ಳೆಬೀಡು [ಫೆ.07] : ಹಳೇಬೀಡಿನ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಕ್ಯಾಂಟೀನ್‌ಗಳಲ್ಲಿ ಉತ್ತರ ಕರ್ನಾಟಕ ಶೈಲಿಯ ತಿಂಡಿತಿನಸು ತಿನ್ನಲು ಭಕ್ತರು ಮುಗಿಬೀಳುತ್ತಿದ್ದಾರೆ. ಆದರೆ, ಇತ್ತ ರಾತ್ರಿ ವೇಳೆ ಖೋಟಾನೋಟುಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ..!

9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ಶ್ರೀಗಳ ಆಶೀರ್ವಾದ ಪಡೆಯುವುದರೊಂದಿಗೆ ವೇದಿಕೆಯಲ್ಲಿ ಮಠಾಧೀಶರ ಆಶೀರ್ವಚನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರ ಉಪನ್ಯಾಸ ಮತ್ತು ಕಲಾ ತಂಡಗಳು ನಡೆಸಿಕೊಡುವ ಸಾಂಸ್ಕೃ ತಿಕ ಕಾರ್ಯಕ್ರಮ ನೋಡಿ ಆನಂದಿಸು ತ್ತಿದ್ದಾರೆ. ಮಹೋತ್ಸವಕ್ಕೆ ಬರುವ ಸಾವಿರಾರು ಭಕ್ತರಿಗೆ ತಿಂಡಿ ತಿಸುಗಳ ವ್ಯವಸ್ಥೆ ಕಲ್ಪಿಸಲು 60 ಕ್ಕೂ ಹೆಚ್ಚು ಕ್ಯಾಂಟೀನ್ ತೆರೆಯಲಾಗಿದೆ.

ಉತ್ತರ ಕರ್ನಾಟಕ ಶೈಲಿಯ ವೈವಿಧ್ಯಮಯ ತಿನಿಸುಗಳು: ಉತ್ತರ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಬಂದಿರುವ ವರ್ತಕರು ವಿಶಾಲ ಮೈದಾನದಲ್ಲಿ ಕ್ಯಾಂಟೀನ್ ಶೆಡ್‌ಗಳನ್ನು ತೆರೆದಿದ್ದಾರೆ. ಜೋಳದ ರೊಟ್ಟಿಗೆ (ಬದನೆಕಾಯಿ) ಎಣ್ಣಗಾಯಿ, ವಿವಿಧ ಚಟ್ನಿಪುಡಿ ಜೊತೆಗೆ ಮೊಸರು ಸೇರಿಸಿ ಕಲಸಿ ತಿಂದರೆ ಅದರ ಸೊಗಸೇ ಬೇರೆ. ದಾವಣಗೆರೆ ಬೆಣ್ಣೆ ದೋಸೆ, ಪಾನಿಪುರಿ, ಮಸಾಲೆಪುರಿ, ಗೋಬಿಮಂಚೂರಿ, ಪಲಾವ್ ಇತರೆ ತಿಂಡಿ ತಿನಸುಗಳ ಮಾರಾಟ ಭರ್ಜರಿಯಾಗಿದೆ.

ತಿಂಡಿ ತಿನಸುಗಳ ಸ್ಟಾಲ್‌ಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿರುವುದೇನೋ ಸರಿ. ಆದರೆ, ರಾತ್ರಿವೇಳೆ ತಿಂಡಿ ತಿನ್ನುವ ಕೆಲವು ಕಿಡಿಗೇಡಿಗಳು ಖೋಟಾನೋಟು ನೀಡಿ ಯಾಮಾರಿಸುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಅಂಗಡಿ ಮಾಲೀಕರನ್ನು ಚಿಂತೆಗೀಡುಮಾಡಿದೆ.

ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್.

ಸಂಜೆಯಿಂದ ಮಧ್ಯರಾತ್ರಿವರೆಗೆ ಕ್ಯಾಂಟೀನ್‌ಗಳು ತೆರೆದಿದ್ದು ಹುಣ್ಣಿಮೆ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಬಗೆಬಗೆಯ ತಿಂಡಿ ತನಸುಗಳನ್ನು ಉಣ ಬಡಿಸಲಾಗುತ್ತಿದೆ. ಆದರೆ, ಕಳೆದೆರಡು ದಿನಗಳಿಂದ 500 ರು. ಮುಖಬೆಲೆಯ ಖೋಟಾನೋಟುಗಳನ್ನು ಕೆಲವರು ನೀಡುತ್ತಿದ್ದು ಇದರಿಂದ ಅಂಗಡಿ ಮಾಲೀಕರು ಮೋಸಹೋಗುತ್ತಿದ್ದಾರೆ.

ಜೋಳದರೊಟ್ಟಿ, ಮಿರ್ಚಿಮಸಾಲ ಸ್ಟಾಲ್ ಮಾಲೀಕರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಕಳೆದೆರಡು ದಿನಗಳಿಂದ 500 ಮುಖಬೆಲೆ ಖೋಟಾನೋಟುಗಳನ್ನು ಜನದಟ್ಟಣನೆ ಇರುವ ವೇಳೆ ಕೆಲವರು ಕೊಟ್ಟು ಚಿಲ್ಲರೆ ಪಡೆಯುತ್ತಿದ್ದಾರೆ. ರಾತ್ರಿ ಮತ್ತು ಹೆಚ್ಚು ಗ್ರಾಹಕರು ಇರುವ ಸಂದರ್ಭ ನೋಡಿಕೊಂಡು ಚಲಾವಣೆ ಮಾಡುತ್ತಿದ್ದಾರೆ. ಈಗಾಗಲೇ 10 ರು. ನೋಟುಗಳು ನಾನಾ ಕಡೆ ಚಲಾವಣೆ ಆಗಿದೆ. ರಾತ್ರಿಯೆಲ್ಲಾ ಕಷ್ಟಪಟ್ಟು ದುಡಿದು ಈರೀತಿ ಆದರೆ ನಮ್ಮ ಹೊಟ್ಟೆ ಪಾಡಿನ ಕಥೆ ಏನು ಎಂದು ತಮ್ಮ ಆಳಲು ತೋಡಿಕೊಂಡರು.