ಪುಂಡಿಗಿಡದಲ್ಲಿ ದೇವಿ ನೆಲೆಸಿದ್ದಾಳೆಂಬ ವದಂತಿ: ಮರ ನೋಡಲು ಮುಗಿಬಿದ್ದ ಜನ..!
ಬಾಗಲಕೋಟೆಯ ಬೇಲೂರು ಗ್ರಾಮದಲ್ಲಿ ಘಟನೆ| ಹೊಲದಲ್ಲಿರುವ ಗಿಡಗಳಿಗೆ ಪೂಜೆ, ಪುನಸ್ಕಾರ| ಗದಗ ಜಿಲ್ಲೆಯ ರೋಣ ತಾಲೂಕಿನ ಗಡಿ ಭಾಗದಲ್ಲಿರುವ ಬೊಮ್ಮಸಾಗರದ ದುರ್ಗಾದೇವಿ ಬಂದು ಪುಂಡಿ ಗಿಡದಲ್ಲಿ ನೆಲೆಸಿದ್ದಾಳೆಂಬ ಜನರ ನಂಬಿಕೆ|
ಬಾಗಲಕೋಟೆ(ಡಿ.27): ಹೊಲವೊಂದರ ಪುಂಡಿಗಿಡದಲ್ಲಿ ದೇವಿ ನೆಲೆಸಿದ್ದಾಳೆಂಬ ವದಂತಿ ಹಿನ್ನೆಲೆಯಲ್ಲಿ ಗಿಡ ನೋಡಲು ಜನತೆ ಮುಗಿಬಿದ್ದಿರುವ ದೃಶ್ಯ ಬಾಗಲಕೋಟೆ ಜಿಲ್ಲೆಯ ಬೇಲೂರು ಗ್ರಾಮದ ಹೊರವಲಯದ ಹೊಲವೊಂದರಲ್ಲಿ ನಡೆದಿದೆ.
ರೋಣ ತಾಲೂಕಿನ ಗಡಿ ಭಾಗದಲ್ಲಿರುವ ಬೊಮ್ಮಸಾಗರದ ದುರ್ಗಾದೇವಿ ಬಂದು ಪುಂಡಿ ಗಿಡದಲ್ಲಿ ನೆಲೆಸಿದ್ದಾಳೆಂಬ ನಂಬಿಕೆ ಜನರದ್ದಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಪ್ರತಿನಿತ್ಯ ಗಿಡಕ್ಕೆ ಬಾದಾಮಿ ತಾಲೂಕಿನ ಬೇಲೂರು ಸುತ್ತಮುತ್ತಲಿನ ಗ್ರಾಮಸ್ಥರ ಜೊತೆಗೆ ಅಕ್ಕಪಕ್ಕದ ಗ್ರಾಮಗಳ ಜನತೆಯೂ ಪೂಜೆ ಸಲ್ಲಿಸಲು ಬರುತ್ತಿದ್ದಾರೆ.
'ಬಾದಾಮೀಲೂ ಸಿದ್ದರಾಮಯ್ಯ ಸೋಲೋದು ಖಚಿತ'
ಇತ್ತೀಚೆಗೆ ಮಹಿಳೆಯೊಬ್ಬರು ಹೋಲದಲ್ಲಿರುವ ಪುಂಡಿಗಿಡ ಕೀಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೈ ನಡುಗುವ ಅನುಭವವಾಗಿದೆ. ಹೀಗಾಗಿ ಆತಂಕಗೊಂಡ ಮಹಿಳೆ ಮೈಮೇಲೆ ಬರುವ ಡಾಣಕಶಿರೂರ ಗ್ರಾಮದ ಮಹಿಳೆಯೊಬ್ಬಳ ಬಳಿ ನಡೆದ ಘಟನೆ ತಿಳಿಸಿದ್ದಾಳೆ. ಅವರು ಗಿಡದಲ್ಲಿ ದೇವಿ ನೆಲೆಸಿದ್ದಾಳೆ ಅಂತ ಹೇಳಿದ್ದಾಳೆ. ಇದೀಗ ಪುಂಡಿಗಿಡದಲ್ಲಿನ ದೇವಿಯ ಆರಾಧನೆಗೆ ಭಕ್ತರು ಚಪ್ಪರ ಹಾಕಿಸಿ ಪೂಜಿಸುತ್ತಿದ್ದಾರೆ.