ಮಂಗಳೂರು(ಮಾ.12): ಚೀನಾ ದೇಶದಿಂದ ಬಂದ ವ್ಯಕ್ತಿ ಕೊರೋನಾ ವೈರಸ್‌ ಹೊತ್ತು ತಂದಿರ ಬಹುದೆಂದು ಸ್ಥಳೀಯ ಜನತೆ ಭೀತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಡಬ ಸಮೀಪದ ಬಲ್ಯದ ನಿವಾಸಿಯೊಬ್ಬರು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿ ಪರೀಕ್ಷೆಗೆ ಒಳಗಾದ ಘಟನೆ ಬುಧವಾರ ನಡೆದಿದೆ.

ಕಾರ್ಯನಿಮಿತ್ತ ಚೀನಾ ದೇಶಕ್ಕೆ ಹೋಗಿದ್ದ ಬಲ್ಯದ ನಿವಾಸಿ ಎರಡು ದಿನಗಳ ಹಿಂದೆ ಸ್ವದೇಶಕ್ಕೆ ಹಿಂತಿರುಗಿದ್ದರು. ಕೊರೋನಾ ವೈರಸ್‌ ಶಂಕೆಯಿಂದ ಅವರನ್ನು ವಿಮಾನ ನಿಲ್ದಾಣದಲ್ಲೇ ಅಮೂಲಾಗ್ರ ಪರೀಕ್ಷೆಗೆ ಒಳಪಡಿಸಿ ವೈರಸ್‌ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ ಮನೆಗೆ ತೆರಳಲು ಅನುಮತಿ ನೀಡಲಾಗಿತ್ತು.

ವಾಟ್ಸಾಪ್ ಮೂಲಕ 700 ಯೂನಿಟ್ ರಕ್ತ ಸಂಗ್ರಹ..!

ಚೀನಾ ದೇಶದಿಂದ ಬಂದ ವ್ಯಕ್ತಿ ಬಲ್ಯ ಪರಿಸರದಲ್ಲೂ ಕೊರೋನಾ ವೈರಸ್‌ ಪ್ರಸಹರಿಸಬಹುದೆಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ ಕಾರಣದಿಂದ ಮುಜುಗರಕ್ಕೀಡಾದ ಆ ವ್ಯಕ್ತಿ ಕಡಬ ಸರ್ಕಾರಿ ಸಮುದಾಯ ಆಸ್ಪತ್ರೆಗೆ ತೆರಳಿ ಮತ್ತೊಮ್ಮೆ ಪರೀಕ್ಷೆಗೆ ತನ್ನನ್ನು ತಾನು ಒಳಪಡಿಸಿ ಕೊರೋನಾ ವೈರಸ್‌ ತನ್ನ ದೇಹದಲ್ಲಿಲ್ಲ ಎನ್ನುವುದನ್ನು ಸಾಬೀತು ಪಡಿಸಿ ಮನೆಗೆ ಹಿಂತಿರುಗಿದ್ದಾರೆ.

ಪ್ರವಾಸಿಗಳಿಗೆ ಸೂಚನೆ: ಕೊರೋನಾ ಹಿನ್ನೆಲೆ ಈ ಪ್ರದೇಶಕ್ಕೆ ಭೇಟಿ ಬೇಡ

ಇತ್ತ ಕಡಬ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಅವರು, ಚೀನಾ ಪ್ರವಾಸದಿಂದ ಹಿಂತಿರುಗಿದ ವ್ಯಕ್ತಿಯಲ್ಲಿ ಕೊರೋನಾ ವೈರಸ್‌ ಲಕ್ಷಣಗಳು ಗೋಚರಿಸಿಲ್ಲ. ಯಾರೂ ಕೂಡಾ ಆತಂಕಿತರಾಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.