ಈ ಚಿತ್ರಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಪ್ರತಿಯೊಂದು ಚಿತ್ರಗಳು ವಿಭಿನ್ನವಾಗಿದ್ದು, ಒಂದೊಂದು ಚಿತ್ರಗಳು ಸಾವಿರ ಕತೆ ಹೇಳುವ ಜತೆಗೆ ಚಿಂತನೆಗೆ ಹಚ್ಚುತ್ತವೆ. ಗಾಂಧೀಜಿ ಅವರು ತಮ್ಮ ಜೀವನದೂದ್ದಕ್ಕೂ ಮಾಡಿದ ಅವಿರತ ಹೋರಾಟದ ಪ್ರತಿಯೊಂದು ಮಗ್ಗಲುಗಳನ್ನು ಬಿಂಬಿಸುವ ಈ ಚಿತ್ರಗಳಲ್ಲಿ ಅಗಾಧವಾದ ಸೆಳೆತಗಳಿವೆ.
- ಮಲ್ಲಿಕಾರ್ಜುನ ಕರಿಯಪ್ಪನವರ
ಹುಬ್ಬಳ್ಳಿ[ಅ.02]: ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿರುವ ಗಾಂಧಿ ದರ್ಶನ ಹಾಲ್‌ಗೆ ಭೇಟಿ ನೀಡಿದರೆ ಮಹಾತ್ಮ ಗಾಂಧೀಜಿ ಅವರೊಂದಿಗೆ ಮಾತನಾಡಿದ ಅನುಭವ ಸಿಗುತ್ತದೆ.

ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಎಂದರೆ ನೆನಪಾಗುವುದು ಕನ್ನಡಕ ತೊಟ್ಟು ನಗುತ್ತಿರುವ ಮತ್ತು ಶಾಂತ ಮುಖದ ಅರೆಬೆತ್ತಲೆ ಅಜ್ಜ. ಆದರೆ, 1888ರಲ್ಲಿ ಲಂಡನ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದ ಗಳಿಗೆ, ಆನಂತರ ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳಿಗಾಗಿ 1893ರಿಂದ 1914ರ ವರೆಗೆ ಹೋರಾಟ, ಆಮೇಲೆ ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಶಾಂತಿಯಿಂದ ಇರುವಂತೆ ಕೋಪದಿಂದ ಬಾಯಿ ಮೇಲೆ ಬೆರಳಿಟ್ಟು ಜನರಿಗೆ ಆಜ್ಞೆ ಮಾಡಿದ, ಮಕ್ಕಳೊಂದಿಗೆ ಆಟವಾಡಿದ್ದು, ನಿರ್ಗತಿಕ ಮಹಿಳೆಯೊಬ್ಬರನ್ನು ಭೇಟಿಯಾಗಿ ಆಕೆಗೆ ಧೈರ್ಯ ತುಂಬಿದ್ದು, ದಕ್ಷಿಣ ಆಫ್ರಿಕಾದಲ್ಲಿನ ಕರಿಯರು ಮತ್ತು ಬಿಳಿಯರ ನಡುವಿನ ತಾರತಮ್ಯದ ವಿರುದ್ಧ ಆರಂಭಿಸಿದ ಸತ್ಯಾಗ್ರಹದಿಂದ ಹಿಡಿದು ಬ್ರಿಟಿಷರು ಭಾರತ ಬಿಟ್ಟು ತೊಲಗಿದ ಆನಂತರ ಅವರು ಅಸ್ತಂಗತವಾದ ಸಂದರ್ಭದಲ್ಲಿನ ಮೋಹನ್ ದಾಸ್ ಕರಂಚಂದ್ರ ಗಾಂಧಿ ಅವರ ಭಾವಚಿತ್ರ ನೋಡುತ್ತಾ ನಿಂತರೆ, ಸ್ವಂತಂತ್ರ ಹೋರಾಟದಲ್ಲಿ ಬ್ರಿಟಿಷರ ದರ್ಪವನ್ನು ಭಾರತೀಯರು ಹೇಗೆ ಎದುರಿಸಿದರು ಎಂಬ ಚಿತ್ರಣ ಮನದ ಮುಂದೆ ಸುಳಿಯುತ್ತದೆ.

ಮನ ಸೆಳೆಯುವ ಗಾಢ ಚಿತ್ರಗಳು: ಈ ಚಿತ್ರಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಪ್ರತಿಯೊಂದು ಚಿತ್ರಗಳು ವಿಭಿನ್ನವಾಗಿದ್ದು, ಒಂದೊಂದು ಚಿತ್ರಗಳು ಸಾವಿರ ಕತೆ ಹೇಳುವ ಜತೆಗೆ ಚಿಂತನೆಗೆ ಹಚ್ಚುತ್ತವೆ. ಗಾಂಧೀಜಿ ಅವರು ತಮ್ಮ ಜೀವನದೂದ್ದಕ್ಕೂ ಮಾಡಿದ ಅವಿರತ ಹೋರಾಟದ ಪ್ರತಿಯೊಂದು ಮಗ್ಗಲುಗಳನ್ನು ಬಿಂಬಿಸುವ ಈ ಚಿತ್ರಗಳಲ್ಲಿ ಅಗಾಧವಾದ ಸೆಳೆತಗಳಿವೆ.

ನಿರಾಶ್ರಿತರೊಂದಿಗೆ ನಡೆಸಿದ ಚರ್ಚೆ, ಸದಾ ರೈಲಿನ 3ನೇ ದರ್ಜೆಯಲ್ಲೇ ಮಾಡುತ್ತಿದ್ದ ಪ್ರಯಾಣ, ದಮ್ ಮದ್ ಜೈಲಿನಲ್ಲಿದ್ದ ರಾಜಕೀಯ ಕೈದಿಗಳನ್ನು ಸಂದರ್ಶನ ಮಾಡಿದ ಕ್ಷಣ! ಬೆಳಗಿನ ನಡಿಗೆ, ಗಣ್ಯರೊಂದಿಗಿನ ಸಭೆಗಳು, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ ಗಾಂಧೀಜಿ ಅವರ ಆವಭಾವಗಳನ್ನೊಳಗೊಂಡ 70ಕ್ಕೂ ಭಾವಚಿತ್ರಗಳು ನೋಡುಗರ ಮನಸೂರೆ ಗೊಳಿಸುತ್ತವೆ. ಗಾಂಧೀಜಿ ತಂದೆ ಕರಂಚಂದ್ರ ಗಾಂಧಿ ಹಾಗೂ ತಾಯಿ ಪುತಲಿಬಾಯಿ ಅವರ ಭಾವಚಿತ್ರಗಳು ಇಲ್ಲಿ ಲಭ್ಯ.

ಪ್ರಾರ್ಥನೆ- ಸಭೆಗೆ ಮೀಸಲಾದ ಹಾಲ್: ರಾಷ್ಟ್ರಧ್ವಜಗಳನ್ನು ನಿರ್ಮಿಸುವ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿರುವ ಈ ಗಾಂಧಿ ದರ್ಶನದ ಹಾಲ್ ಸಂಸ್ಥೆಯ ಉದ್ಯೋಗಿಗಳ ಪ್ರಾರ್ಥನೆ ಮತ್ತು ಪ್ರಮುಖ ಸಭೆಗಳಿಗೆ ಮೀಸಲಾಗಿದೆ. ನಿತ್ಯ ಬೆಳಗ್ಗೆ 10 ಗಂಟೆಗೆ ಇಲ್ಲಿ ಸೇರುವ ಸಂಸ್ಥೆಯ ಸಿಬ್ಬಂದಿ ಪ್ರಾರ್ಥನೆ ಸಲ್ಲಿಸಿ ತಮ್ಮ ಕಾರ್ಯಕ್ಕೆ ತೆರಳುತ್ತಾರೆ. ಆನಂತರ ಸಂಸ್ಥೆಯ ಪ್ರಮುಖ ಸಭೆಗಳಿದ್ದಾಗಲೇ ಈ ಹಾಲ್ ತೆರೆಯಲಾಗುತ್ತದೆ. ಹಾಲ್‌ನ ಸುತ್ತಲೂ ಇರುವ ನಾಲ್ಕು ಗೋಡೆಗಳಿಗೂ ಈ ಛಾಯಾಚಿತ್ರಗಳನ್ನು ಹಾಕಲಾಗಿದೆ.

ಖಾದಿ ಭೀಷ್ಮ ವೆಂಕಟೇಶ್‌ರಿಂದ ಸಂಗ್ರಹ:
ಹುಬ್ಬಳ್ಳಿಯ ಸ್ವತಂತ್ರ ಹೋರಾಟಗಾರ, ಖಾದಿ ಫೆಡರೇಷನ್ ಸಂಸ್ಥಾಪಕ, ಕರ್ನಾಟಕ ಖಾದಿ ಭೀಷ್ಮ ವೆಂಕಟೇಶ್ ಮಾಗಡಿ ಈ ಅಪರೂಪದ ಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಸ್ವತಃ ತಾವೇ ಸ್ವತಂತ್ರ ಹೋರಾಟಗಾರರು ಮತ್ತು ಗಾಂಧಿವಾದಿಯಾಗಿದ್ದ ಮಾಗಡಿ ಅವರು, ಆಗಿನ ಕಾಲದಲ್ಲಿ ಇಷ್ಟೊಂದು ಛಾಯಾಚಿತ್ರ ಗಳನ್ನು ಸಂಗ್ರಹಿಸಿದ್ದಾರೆ. ವೆಂಕಟೇಶ್ ಅವರ ಸೇವೆ ಬರೀ ಸ್ವತಂತ್ರ ಹೋರಾಟ ಮತ್ತು ಗಾಂಧೀಜಿ ಅವರ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ.
ಗಾಂಧೀಜಿ ಅವರ ಕನಸಾಗಿದ್ದ ಖಾದಿಗೆ ಗ್ರಾಮೋದ್ಯೋಗ ನಡೆಸಲು ಬೇಕಾದ ಎಂಟು ಎಕರೆ ಜಾಗವನ್ನು ಸಹ ಅವರು ಬೆಂಗೇರಿಯಲ್ಲಿ ದಾನವಾಗಿ ನೀಡಿದ್ದಾರೆ.

ಛಾಯಾಚಿತ್ರಗಳ ಬೇಕಿದೆ ಕಾಯಕಲ್ಪ: ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಹೋರಾಟಕ್ಕಿಳಿದ ಸಮಯದಿಂದ ಹಿಡಿದು, ಜನವರಿ 30, 1948ರ ಅಂತಿಮ ಯಾತ್ರೆಯವರೆಗೆ ಈ ಅಪರೂಪದ ಛಾಯಾಚಿತ್ರ ಗಳನ್ನು ಸರ್ವಕಾಲ ರಕ್ಷಿಸುವಂತಹ ವ್ಯವ್ಯಸ್ಥೆ ಮಾಡುವ ಅಗತ್ಯವಿದೆ. ಈ ಗಾಂಧಿ ದರ್ಶನ್ ಹಾಲ್ ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಸೋರುತ್ತಿದೆ. ಹೀಗಾಗಿ ಈ ಛಾಯಾಚಿತ್ರಗಳು ಇಲ್ಲಿಯೇ ಇದ್ದರೆ ಕಲವೇ ದಿನಗಳಲ್ಲಿ ಹಾಳಾಗುವುದು ಗ್ಯಾರಂಟಿ.
