ಹಾಸನ(ಜು.19):ತಾಲೂಕಿನಾದ್ಯಂತ ಎಲ್ಲೆಡೆ ಚಿಕೂನ್‌ಗುನ್ಯಾ, ಡೆಂಘೀ ಹಾಗೂ ವೈರಲ್‌ ಜ್ವರ ಹೆಚ್ಚಾಗಿದ್ದು, ಶೇ.60 ಹೆಚ್ಚು ಜನರು ರೋಗ ಪೀಡಿತರಾಗಿ ಆಸ್ಪತ್ರೆಗೆ ಅಲೆದಾಡುವುದು ದಿನನಿತ್ಯದ ಕೆಲಸವಾಗಿದೆ. ರೋಗ ನಿಯಂತ್ರಣಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಪೂರ್ಣ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ತಿಂಗಳು ಒಂದೆರಡು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಚಿಕೂನ್‌ಗುನ್ಯಾ, ಡೆಂಘೀ ಹಾಗೂ ವೈರಲ್‌ ಫಿವರ್‌ ನಂತರ ಇಡೀ ತಾಲೂಕನ್ನು ಆಕ್ರಮಿಸಿಕೊಂಡು ಜನರನ್ನು ರೋಗದಿಂದ ನರಳುವಂತೆ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ ನೂರಾರು ಜನರು ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿದ್ದಾರೆ.

ಸರ್ಕಾರಿ ಲ್ಯಾಬ್ ಅವ್ಯವಸ್ಥೆ

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಕೇಂದ್ರದಲ್ಲಿ ಫಲಿತಾಂಶ ಬರುವುದು ವಿಫಲವಾಗುತ್ತಿದ್ದು, ಖಾಸಗಿ ಲ್ಯಾಬ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಅತ್ತ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಗೊತ್ತಿದ್ದರೂ ಆರೋಗ್ಯ ಅಧಿಕಾರಿಗಳಾಗಲೀ, ಶಾಸಕರಾಗಲೀ ಗಮನಹರಿಸಿಲ್ಲ. ಇದರಿಂದ ಹೆಚ್ಚು ಹಣವನ್ನು ಕೊಟ್ಟು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸ್ಥಿತಿ ಬಡ ರೋಗಿಗಳದ್ದಾಗಿದೆ.

ಪಟ್ಟಣದಲ್ಲೂ ಕೂಡ ಕೆಲವು ವಾರ್ಡ್‌ಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬರುತ್ತಿದ್ದು, ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದೆ ಹಾಗೆ ನಿಂತಿದ್ದು, ಇದರಿಂದ ಸೊಳ್ಳೆಗಳು ಮೊಟ್ಟೆಇಡಲು ಅನುಕೂಲ ಮಾಡಿಕೊಟ್ಟಂತಾಗಿದೆ. ನೆಪ ಮಾತ್ರಕ್ಕೆ ಪುರಸಭೆಯ ಆರೋಗ್ಯ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭೇಟಿ ನೀಡಿ, ಲಾರ್ವಾ ಸೊಳ್ಳೆಯ ಬಗ್ಗೆ ಒಂದೆರಡು ಮಾಹಿತಿ ನೀಡಿ ಹೋಗುವುದನ್ನು ಬಿಟ್ಟರೆ ಸ್ವಚ್ಛತೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪಟ್ಟಣದ ಕೊಟ್ಟಿಕೆರೆ ಬೀದಿ ಮುಸ್ತಪಾ ಬೀದಿಯಲ್ಲಿ ಸ್ವಚ್ಛತೆ ಕೊರತೆ ಇದ್ದುಪುರಸಭೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಪಟ್ಟಣದಲ್ಲೂ ಚಿಕೂನ್‌ಗುನ್ಯಾದಂತಹ ಮಾರಕ ಕಾಯಿಲೆ ಹೆಚ್ಚು ಜನರು ಬಲಿಯಾಗುತ್ತಿದ್ದು, ಮನೆ ಮಂದಿಯೆಲ್ಲ ಒಟ್ಟಿಗೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗದೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸಾವಿರಾರು ರು. ಖರ್ಚು ಮಾಡುತ್ತಿದ್ದಾರೆ.

ಕರಪತ್ರ ಮುದ್ರಿಸಿ ಹಂಚಿದ್ದು ಬಿಟ್ಟರೆ, ರೋಗ ನಿಯಂತ್ರಣಕ್ಕೆ ಬೇರೇನೂ ಮಾಡಿಲ್ಲ

ತಾಲೂಕಿನಲ್ಲಿ ಎಲ್ಲೆಡೆಯೂ ಚಿಕೂನ್‌​ಗುನ್ಯಾ, ಡೆಂಘೀ ವೈರಲ್‌ ಜ್ವರಗಳಿಂದ ಸಾವಿರಾರು ಜನರು ನರಳಾಡುತ್ತಿದ್ದಾರೆ. ಆದರೆ, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ತಾಲೂಕಿನಲ್ಲಿ 34 ಜನರಿಗೆ ಡೆಂಘೀ ಹಾಗೂ ಇಬ್ಬರಿಗೆ ಚಿಕೂನ್‌ಗುನ್ಯಾ ಇರುವುದು ಕಂಡುಬಂದಿದೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ದೂರುತ್ತಾರೆ ರೋಗಿಗಳ ಸಂಬಂಧಿಕರು.

ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣದಲ್ಲಿ ಡೆಂಘೀ ಮತ್ತು ಚಿಕೂನ್‌​ಗುನ್ಯಾ ಬಗ್ಗೆ ಕರಪತ್ರ ಮುದ್ರಿಸಿ ಹಂಚಿರುವುದು ಬಿಟ್ಟರೆ ಇದುವರೆಗೂ ಅದನ್ನು ನಿಯಂತ್ರಣಕ್ಕೆ ತರಲು ಮುಂದಾಗದಿರುವುದು ವಿಪರ್ಯಾಸವಾಗಿದೆ ಎಂದು ಎನ್ನುತ್ತಾರೆ.

ಡೆಂಘೀಜ್ವರ ನಿವಾರಣೆಗೆ ಸಕಾಲದಲ್ಲಿ ಚಿಕಿತ್ಸೆ ಅಗತ್ಯ