ಶ್ರೀರಂಗಪಟ್ಟಣ (ಫೆ.23):  ತಾಲೂಕಿನ ನಗುವನಹಳ್ಳಿ ಗ್ರಾಮದ ತೋಟದ ಮನೆಯೊಂದರ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಪ್ಪು ಬಣ್ಣದ ನೆರಳಿನಾಕಾರದ ದೃಶ್ಯ ಓಡಾಡುತ್ತಿರುವ ಚಿತ್ರಣ ಸೆರೆಯಾಗಿರುವುದರಿಂದ ಗ್ರಾಮಸ್ಥರಲ್ಲಿ ದೆವ್ವ ಇರುವ ವದಂತಿ ಹಬ್ಬಿದೆ.

ಗ್ರಾಮದ ಲೋಕೇಶ್‌ ಎಂಬುವವರ ತೋಟದ ಮನೆಯಲ್ಲಿ ಹಾಕಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಪ್ಪು ಬಣ್ಣದ ಆಕೃತಿಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದೀಗ ರಾತ್ರಿ ವೇಳೆ ಮಾಲೀಕ ಸೇರಿದಂತೆ ಗ್ರಾಮಸ್ಥರು ಈ ಜಾಗದಲ್ಲಿ ಸಂಚರಿಸಲು ಭಯಭೀತರಾಗಿದ್ದಾರೆ.

ಈ ಜಾಗದ ಆಸು-ಪಾಸಿನಲ್ಲಿ ಈ ಹಿಂದೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಗಳೇ ಓಡಾಡುತ್ತಿರುವುದಾಗಿ ಗುಸುಗುಸು ಕೇಳಿ ಬರುತ್ತಿದೆ. ಈ ಹಿನ್ನೆಲೆ ಮೊದಲೇ ಭಯಗೊಂಡಿದ್ದ ಮಾಲೀಕ ಭದ್ರತೆಗಾಗಿ ತೋಟದ ಮನೆಯಲ್ಲಿ ನಾಲ್ಕೈದು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದನು.

ಸಿಸಿಟಿವಿಯಲ್ಲಿ ಆತ್ಮದ ದೃಶ್ಯ; ತೋಟದ ಬಳಿ ಹೋಗಲು ಭಯಪಡ್ತಿದ್ದಾರೆ ಜನ

2021ರ ಜ.31ರ ಬೆಳಗಿನ ಜಾವ 6.45ರ ಸಮಯದಲ್ಲಿ ಕ್ಯಾಮೆರಾದಲ್ಲಿ ಮಾಲೀಕ ಹುಲ್ಲು ಮೆದೆಯಿಂದ ಹುಲ್ಲು ತೆಗೆದುಕೊಂಡು ಹೋದ ಬಳಿಕ ಕಪ್ಪು ಬಣ್ಣವಿರುವ ನೆರಳಿನಾಕೃತಿಯ ದೃಶ್ಯ ತೋಟದಿಂದ ಹುಲ್ಲು ಮೇದೆ ಬಳಿ ಓಡಾಡಿರುವ ಚಿತ್ರಣ ಸೆರೆಯಾಗಿದೆ. ಇದೀಗ ಈ ದೃಶ್ಯವು ಮಧ್ಯಮದಲ್ಲೂ ಹರಿದಾಡುತ್ತಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

"

ಈ ಸಂಬಂಧ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಪ್ರತಿಕ್ರಿಯಿಸಿದ್ದು, ದೆವ್ವ ಓಡಾಡಲು ಸಾಧ್ಯವಿಲ್ಲ. ಸಿಸಿ ಟಿವಿಯ ಲೆನ್‌ನಲ್ಲಿ ಯಾವುದೋ ಹುಳು ಓಡಾಡುತ್ತಿದ್ದರೆ ಹತ್ತಿರದಿಂದ ಫೋಕಸ್‌ ಆಗದ ಕಾರಣ ಕಪ್ಪು ಬಣ್ಣದ ಆಕೃತಿಯ ಚಲನೆಯು ಸೆರೆಯಾಗಿರುತ್ತದೆ. ನಗುವನಹಳ್ಳಿ ಗ್ರಾಮಸ್ಥರು ಈ ಬಗ್ಗೆ ಅತಂಕಗೊಳ್ಳುವುದು ಬೇಡ. ಅಗತ್ಯವಿದ್ದರೆ ನಾನು ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಗೆ ಸಾಕ್ಷಿ ಸಮೇತ ದೆವ್ವ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.