ಡೆಂಘೀಜ್ವರ ನಿವಾರಣೆಗೆ ಸಕಾಲದಲ್ಲಿ ಚಿಕಿತ್ಸೆ ಅಗತ್ಯ
ಡೆಂಘೀಜ್ವರ ನಿವಾರಣೆಗೆ ಸಕಾಲದಲ್ಲಿ ಚಿಕಿತ್ಸೆ ಅಗತ್ಯ ಎಂದು ಡಾ.ಸುರೇಶ್ ಸಲಹೆ ನೀಡಿದರು. ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿ, ಡೆಂಘೀ ತಡೆಯಲು ಕೖಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಚಿಕ್ಕಮಗಳೂರು(ಜು.18): ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಹರುಡುತ್ತಿದ್ದು, ಡೆಂಘೀಜ್ವರಕ್ಕೆ ಸಕಾಲದಲ್ಲಿ ಚಿಕಿತ್ಸೆ ಅಗತ್ಯ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸುರೇಶ್ ಹೇಳಿದರು.
ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮುತ್ತಿನಕೊಪ್ಪ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬೆಳ್ಳೂರು ಆರೋಗ್ಯ ಉಪ ಕೇಂದ್ರದ ಆಶ್ರಯದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಡೆಂಘೀಜ್ವರ ಕಾಯಿಲೆಯಲ್ಲಿ ಮೂರು ವಿಧಗಳಿವೆ. ಡೆಂಘೀಜ್ವರ, ತೀವ್ರ ರಕ್ತಸ್ರಾವ ಜ್ವರ ಹಾಗೂ ಡೆಂಘೀ ಶಾಕ್ ಸಿಂಡ್ರೋಮ್ ಎಂಬುದು ಕಾಯಿಲೆಯ ಲಕ್ಷಣಗಳಾಗಿವೆ. ಡೆಂಘೀಜ್ವರ ಕಾಣಿಸಿಕೊಂಡಾಗ ವಿಪರೀತ ತಲೆನೋವು, ತೀವ್ರ ಜ್ವರ, ಮೈ ಕೈ ನೋವು, ಗಂಟುಗಳಲ್ಲಿ ನೋವು, ಒಸಡು ಹಾಗೂ ಮೂಗಿನಿಂದಲೂ ರಕ್ತಸ್ರಾವ ಆಗಲಿದೆ. ಇಂಥ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದರು.
ಮುಂಜಾಗೃತೆ ವಹಿಸಲು ಸಲಹೆ:
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಿಕ ಪಿ.ಪ್ರಭಾಕರ್ ಡೆಂಘೀಜ್ವರದ ಬಗ್ಗೆ ಮಾಹಿತಿ ನೀಡಿ, ಡೆಂಘೀಜ್ವರ ಬರದ ರೀತಿಯಲ್ಲಿ ಮುಂಜಾಗ್ರತೆ ವಹಿಸಲು ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ನಮ್ಮ ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಹತ್ತಿರದ ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಶುದ್ಧಗೊಳಿಸಿ ನೀರಿನ ತೊಟ್ಟಿಯನ್ನು ಮುಚ್ಚಿಡಬೇಕು. ಸೊಳ್ಳೆಗಳ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ ಸಲಹೆಯನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.
ಡೆಂಘೀ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲ್ಯಾನ್!
ಮುಖ್ಯ ಅತಿಥಿ ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಪಿ. ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ. ಮಹೇಶ್, ಬೆಳ್ಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮೂರ್ತಿ, ಕಿರಿಯ ಪುರುಷ ಆರೋಗ್ಯ ನಿರೀಕ್ಷಿಕ ದರ್ಶನ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹೇಮಾವತಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರತ್ನಮ್ಮಇದ್ದರು.