ಮದ್ಯ ಸಿಗೋದಿಲ್ಲ ಅಂತ ವೈನ್‌ಶಾಪ್ ಮುಂದೆ ಮುಗಿಬಿದ್ದ ಪಾನಪ್ರಿಯರು..!
ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ ಈಜುಕೊಳ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್| ಹೋಟೆಲ್, ರೆಸ್ಟೋರೆಂಟ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ| ಅನಾವಶ್ಯಕವಾಗಿ ಓಡಾಡದಂತೆ ನಿರ್ಬಂಧ|
ಬೆಂಗಳೂರು(ಏ.23): ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಿಗಿ ನಿಯಮಗಳು ಜಾರಿಯಾಗುತ್ತಿದ್ದಂತೆ ಗುರುವಾರವೇ ಮದ್ಯಪ್ರಿಯರು ಮದ್ಯದಂಗಡಿಗಳ ಮೇಲೆ ಮುಗಿಬಿದ್ದು ಭರ್ಜರಿ ಖರೀದಿ ಮಾಡಿದ್ದಾರೆ.
ಗುರುವಾರದಿಂದ ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ ಈಜುಕೊಳ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಜೊತೆಗೆ ಅನಾವಶ್ಯಕವಾಗಿ ಓಡಾಡದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಿ ಮದ್ಯ ಸಿಗುವುದಿಲ್ಲವೋ ಎಂಬ ಆತಂಕಕ್ಕೆ ಒಳಗಾಗಿರುವ ಮದ್ಯಪ್ರಿಯರು ಗುರುವಾರವೇ ಸಾಧ್ಯವಾದಷ್ಟು ಮದ್ಯ ಖರೀದಿಸಿಟ್ಟುಕೊಳ್ಳಲು ಹಲವು ಮದ್ಯದಂಗಡಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಲಾರಿ ಪಲ್ಟಿಯಾಗಿದ್ದಕ್ಕೆ ಜನ ಫುಲ್ ಖುಷ್...ಸಂಡೇ ಪಾರ್ಟಿ ಜೋರು!
ಬಹುತೇಕ ಬಡಾವಣೆಗಳಲ್ಲಿ ಮದ್ಯದಂಗಡಿಗಳ ಮುಂದೆ ಪಾನಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದರು. ಇನ್ನು ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ಮಾವಳ್ಳಿ, ಡ್ರೈರಿ ಸರ್ಕಲ್ ಸಮೀಪ, ಬನ್ನೇರುಘಟ್ಟ, ಲಿಂಗರಾಜಪುರ, ನಗರಪೇಟೆಯ ಒಟಿಸಿ ರಸ್ತೆ, ಹೊರಮಾವು, ಹೆಣ್ಣೂರು ಕ್ರಾಸ್, ಹಲಸೂರು, ಶಾಂತಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ಮದ್ಯ ಖರೀದಿಯಲ್ಲಿ ಜನರು ನಿರತರಾಗಿದ್ದ ದೃಶ್ಯ ಕಂಡುಬಂತು.
ಪೊಲೀಸರು ಚಿಕ್ಕಪೇಟೆ ಸೇರಿದಂತೆ ನಗರದ ಕೆಲವು ಕಡೆಗಳಲ್ಲಿ ಮಧ್ಯಾಹ್ನದ ನಂತರ ಅಂಗಡಿ, ಮಳಿಗೆಗಳ ಬಾಗಿಲು ಹಾಕಿಸಿದ್ದರು. ಇದರಿಂದ ಮದ್ಯದಂಗಡಿ, ಬಾರ್‌ಗಳನ್ನು ಕೂಡ ಮುಚ್ಚಿಸುತ್ತಾರೆ ಎಂದು ಕೆಲ ಹೊತ್ತು ಮದ್ಯಪ್ರಿಯರು ಮದ್ಯದಂಗಡಿಗಳತ್ತ ಧಾವಿಸಿದ್ದರು. ಆದರೆ, ಮದ್ಯ ಪಾರ್ಸಲ್‌ಗೆ ಸರ್ಕಾರ ಅನುಮತಿ ನೀಡಿದ ವಿಚಾರ ಗೊತ್ತಾದ ಬಳಿಕ ಜನರು ಬರುವುದು ಕಡಿಮೆಯಾಯಿತು ಎಂದು ಹೆಬ್ಬಾಳದ ಮದ್ಯದಂಗಡಿ ಮಾಲೀಕ ರಾಜಶೇಖರಪ್ಪ ಮಾಹಿತಿ ನೀಡಿದರು.