Asianet Suvarna News Asianet Suvarna News

‘ಪರ ರಾಜ್ಯದಿಂದ ಬಂದವರಿಗೆ ಅನುಮತಿ ಕಡ್ಡಾಯ’

ಪರ ರಾಜ್ಯದಿಂದ ಬಂದು ಸಲೂನ್ ಮಾಡಲು ಅಥವಾ ಸಲೂನ್‌ನಲ್ಲಿ ಕೆಲಸ ನಿರ್ವಹಿಸಲು ತುಮಕೂರು ತಾಲೂಕು ಮತ್ತು ನಗರ ಸವಿತಾ ಸಮಾಜದ ಅನುಮತಿ ಕಡ್ಡಾಯ ಎಂದು ಸಮಾಜದ ಅಧ್ಯಕ್ಷ ಕಟ್‌ವೆಲ್‌ ರಂಗನಾಥ್ ತಿಳಿಸಿದ್ದಾರೆ.

  Permission is mandatory for those coming from Other states  snr
Author
First Published Sep 20, 2023, 9:04 AM IST

  ತುಮಕೂರು :  ಪರ ರಾಜ್ಯದಿಂದ ಬಂದು ಸಲೂನ್ ಮಾಡಲು ಅಥವಾ ಸಲೂನ್‌ನಲ್ಲಿ ಕೆಲಸ ನಿರ್ವಹಿಸಲು ತುಮಕೂರು ತಾಲೂಕು ಮತ್ತು ನಗರ ಸವಿತಾ ಸಮಾಜದ ಅನುಮತಿ ಕಡ್ಡಾಯ ಎಂದು ಸಮಾಜದ ಅಧ್ಯಕ್ಷ ಕಟ್‌ವೆಲ್‌ ರಂಗನಾಥ್ ತಿಳಿಸಿದ್ದಾರೆ.

ತುಮಕೂರು ತಾಲೂಕು ನಗರ ಸವಿತಾ ಸಮಾಜದ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಹೊರ ರಾಜ್ಯಗಳಿಂದ ಆಗಮಿಸಿ ನಮ್ಮ ರಾಜ್ಯದಲ್ಲಿ ಆಗಮಿಸಿ ನಮ್ಮ ಕುಲ ಕಸಬನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದರು

ಕೋವಿಡ್ ನಂತರ ನಮ್ಮ ಕರ್ನಾಟಕ ರಾಜ್ಯದೊಳಗೆ ಬಿಹಾರ, ಉತ್ತರ ಪ್ರದೇಶ, ಬಾಂಗ್ಲದೇಶ ಸೇರಿದಂತೆ ನಮ್ಮ ದೇಶದ ಉತ್ತರ ಭಾಗದ ಕಡೆಯಿಂದ ಆಗಮಿಸಿ ಕೆಲವರು ಸಲೂನ್‌ಗಳನ್ನು ತೆರೆದಿದ್ದಾರೆ, ಇನ್ನೂ ಕೆಲವರು ಸಲೂನ್‌ಗಳಲ್ಲಿ ಕೆಲಸ ನಿರ್ವಹಿಸುತ್ತಾ ಬರುತ್ತಿದ್ದಾರೆ. ಬರೀ ಅವರ ಪಾಡಿಗೆ ಕೆಲಸ ನಿರ್ವಹಿಸುತ್ತಿದ್ದರೆ ಯಾವುದೇ ರೀತಿಯಾದ ಸಮಸ್ಯೆಗಳು ಆಗುತ್ತಿರಲಿಲ್ಲ, ಇವರುಗಳು ಇಲ್ಲಿನ ಜನರಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುವುದಲ್ಲದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಕಣ್ಣಿಗೆ ಕಾಣದಂತೆ ನಿರ್ವಹಿಸುತ್ತಿದ್ದಾರೆ ಎಂಬ ಸಂಶಯವು ಮೂಡಿದೆ ಎಂದರು.

ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಬಂದು ನಮ್ಮ ಕಸುಬನ್ನು ಮಾಡುತ್ತಿರುವವರ ವಿರುದ್ಧ ಸಾಕಷ್ಠು ದೂರುಗಳು ಬರುತ್ತಿರುವುದರ ಪ್ರಯುಕ್ತ ಸಭೆ ಸೇರಿ ಎಲ್ಲರ ಸಹಮತದೊಂದಿಗೆ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅದರಂತೆ ಇನ್ಮುಂದೆ ಯಾವುದೇ ವ್ಯಕ್ತಿಯು ಹೊರರಾಜ್ಯದಿಂದ ಬಂದು ಸ್ಥಳೀಯವಾಗಿ ಸಲೂನ್‌ ತೆರೆಯುವುದಾಗಲೀ, ಸಲೂನ್‌ಗಳಲ್ಲಿ ಕೆಲಸ ನಿರ್ವಹಿಸುವುದಾಗಲೀ ಮಾಡಬೇಕಾದರೆ ಮೊಟ್ಟಮೊದಲನೆಯದಾಗಿ ಸ್ಥಳೀಯ ಸವಿತಾ ಸಮಾಜಕ್ಕೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ತಮ್ಮ ಮೂಲ ದಾಖಲಾತಿಗಳನ್ನು ಹಾಗೂ ಸ್ಥಳೀಯ ಸಂಸ್ಥೆ ನಿಗದಿಪಡಿಸಿರುವ ಕೆಲವು ಅರ್ಜಿ ಫಾರಂಗಳನ್ನು ಭರ್ತಿ ಮಾಡಿ, ಇಲ್ಲಿ ನೋಂದಾಯಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ದೀರ್ಘ ಕಾಲವಾಗಿ ಕಾರ್ಯ ನಿರ್ವಹಿಸದೇ ಅಲ್ಪ ಸಮಯ ಮಾತ್ರ ಕಾರ್ಯನಿರ್ವಹಿಸಿ, ಕೆಲ ಅಹಿತಕರ ಘಟನೆಗಳಲ್ಲಿ ಭಾಗಿಗಳಾಗಿ, ಇನ್ನೂ ಕೆಲವರು ಸ್ಥಳೀಯರೊಂದಿಗೆ ಗಲಾಟೆ, ಗದ್ದಲಗಳನ್ನು ಮಾಡಿಕೊಂಡು ಪರ ಸ್ಥಳಗಳಿಗೆ ಪರಾರಿಯಾಗುತ್ತಿದ್ದಾರೆ, ಇಂತಹ ಘಟನೆಗಳು ನಡೆಯಬಾರದು ಎಂಬ ಸದುದ್ದೇಶದಿಂದ ಈ ರೀತಿಯಾದ ನಿಯಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಇನ್ನುಳಿದಂತೆ ಸಾರ್ವಜನಿಕರು ಸಹ ಪರ ರಾಜ್ಯಗಳಿಂದ ಬಂದು ಇಲ್ಲಿ ಸಲೂನ್ ನಡೆಸಲು ಅಂಗಡಿ ಮಳಿಗೆ, ಕಟ್ಟಡ, ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಧಾವಿಸಿದರೆ ಆ ಕೂಡಲೇ ಅವರಿಂದ ನಮ್ಮ ಸ್ಥಳಿಯ ಸವಿತಾ ಸಮಾಜದ ವತಿಯಿಂದ ಪರವಾನಗಿ , ಅನುಮತಿ ಪತ್ರವನ್ನು ಪಡೆದುಕೊಂಡು ಅದನ್ನು ನಮ್ಮಲ್ಲಿ ಖಚಿತಪಡಿಸಿಕೊಂಡ ನಂತರವಷ್ಟೆ ಅವರಿಗೆ ಬಾಡಿಗೆ /ಲೀಸ್, ಇತ್ಯಾದಿಯಾಗಿ ನೀಡಬೇಕಾಗುತ್ತದೆ ಎಂದರು.

ತಾವುಗಳು ಪಡೆಯದೇ ಇದ್ದರೇ ಅವರಿಂದ ತಮಗೆ ಯಾವುದೇ ರೀತಿಯಾದ ತೊಂದರೆಯುಂಟಾದಲ್ಲಿ ನಮ್ಮ ಸವಿತಾ ಸಮಾಜ ಹೊಣೆಯನ್ನು ಹೊರಲು ಸಾಧ್ಯವಿಲ್ಲ. ಈ ಕುರಿತು ಕಳೆದ 7 ತಿಂಗಳುಗಳಿಂದ ಸಂಘದಲ್ಲಿ ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದು, ಈ ಒಂದು ತೀರ್ಮಾನಕ್ಕೆ ನಮ್ಮ ಸಮಾಜದ ಎಲ್ಲ ಬಂಧುಗಳ ಸಹಕಾರವೂ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುರೇಶ್ (ಪ್ರತಿನಿಧಿ), ಪದಾಧಿಕಾರಿಗಳಾದ ಟಿ.ಡಿ.ಪುನೀತ್, ಕೆ.ಉಮೇಶ್, ಪ್ರವೀಣ್, ಪವನ್, ಡಿ.ರಂಗನಾಥ್, ಗೋಪಾಲ್, ರಾಜ್‌ಕುಮಾರ್, ಯಶ್ವಂತ್, ವಿಜಯ್‌ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios