Asianet Suvarna News Asianet Suvarna News

10 ರು.ಗೆ ರುಚಿ ರುಚಿಯಾದ ರೈಸ್‌ ಬಾತ್: ತಿನ್ನಲು ಮುಗಿಬದ್ದ ಜನ!

ಹಂಪಿ ಉತ್ಸವದಲ್ಲಿ ಹೊಸಪೇಟೆಯ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯಿಂದ ರೈಸ್‌ಬಾತ್‌ ಸೇವೆ| ಜನರಿಗೆ ಬಾಳೆ ಎಲೆಯಲ್ಲಿ ಊಟ ಬಡಿಸಿ, ಹಸಿವು ನೀಗಿಸುವಂತಹ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಕಾರ್ಯ ಶ್ಲಾಘನೀಯ|

People Rush to Have RiceBath in Hampi in Ballari District
Author
Bengaluru, First Published Jan 12, 2020, 8:36 AM IST
  • Facebook
  • Twitter
  • Whatsapp

ಸಿ.ಕೆ. ನಾಗರಾಜ್‌ ದೇವನಕೊಂಡ 

ಹಂಪಿ(ಜ.12): ಹಂಪಿ ಉತ್ಸವದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಮುಂದಿನ ಪಾರ್ಕಿಂಗ್‌ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಎರಡನೇ ದಿನ ಹತ್ತಾರು ಬಗೆಯ ಭಕ್ಷ್ಯ, ಭೋಜನಗಳ ಮಳಿಗೆಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿತ್ತು. ಜೊತೆಗೆ ಜಂಕ್‌ ಫುಡ್‌ಗಳ ಸುಮಾರು 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮಗೆ ಬೇಕಾದ ಆಹಾರವನ್ನು ಸವಿದು ಜನರು ಖುಷಿ ಪಟ್ಟರು.

ಆದರೆ, ಉತ್ಸವಕ್ಕೆ ಬಂದ ಜನರಿಗೆ ಕೇವಲ 10ಗೆ ರೈಸ್‌ಬಾತ್‌ ನೀಡು​ವ ಸೇವೆಗೆ ಮುಂದಾಗಿದ್ದ ಹೊಸಪೇಟೆಯ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಆಹಾರ ಸ್ಟಾಲ್‌ ವಿಶೇಷ ಗಮನ ಸೆಳೆಯಿತು. ಕೇವಲ 10ಗೆ ಕುಡಿಯಲು ನೀರು ಸಿಗುವುದಿಲ್ಲ. ಅಂಥದ್ರಾಗ ಕೇವಲ 10ಗೆ ಚಿತ್ರಾನ್ನ, ಪುದೀನಾ ರೈಸ್‌, ಪಾಲಕ್‌ ರೈಸ್‌ ಸೇರಿದಂತೆ ವಿವಿಧ ರೈಸ್‌ ಐಟಂ ಊಟ ತಯಾರಿಸಿ, ಹಂಪಿ ಉತ್ಸವಕ್ಕೆ ಬಂದ ಜನರಿಗೆ ಬಾಳೆ ಎಲೆಯಲ್ಲಿ ಊಟ ಬಡಿಸಿ, ಹಸಿವು ನೀಗಿಸುವಂತಹ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಕಾರ್ಯ ಶ್ಲಾಘನೀಯವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಳೆ ಎಲೆಯ ಊಟದ ಜೊತೆಗೆ ಪ್ಲಾಸ್ಟಿಕ್‌ ಬಳಿಕೆ ಸಂಪೂರ್ಣ ನಿಷೇಧಿಸಬೇಕು ಎನ್ನುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮಣ್ಣಿನ ಕುಡಿಕೆಯಲ್ಲಿ ನೀರು ಕುಡಿಯುವ ವ್ಯವಸ್ಥೆ ವಿಶೇಷ ಗಮನ ಸೆಳೆಯಿತು. ಮಳಿಗೆ ಮುಂದೇನೇ ಮಣ್ಣಿನ ಕುಡಿಕೆಗಳನ್ನು ಇಟ್ಟು ಶುದ್ಧ ಕುಡಿಯುವ ನೀರು ತುಂಬಿಸಿ ಇಟ್ಟಿದ್ದರು. ಊಟ ಮಾಡಲು ಬಂದ ಜನರು ಮಣ್ಣಿನ ಕುಡಿಕೆಗಳನ್ನು ಆಶ್ಚರ್ಯಚಿಕತರಾಗಿ ಏನಿದು? ಮಣ್ಣಿನ ಕುಡಿಕೆಯಲ್ಲಿ ನೀರು ಕುಡಿಯುವ ಭಾಗ್ಯಯಾವಾಗ ದೊರಕೀತು? ಉದ್ಘ​ರಿ​ಸಿ​ದರು. ಕೇವಲ 10ಗೆ ಹೊಟ್ಟೆ ತುಂಬಾ ರೈಸ್‌ಬಾತ್‌ ನೀಡುತ್ತಿದ್ದಾರೆ ಎನ್ನುವ ವಿಷಯ ಹಂಪಿ ಉತ್ಸವಕ್ಕೆ ಬಂದ ಜನರಿಗೆ ತಿಳಿಯುತ್ತಿದ್ದಂತೆ, ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಆಹಾರ ಮಳಿಗೆಗೆ ಸಾಮಾನ್ಯವರ್ಗದ ಜನರು ಮುಗಿ ಬಿದ್ದಿದ್ದರು.

ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಹಂಪಿಯ ಶ್ರೀಶಾರದ ಮಹಿಳಾ ಸ್ವಸಹಾಯ ಸಂಘದಿಂದ ಸ್ಥಳೀಯ 16 ಜನ ಮಹಿಳೆಯರು ಸೇರಿಕೊಂಡು ಸ್ವಸಹಾಯ ಸಂಘದ ಮಹಿಳೆಯರೇ ಆಹಾರ ಸಿದ್ಧಪಡಿಸಿದ್ದ ಪಾರಂಪರಿಕ ಊಟ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಹಾಗೂ ಹೋಳಿಗೆ ಊಟವನ್ನು 150, ರೊಟ್ಟಿ ಊಟಕ್ಕೆ 120, ಸಾದಾ ಊಟಕ್ಕೆ 70 ಗಳನ್ನು ನೀಡಿ ಸವಿದು ಸಂಭ್ರಮಸಿದರು.

ಜೋಳದ ರೊಟ್ಟಿ, 3-4 ಚಟ್ನಿಪುಡಿಗಳು, ಎರಡ್ಮೂರು ತರಹದ ಪಲ್ಯ, ತರತರನಾದ ಚಟ್ನಿ, ಸಾಂಬಾರು, ರಸಂ, ಮಜ್ಜಿಗೆ, ಮೊಸರು ಸವಿದರು. ದೇಶ-ವಿದೇಶಿಗರು ಸಹ ಉತ್ತರ ಕರ್ನಾಟಕದ ಊಟಕ್ಕೆ ಮನಸೋತರು. ಖುಷಿಯಿಂದ ಊಟ ಸವಿದರು. ಉತ್ಸವದ ಆರಂಭದ ದಿನ ಸುಮಾರು 500 ಜನರು ಊಟ ಮಾಡಿದರು. ಇವರಲ್ಲಿ ಸಚಿವ ಸಿ.ಟಿ. ರವಿ ಸೇರಿದಂತೆ ಇತರೆ ಜನಪ್ರನಿಧಿಗಳು ಹಾಗೂ ಅಧಿಕಾರಿಗಳು ಪಾರಂಪರಿಕ ಊಟ ಸವಿದಿದ್ದರು.

ಇನ್ನೂ ಹತ್ತಾರು ಆಹಾರ ಮಳಿಗೆಗಳಲ್ಲಿ ಜನರು ತಮ್ಮ ಕೈಗೆಟುಕುವ ಬೆಲೆಗೆ ಕೇವಲ 30ಗೆ ಪ್ಲೇಟ್‌ ಊಟ, ಚಪಾತಿ, ಊಟ ಮಾಡಿದರೆ ಮತ್ತೆ ಕೆಲವರು ಮಂಡಕ್ಕಿ ಒಗ್ಗರಣೆ, ಮಿರ್ಚಿ, ಉಪ್ಪಿಟ್ಟು ಸೇರಿದಂತೆ ವಿವಿಧ ಟಿಫನ್‌ಗಳನ್ನು ಸೇವಿಸುತ್ತಿದ್ದರು. ಇನ್ನೂ ಕೆಲವರು ಗೋಬಿ ಮಂಚೂರಿ, ಪಾನಿ ಪೂರಿ, ಗಿರಿಮಿಟ್‌ ಮಿರ್ಚಿ ಸೇರಿದಂತೆ ಇತರೆ ಆಹಾರವನ್ನು ಸೇವಿಸುತ್ತಿರುವುದು ಕಂಡುಬಂತು.

ಉತ್ಸವದಲ್ಲಿ ಹೊಸಪೇಟೆಯ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯಿಂದ ಸಿದ್ಧಪಡಿಸಿದ ಕೇವಲ 10ಗೆ ರೈಸ್‌ ಬಾತ್‌ನ್ನು ನೀಡುತ್ತಿರುವುದು ಸಂತೋಷದ ಸಂಗತಿ. 10ಗೆ ರೈಸ್‌ ನೀಡುವುದು ನೋಡಿಲ್ಲ. ಇವರು ಲಾಭಕ್ಕೆ ಮಾಡದೇ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಗದೀಶ್‌, ಹುಬ್ಬಳ್ಳಿ ಹಾಗೂ ಲಕ್ಷ್ಮಣ ಮರಿಯಮ್ಮನಹಳ್ಳಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios