗಿ ಇದೇ ಜಾಗದಲ್ಲಿ ಹಂದಿ ತಲೆಯನ್ನು ಹೂಳಲಾಗಿದೆ. ಈ ಸ್ಥಳವನ್ನು ಅಗೆಯಿರಿ ಎಂದು ಹೇಳಿದ್ದಾನೆ. ಆ ಸ್ಥಳವನ್ನು ಮೂರ್ನಾಲ್ಕು ಅಡಿ ಅಗೆದರೂ ಅಲ್ಲಿ ಏನೂ ಸಿಗಲಿಲ್ಲ.

ಆ ಸಂದರ್ಭದಲ್ಲಿ ದೇವರ ಅಡ್ಡೆಯ ಮಧ್ಯೆ ನಿಂತು ಬಲಗೈಲಿ ಗುಂಡಿಗೆ ಬಿಂಬೆಹಣ್ಣು ಎಸೆಯುತ್ತಿದ್ದ ದಿಲೀಪ ಸ್ವಲ್ಪ ಹೊತ್ತಿನ ನಂತರ ಎಡಗೈಲಿ ನಿಂಬೆಹಣ್ಣನ್ನು ಎಸೆಯುತ್ತಿದ್ದ. ಇದನ್ನು ಗಮನಿಸಿದ ಧರ್ಮ ಅವರು ಸೂಕ್ಷ್ಮವಾಗಿ ನೋಡಿದಾಗ ಬಲಗೈಲಿ ಹಂದಿ ತಲೆ ಬುರುಡೆಯನ್ನು ಹಿಡಿದಿರುವುದು ಕಂಡುಬಂದಿದೆ. ಇದರಿಂದ ಅನುಮಾನಗೊಂಡು ದಿಲೀಪನನ್ನು ಹಿಡಿದು ಕೇಳಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ದಿಲೀಪ ಹಾಗೂ ಆತನ ಸಹಾಯಕ ರಾಜಣ್ಣ ಎಂಬಾತನನ್ನು ಹಿಡಿದು ಥಳಿಸಿದ್ದಾರೆ.

ನಿದ್ದೆ ಸಮಯದಲ್ಲಿ ಮೋಸ:

ಸಿಕ್ಕಿಬಿದ್ದಿರುವ ದಿಲೀಪ ತಾನು ಇದೇ ರೀತಿ ಹಲವು ಕಡೆಗಳಲ್ಲಿ ಮೋಸ ಮಾಡಿರುವುದಾಗಿ ಗ್ರಾಮಸ್ಥರ ಮುಂದೆ ಒಪ್ಪಿಕೊಂಡಿದ್ದಾನೆ. ಅದರಲ್ಲೂ ಜನರು ಬೆಳಗಿನ ಜಾವದಲ್ಲೇ ನಿದ್ದೆಯ ಮಂಪರಿನಲ್ಲಿರುವುದರಿಂದ ತಾನು ಬೆಳಗಿನ ಜಾವದಲ್ಲೇ ಪೂಜೆ ಮಾಡುತ್ತಿದ್ದೆ. ಸಂದರ್ಭ ನೋಡಿಕೊಂಡು ತಾನೇ ಆ ಜಾಗದಲ್ಲಿ ವಸ್ತುಗಳನ್ನು ಇಟ್ಟು ಜನರನ್ನು ನಂಬಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.