ಉಡುಪಿ(ಮೇ 20): ಮುಂಬೈಯಿಂದ ಉಡುಪಿಗೆ ಬರಬೇಕಾಗಿದ್ದ 31 ಮಂದಿಗೆ ಮಧ್ಯವರ್ತಿಯೊಬ್ಬರು ಮೋಸ ಮಾಡಿದ್ದು, ಅವರೆಲ್ಲರೂ ಬೆಳಗಾವಿ ಗಡಿ ನಿಪ್ಪಾಣಿಯಲ್ಲಿ ಸೋಮವಾರ ಮಧ್ಯರಾತ್ರಿ 2 ಗಂಟೆಯಿಂದ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಸ್‌ನಲ್ಲಿ 8 ತಿಂಗಳ ಗರ್ಭಿಣಿ, ಎಳೆಯ ಮಕ್ಕಳು, 80 ವರ್ಷ ಮೀರಿದ ವೃದ್ಧರೂ ಇದ್ದಾರೆ.

ಮುಂಬೈಯ ಹೊಟೇಲ್‌ಗಳಲ್ಲಿ ಕೆಲಸ ಮಾಡುವವರು ಹಾಗೂ ಅವರ ಕುಟುಂಬಸ್ಥರು ಸೋಮವಾರ ಬೆಳಗ್ಗೆ ಖಾಸಗಿ ಬಸ್‌ನಲ್ಲಿ ಉಡುಪಿಗೆ ಹೊರಟಿದ್ದರು. ಮಧ್ಯವರ್ತಿ ಮಹಿಳೆಯೊಬ್ಬರು ಒಬ್ಬರಿಗೆ ತಲಾ 4,500 ರು.ಗಳಂತೆ 1.38 ಲಕ್ಷ ರು. ಪಡೆದಿದ್ದು, ಗಡಿ ಗಾಟುವುದಕ್ಕೆ ಬೇಕಾದ ಇ-ಪಾಸ್‌ ಮಾಡಿ ಕೊಡುವುದಾಗಿ ಹೇಳಿದ್ದರು.

ಮೂಡುಬಿದಿರೆ ಅರ್ಚಕರ ಆನ್‌ಲೈನ್ ಕ್ವಿಜ್‌ಗೆ ಭರ್ಜರಿ ರೆಸ್ಪಾನ್ಸ್

ಆಕೆಯನ್ನು ನಂಬಿ ಬಸ್‌ನಲ್ಲಿ ಬಂದ ಈ ಪ್ರಯಾಣಿಕರನ್ನು ಕರ್ನಾಟಕ ರಾಜ್ಯದ ಪಾಸ್‌ ಇಲ್ಲದೇ ಇದ್ದುದರಿಂದ ಬೆಳಗಾವಿ ಜಿಲ್ಲಾಡಳಿತ ತಡೆಹಿಡಿದಿದೆ. ಆಗಲೇ ಈ ಪ್ರಯಾಣಿಕರಿಗೆ ಮಧ್ಯವರ್ತಿ ಮಹಿಳೆ ಮಹಾರಾಷ್ಟ್ರದ ಪಾಸ್‌ ಮಾಡಿಸಿದ್ದು, ಆದರೆ ಕರ್ನಾಟಕ ರಾಜ್ಯದ ಪಾಸ್‌ ಮಾಡಿಸಿಲ್ಲ ಎಂದು ಗೊತ್ತಾಗಿದ್ದು. ಆಕೆಯನ್ನು ವಿಚಾರಿಸಿದಾಗ ತನಗೇನೂ ಗೊತ್ತಿಲ್ಲ ಎನ್ನುತಿದ್ದಾರೆ ಎಂದು ಬಸ್‌ನಲ್ಲಿದ್ದವರು ಹೇಳುತ್ತಿದ್ದಾರೆ. ಉಡುಪಿ ಜಿಲ್ಲಾಡಳಿತ ಒಪ್ಪಿದರೆ ಮುಂದಕ್ಕೆ ಹೋಗಲು ಅವಕಾಶ ನೀಡುವುದಾಗಿ ಬೆಳಗಾವಿ ಜಿಲ್ಲಾಡಳಿತ ಹೇಳಿದೆ.

ಹಬ್ಬ ಯಕ್ಷಗಾನದ ಸದಲ್ಲಿಲ್ಲ, ಆನ್ ಲೈನ್ ಜಾತ್ರೆ ಇದೆಯಲ್ಲ

ಆದರೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಿಂದ ಕೊರೋನಾ ಹೆಚ್ಚುತ್ತಿದ್ದು, ಸರ್ಕಾರ ಸೋಮವಾರ ರಾತ್ರಿಯಿಂದಲೇ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವುದನ್ನು ನಿಷೇಧಿಸಿದೆ. ಆದ್ದರಿಂದ ಉಡುಪಿ ಜಿಲ್ಲಾಡಳಿತ ಕೂಡ ಅಸಹಾಯಕತೆ ವ್ಯಕ್ತಪಡಿಸಿದೆ.

ಮಂಗಳವಾರ ಇಡೀ ದಿನ ಊಟ ನೀರು ಇಲ್ಲದೆ ಕಂಗಲಾದ ಈ ಪ್ರಯಾಣಿಕರು, ಈಗ ತಮ್ಮ ಅಳಲನ್ನು ವೀಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ತಾತ್ಕಾಲಿಕವಾಗಿ ಬೆಳಗಾವಿ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿದ್ದು, ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕಾಯಲಾಗುತ್ತಿದೆ.