Kodagu: ವಿರಾಜಪೇಟೆ ಪಟ್ಟಣದ ಮಗ್ಗುಲಲ್ಲಿಯೇ ಹುಲಿ ಓಡಾಟ ಆತಂಕದಲ್ಲಿ ಜನರು
ಕೊಡಗು ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಕಾಡಂಚಿನಲ್ಲಿ ಓಡಾಡುತ್ತಿದ್ದ ಹುಲಿಗಳು ಇದೀಗ ನಾಡಿಗೆ ಬರಲು ಆರಂಭಿಸಿವೆ. ವಿರಾಜಪೇಟೆ ಪಟ್ಟಣದ ಹೊರ ವಲಯದಲ್ಲಿ ಹುಲಿ ಸಂಚರಿಸುತ್ತಿದ್ದು ಅದರಲ್ಲೂ ಹೆದ್ದಾರಿಯಲ್ಲಿ ಓಡಾಡುತ್ತಿರುವುದು ಜನರನ್ನು ಭಯ ಭೀತಗೊಳಿಸಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.19): ಕೊಡಗು ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಕಾಡಂಚಿನಲ್ಲಿ ಓಡಾಡುತ್ತಿದ್ದ ಹುಲಿಗಳು ಇದೀಗ ನಾಡಿಗೆ ಬರಲು ಆರಂಭಿಸಿವೆ. ವಿರಾಜಪೇಟೆ ಪಟ್ಟಣದ ಹೊರ ವಲಯದಲ್ಲಿ ಹುಲಿ ಸಂಚರಿಸುತ್ತಿದ್ದು ಅದರಲ್ಲೂ ಹೆದ್ದಾರಿಯಲ್ಲಿ ಓಡಾಡುತ್ತಿರುವುದು ಜನರನ್ನು ಭಯ ಭೀತಗೊಳಿಸಿದೆ. ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ಮಡಿಕೇರಿ ಮತ್ತು ವಿರಾಜಪೇಟೆಯ ಹೆದ್ದಾರಿಯನ್ನು ದಾಟಿ ಮುತ್ತಪ್ಪ ದೇವಸ್ಥಾನದ ಕಡೆಗೆ ಹೋಗಿದೆ. ಹೀಗಾಗಿ ಹೆದ್ದಾರಿಯಲ್ಲಿ ಜನರು ನಡೆದುಕೊಂಡು ಓಡಾಡುವ ಮಾತಿರಲಿ, ವಾಹನಗಳಲ್ಲೂ ಓಡಾಡುವುದಕ್ಕೂ ಭಯಪಡುವಂತೆ ಆಗಿದೆ.
ಇನ್ನು ಎಷ್ಟೋ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ನಡೆದುಕೊಂಡೇ ಓಡಾಡಬೇಕಾಗಿದ್ದು ಇದೀಗ ವಿದ್ಯಾರ್ಥಿಗಳು ಮತ್ತು ಜನರು ಮನೆಯಿಂದ ಹೊರಗೆ ಬರುವುದಕ್ಕೆ ಭಯಪಡುತ್ತಿದ್ದಾರೆ. ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ವಿರಾಜಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಲಿಯನ್ನು ಕಾಡಿಗೆ ಓಡಿಸುವುದಕ್ಕಾಗಿ ಕೂಂಬಿಂಗ್ ನಡೆಸುತ್ತಿದ್ದಾರೆ. ಹೆದ್ದಾರಿ ಸಮೀಪದಲ್ಲೇ ಇರುವ ಅಯ್ಯಪ್ಪ ದೇವರ ಕಾಡಿನಲ್ಲಿ ಇರಬಹುದೆಂದು ಕೂಂಬಿಂಗ್ ಮಾಡುವ ವೇಳೆ ಹುಲಿ ಕಾಡು ಹಂದಿಯನ್ನು ಬೇಟೆಯಾಡಿ ಬಹುತೇಕ ತಿಂದು ಹಾಕಿದೆ. ಕಾಡು ಹಂದಿಯ ಕಳೇಬರದ ಉಳಿದ ಭಾಗಗಳು ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಹೊಸತನಗಳು: ಸಚಿವ ಚಲುವರಾಯಸ್ವಾಮಿ
ಹೀಗಾಗಿ ಹುಲಿ ಬಹುತೇಕ ಇದೇ ವ್ಯಾಪ್ತಿಯಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ತಲಾ 15 ಸಿಬ್ಬಂದಿಯಂತೆ ಅರಣ್ಯ ಇಲಾಖೆ 3 ತಂಡಗಳನ್ನಾಗಿ ಮಾಡಿಕೊಂಡು ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿದೆ. ಚಿಕ್ಕಪೇಟೆ, ಮಗ್ಗುಲ, ಕುಕ್ಲೂರು ಮತ್ತು ಬೇಟೋಳಿ ಗ್ರಾಮಗಳ ಸುತ್ತಮುತ್ತಲಿನಲ್ಲೇ ಹುಲಿ ಓಡಾಡುತ್ತಿದ್ದು ಜನರು ಹೊರಗೆ ಬರುವುದಕ್ಕೂ ಭಯಪಡುತ್ತಿದ್ದಾರೆ. ಹೀಗಾಗಿಯೇ ಅರಣ್ಯ ಇಲಾಖೆ ಶತಾಯ ಗತಾಯ ಹುಲಿಯನ್ನು ಕಾಡಿಗೆ ಓಡಿಸಲೇಬೇಕು. ಇಲ್ಲವೇ ಅರಿವಳಿಕೆ ನೀಡಿ ಸೆರೆಹಿಡಿದು ಅರಣ್ಯ ವ್ಯಾಪ್ತಿಗೆ ಸ್ಥಳಾಂತರಿಸಬೇಕು ಎಂದು ಕಾರ್ಯಾಚರಣೆ ನಡೆಸುತ್ತಿದೆ.
ಈ ಕುರಿತು ಮಾತನಾಡಿರುವ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಮಾಕುಟ್ಟ ಅಥವಾ ನಾಗರಹೊಳೆ ಅರಣ್ಯ ಪ್ರದೇಶದಿಂದ ಹುಲಿ ಬಂದಿರುವ ಸಾಧ್ಯತೆ ಇದೆ. ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿ ಇರುವ ಗ್ರಾಮಗಳ ಸುತ್ತಮುತ್ತ ಇದು ಓಡಾಡಿಕೊಂಡಿದ್ದು ಅದನ್ನು ಕಾಡಿಗೆ ಓಡಿಸುವುದಕ್ಕಾಗಿ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ. ಕೂಂಬಿಂಗ್ ನಡೆಸಲಾಗುತ್ತಿದೆಯಾದರೂ ಹುಲಿ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಹುಲಿಯ ಹೆಜ್ಜೆ ಗುರುತ್ತು ಮತ್ತು ಅದು ಕಾಡುಹಂದಿಯನ್ನು ಕೊಂದು ತಿಂದಿದೆ. ಅದನ್ನು ಕಾಡಿಗೆ ಓಡಿಸಲು ಸಾಧ್ಯವಾಗದಿದ್ದರೆ ಈಗಾಗಲೇ ಅದಕ್ಕೆ ಅರಿವಳಿಕೆ ನೀಡಿ ಸೆರೆ ಹಿಡಿಯುವುದಕ್ಕೂ ಅನುಮತಿ ದೊರೆತ್ತಿದೆ.
ನಾನು ರಾಜಕೀಯಕ್ಕೆ ಕಾಲಿಟ್ಟರೆ ಪರಿಸ್ಥಿತಿ ತುಂಬಾ ಭೀಕರವಾಗಿರುತ್ತದೆ: ನಟ ಮಹೇಶ್ ಬಾಬು
ಸದ್ಯ ಕಾಫಿ ಹಣ್ಣಾಗಿದ್ದು ತೋಟಗಳಲ್ಲಿ ಆನೆಗಳನ್ನು ಬಳಸಿ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಆನೆಗಳನ್ನು ಬಳಸಿ ಕಾರ್ಯಾಚರಣೆ ಮಾಡಲಾಗುವುದು ಎಂದಿದ್ದಾರೆ. ಹುಲಿ ಇಲ್ಲಿಯೇ ಓಡಾಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅದನ್ನು ಸೆರೆ ಹಿಡಿಯಬೇಕು. ಸದ್ಯ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡುತ್ತಿದೆ. ಆದರೆ ಅದನ್ನು ಇನ್ನಷ್ಟು ತೀವ್ರಗೊಳಿಸಬೇಕು. ಹುಲಿ ಇಲ್ಲಿ ಓಡಾಡಿರುವುದು ಗೊತ್ತಾದ ಬಳಿಕ ಮುತ್ತಪ್ಪ ದೇವಾಲಯಕ್ಕೆ ಸಂಜೆಯ ವೇಳೆ ಪೂಜೆ ಮಾಡುವುದನ್ನೇ ನಾವು ನಿಲ್ಲಿಸಿದ್ದೇವೆ ಎಂದು ಸ್ಥಳೀಯರಾದ ಹರ್ಷ ಅವರು ಹೇಳಿದ್ದಾರೆ.