ಮಡಿಕೇರಿ(ಮಾ.12): ಕೊರೋನಾ ಎಫೆಕ್ಟ್ ಕೊಡಗಿನ ಪ್ರವಾಸೋದ್ಯಮಕ್ಕೂ ತಟ್ಟಿದ್ದು, ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಗೊಂಡಿದೆ. ರಾಜ್ಯ ಹಾಗೂ ಗಡಿ ರಾಜ್ಯದಲ್ಲಿ ಕೊರೋನಾ ಬಂದಿರುವುದರಿಂದ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆಯು ಈ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಕೊಡಗಿನ ಬಹುತೇಕ ಪ್ರವಾಸಿ ತಾಣಗಳಲ್ಲಿ ಬೆರಳೆಣಿಕೆಯಷ್ಟುಪ್ರಮಾಣದಲ್ಲಿ ಮಾತ್ರ ಪ್ರವಾಸಿಗರು ಕಾಣಸಿಗುತ್ತಿದ್ದಾರೆ. ಎಂದಿಗಿಂತ ಕಡಿಮೆ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಡಿಕೇರಿಯ ರಾಜಾಸೀಟು, ದುಬಾರೆ, ಗೋಲ್ಡನ್‌ ಟೆಂಪಲ್‌ ಸೇರಿದಂತೆ ತಲಕಾವೇರಿ, ಭಾಗಮಂಡಲ ತೀರ್ಥಕ್ಷೇತ್ರದಲ್ಲೂ ಭಕ್ತರ ಸಂಖ್ಯೆ ಕ್ಷೀಣಿಸಿದೆ.

ವಾಟ್ಸಾಪ್ ಮೂಲಕ 700 ಯೂನಿಟ್ ರಕ್ತ ಸಂಗ್ರಹ..!

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಡಿಕೇರಿಯಲ್ಲೂ ಮಾಸ್ಕ್‌ಗೆ ಭಾರಿ ಬೇಡಿಕೆ ಬಂದಿದೆ. ಆಸ್ಪತ್ರೆ, ಖಾಸಗಿ ನಸಿಂರ್‍ಗ್‌ ಹೋಂ ಹಾಗೂ ಸಾರ್ವಜನಿಕರು ಅಲ್ಲಲ್ಲಿ ಮಾಸ್ಕ್‌ ಧರಿಸಿ ಓಡಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೋಳಿ ಮಾಂಸದ ಅಂಗಡಿಗಳತ್ತ ಯಾರೂ ಸುಳಿಯುತ್ತಿಲ್ಲ. ಹೀಗಾಗಿ, ಕೋಳಿ ಮಾಂಸದ ದರ ಕುಸಿದಿದೆ. ಕುಶಾಲನಗರ, ಸುಂಟಿಕೊಪ್ಪದಲ್ಲಿ ಪ್ರತಿ ಕೆ.ಜಿ. ಚಿಕನ್‌ ದರವು ಕೇವಲ 70 ರುಪಾಯಿ. ಮಡಿಕೇರಿಯಲ್ಲೂ ಕೆ.ಜಿ. 80 ರು. ಇದೆ. ಮೂರು ತಿಂಗಳ ಹಿಂದೆ ಕೋಳಿ ಮಾಂಸದ ದರವು 160ರಿಂದ 180 ರು.ನಷ್ಟಿತ್ತು.

ಪ್ರವಾಸ ಮುಂದೂಡುವಂತೆ ಮನವಿ

ಕೊರೋನಾ ಆತಂಕ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಪ್ರವಾಸಿಗರ ಮೇಲೆ ನಿಗಾ ಇಟ್ಟಿದೆ. ಸದ್ಯಕ್ಕೆ ಪ್ರವಾಸ ಮುಂದೂಡುವುದು ಒಳಿತು. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರವಾಸ ಮುಂದೂಡಿ ಎಂದು ಪ್ರವಾಸಿಗರಿಗೆ ಮಾಧ್ಯಮಗಳ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ​ಕಾರಿ ಡಾ. ಮೋಹನ್‌ ಮನವಿ ಮಾಡಿದ್ದಾರೆ.

ಮೈಸೂರಲ್ಲಿ ಅಲೆಮಾರಿ ಮಹಿಳೆಗೆ ಕೊರೋನಾ..?

ಜಿಲ್ಲೆಗೆ ಬರುವ ಪ್ರವಾಸಿಗರ ಬಗ್ಗೆ ಎಚ್ಚರ ವಹಿಸಬೇಕು. ಹೋಂಸ್ಟೇ, ರೆಸಾರ್ಟ್‌ ಮಾಲೀಕರಿಗೂ ಸೂಚನೆ ರವಾನಿಸಲಾಗಿದೆ. ಇರಾನ್‌, ಇರಾಕ್‌ನಿಂದ ಇಬ್ಬರು ಬಂದಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ. ಅವರಲ್ಲಿ ಯಾವುದೇ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೂ ಅವರ ಬಗ್ಗೆ ಹೆಚ್ಚು ನಿಗಾ ಇಟ್ಟಿದ್ದೇವೆ ಡಿಎಚ್‌ಒ ಮೋಹನ್‌ ಸ್ಪಷ್ಟಪಡಿಸಿದ್ದಾರೆ.