ಉಡುಪಿ(ಮೇ.03): ಹೊರರಾಜ್ಯ - ಹೊರಜಿಲ್ಲೆಯಿಂದ ಉಡುಪಿಗೆ ಬರುವವರಿಗೆ ಮೇ 4ರಿಂದ ಅನುಮತಿ ನೀಡಲಾಗುತ್ತಿದೆ. ಆದರೆ, ಹೀಗೆ ಬರುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈಟ್‌ಗೆ ಒಳಪಡುವುದಕ್ಕೆ ಸಿದ್ಧರಿರಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ, ಆದ್ದರಿಂದ ನಾಗರಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಇನ್ನು ಮುಂದೆಯು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೊರರಾಜ್ಯ- ಹೊರಜಿಲ್ಲೆಯಿಂದ ಆಗಮಿಸುವವರನ್ನು ಉಡುಪಿಯ ಎಂಜಿಎಂ ಮೈದಾನದಲ್ಲಿ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸಂಬಂಧಪಟ್ಟತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುವುದು. ಅಲ್ಲಿ ಅವರನ್ನು ಸರ್ಕಾರಿ ಕ್ವಾರಂಟೈನ್‌ಗಾಗಿ ವಿವಿಧ ಹಾಸ್ಟೆಲುಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಹಣ ಇದ್ದವರಿಗೆ ಹೊಟೇಲು:

ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ ಆಗಬಯಸುವವರಿಗೂ ವ್ಯವಸ್ಥೆ ಇದ್ದು, ಹೋಟೆಲ್‌ನ ವೆಚ್ಚವನ್ನು ಸ್ವತಃ ಭರಿಸಬೇಕು ಎಂದವರು ತಿಳಿಸಿದ್ದಾರೆ. ಅಲ್ಲದೆ, ಪ್ರತಿ ಪಂಚಾಯಿತಿಗಳಲ್ಲಿ ಹೊರರಾಜ್ಯದಿಂದ ಬರುವ ಕನಿಷ್ಠ 25 ಜನರನ್ನು ಕ್ವಾರಂಟೈನ್‌ ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದಿದ್ದಾರೆ.

ಹೊರ ಜಿಲ್ಲೆ, ರಾಜ್ಯಕ್ಕೆ ಪ್ರಯಾಣಿಸ್ತೀರಾ..? ಹೀಗಿದೆ ಮಾರ್ಗಸೂಚಿ

ಖರೀದಿ ಅವಧಿ ವಿಸ್ತರಣೆ:

ಜಿಲ್ಲೆಯಲ್ಲಿ ಪ್ರಸ್ತುತ ದಿನಬಳಕೆ ವಸ್ತು ಖರೀದಿಗೆ ನೀಡಿರುವ ಸಮಯವನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ವಿಸ್ತರಿಸಲಾಗಿದ್ದು, ಸಂಜೆ 5 ರಿಂದ 7ರವರೆಗೆ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಮನೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಡಿಸಿ ಹೇಳಿದ್ದಾರೆ.

ಇನ್ನೊಂದು ವಾರ ಬಸ್ಸಿಲ್ಲ:

ಜಿಲ್ಲೆಯೊಳಗಿನ ಬಸ್‌ ಸಾರಿಗೆ, ಸೆಲೂನು, ಬ್ಯೂಟಿ ಪಾರ್ಲರು, ಸ್ಪಾಗಳನ್ನು ಇನ್ನೂ ಒಂದು ವಾರ ಆರಂಭಿಸುವುದಿಲ್ಲ. ಆಟೋಗಳಲ್ಲಿ ಒಬ್ಬ ಗ್ರಾಹಕರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಹೊರರಾಜ್ಯಗಳಿಗೆ ತೆರಳಬೇಕಾದವರು ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅವರನ್ನೂ ಬೀಡಿನಗುಡ್ಡೆ ಮೈದಾನದಲ್ಲಿ ಪರೀಕ್ಷಿಸಿ, ಅನುಮತಿ ಬಂದ ನಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿ - ಹೊಸ ಪಾಸಿಟಿವ್‌ ಇಲ್ಲ

ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಲಾದ ಶಂಕಿತ ಕೊರೋನಾ ಮಾದರಿಗಳಲ್ಲಿ ಶನಿವಾರ 11 ವರದಿಗಳು ಬಂದಿದ್ದು, ಎಲ್ಲವೂ ನೆಗೆಟಿವ್‌ ಬಂದಿವೆ. ಶನಿವಾರ ಮತ್ತೆ 14 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವುಗಳು 7 ಫä್ಲ, 4 ಉಸಿರಾಟದ ತೊಂದರೆ, 2 ಕೋವಿಡ್‌ ಶಂಕಿತ ಮತ್ತು 1 ಹಾಟ್‌ಸ್ಪಾಟ್‌ಗಳಿಗೆ ಹೋಗಿ ಬಂದವರ ಮಾದರಿಗಳಾಗಿವೆ. ಜಿಲ್ಲೆಯಲ್ಲಿ 5431 ಮಂದಿ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 446 ಮಂದಿ ಹೋಮ್‌ ಕ್ವಾರಂಟೈನ್‌ ಮತ್ತು 38 ಮಂದಿ ಹಾಸ್ಟಿಟಲ್‌ ಕ್ವಾರಂಟೈನ್‌ನಲ್ಲಿದ್ದಾರೆ. 50 ಮಂದಿ ಐಸೋಲೇಶನ್‌ ವಾರ್ಡಿನಲ್ಲಿದ್ದಾರೆ. 50 ಮಂದಿಯ ವರದಿ ಬರುವುದಕ್ಕೆ ಇನ್ನೂ ಬಾಕಿ ಇದೆ