ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.10): ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳ ಬದಲಿಗೆ ಜಿಲ್ಲಾ ಕಚೇರಿ ಹಾಗೂ ವಿಭಾಗೀಯ ಕಚೇರಿ ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಆದೇಶವನ್ನು ಹೊರಡಿಸಿದೆ. ರಾಜ್ಯ ಮಟ್ಟದ ಕಚೇರಿಗಳ ಸ್ಥಳಾಂತರ ಕೈಬಿಡುತ್ತಿರುವುದಕ್ಕೆ ಉತ್ತರ ಕರ್ನಾಟಕಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಲ್ಲಿನ ಜನತೆ ಮತ್ತೆ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗುವಂತೆ ರಾಜ್ಯಮಟ್ಟದ ಕೆಲವು ಕಾರ್ಯಾಲಯಗಳನ್ನು ಸುವರ್ಣ ವಿಧಾನಸೌಧ ಸೇರಿದಂತೆ ಈ ಭಾಗದ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಬಹುವರ್ಷಗಳದ್ದು. ಇದಕ್ಕಾಗಿ ಇಲ್ಲಿ ನಡೆದ ಹೋರಾಟ ಅಷ್ಟಿಷ್ಟಲ್ಲ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ ಪ್ರತಿವರ್ಷ ಹತ್ತಾರು ಸಂಘಟನೆಗಳು ಪ್ರತಿಭಟನೆ ನಡೆಸುವುದುಂಟು. ಇದಕ್ಕೆ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸ್ಪಂದಿಸಿತ್ತು. 2018ರಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ 9 ರಾಜ್ಯ ಮಟ್ಟದ ಕಾರ್ಯಾಲಯಗಳನ್ನು ಈ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು.

ಕೊನೆಗೂ ಬೆಳಗಾವಿ ಸುವರ್ಣಸೌಧಕ್ಕೆ ಕಚೇರಿಗಳ ಭಾಗ್ಯ: 24 ಆಫೀಸ್‌ ಶಿಫ್ಟ್‌

ಆದರೆ, ಅದಾದ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು. ಕಚೇರಿಗಳ ಸ್ಥಳಾಂತರವಾಗಲೇ ಇಲ್ಲ. ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಈ ನಡುವೆ ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜೂ. 9ಕ್ಕೆ ಸಭೆ ನಡೆದಿದೆ. ಅಲ್ಲಿ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಅಧಿವೇಶನ ನಡೆಯುವಾಗ ಸಚಿವರ ಕಚೇರಿ, ಮುಖ್ಯ ಕಾರ್ಯದರ್ಶಿಗಳ, ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳ ಕಚೇರಿಗಳಿಗೆ ಸ್ಥಳಾವಕಾಶದ ಕೊರತೆಯಾಗುತ್ತದೆ. ಹೀಗಾಗಿ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಕಾಯಂ ಆಗಿ ಯಾವುದೇ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ.

ಸುವರ್ಣ ಸೌಧದ ತಳಮಹಡಿ, 1 ಮತ್ತು 2ನæೕ ಮಹಡಿಯಲ್ಲಿ ಖಾಲಿಯಿರುವ 45 ಸಾವಿರ ಚದರ ಅಡಿ ಜಾಗವನ್ನು ಅಧಿವೇಶನಕ್ಕೆ ಅಡ್ಡಿ ಬಾರದ ರೀತಿಯಲ್ಲಿ ಉಪಯೋಗಿಸಿಕೊಳ್ಳ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಆ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ 23 ಹಾಗೂ ಧಾರವಾಡದಲ್ಲಿರುವ ವಿಭಾಗೀಯ ಮಟ್ಟದ ಕರ್ನಾಟಕ ನೀರಾವರಿ ನಿಗಮದ ಕಚೇರಿಯಾಗಿದೆ.

ಸುವರ್ಣ ಸೌಧದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠ ಕಾರ್ಯಾರಂಭ

ಜನರ ಆಸೆಗೆ ತಣ್ಣೀರು:

ರಾಜ್ಯಮಟ್ಟದ ಕಚೇರಿಗಳು ಉತ್ತರ ಕರ್ನಾಟಕ ಭಾಗಕ್ಕೆ ಬರುತ್ತವೆ. ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂದು ಈ ಭಾಗದ ಜನತೆಯ ಕನಸಿಗೆ ಸರ್ಕಾರದ ಈ ಆದೇಶ ತಣ್ಣೀರು ಎರಚಿದಂತಾಗಿದೆ. ಸರ್ಕಾರದ ವಿರುದ್ಧ ಇದೀಗ ಈ ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಲ್ಲಿರುವ ಕಚೇರಿಗಳನ್ನೇ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವುದರಿಂದ ಪ್ರಯೋಜನವೇನು? ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು ರಾಜ್ಯಮಟ್ಟದ ಕಚೇರಿಗಳನ್ನೇ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ಜನತೆ ನೀಡಿದ್ದಾರೆ. ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಮಹದಾಯಿ ಮಾದರಿಯಲ್ಲೇ ಉತ್ತರ ಕರ್ನಾಟಕಕ್ಕೆ ಕಚೇರಿ ಸ್ಥಳಾಂತರ ವಿಷಯವಾಗಿ ಆಂದೋಲನ ರೂಪದಲ್ಲಿ ಹೋರಾಟ ಶುರುವಾಗುವ ಲಕ್ಷಣಗಳಂತೂ ದಟ್ಟವಾಗಿವೆ.

ಎಚ್‌ಡಿಕೆ ಸರ್ಕಾರದ ನಿರ್ಧಾರ:

ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಬೆಳಗಾವಿ ಸುವರ್ಣ ಸೌಧಕ್ಕಷ್ಟೇ ಅಲ್ಲ, ಬೇರೆ ಬೇರೆ ಜಿಲ್ಲೆಗಳಿಗೆ ಕಚೇರಿಗಳನ್ನು ಸ್ಥಳಾಂತರಿಸಲು ನಿರ್ಧರಿಸಿತ್ತು. ಅವುಗಳಲ್ಲಿ ಕೃಷ್ಣಾ ಜಲಭಾಗ್ಯ ನಿಗಮ ನಿಯಮಿತ ಕಚೇರಿಯನ್ನು ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯನ್ನು ದಾವಣಗೆರೆಗೆ, ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಯನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ವಿಭಾಗಿಸಿ ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಿ ಹುಬ್ಬಳ್ಳಿಗೆ, ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರ ಇಲಾಖೆ ನಿರ್ದೇಶನಾಲಯವನ್ನು ಹಂಪಿಗೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ, ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿಗಳಲ್ಲಿ ಒಂದು ಕಲಬುರಗಿ, ಇನ್ನೊಂದು ಬೆಳಗಾವಿಗೆ ಹಾಗೂ ಎರಡು ಉಪಲೋಕಾಯುಕ್ತರ ಕಚೇರಿ ಪೈಕಿ ಒಂದನ್ನು ಧಾರವಾಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

ಈಗ ಯಾವ್ಯಾವ ಕಚೇರಿ?

ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ, ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ, ಬೃಹತ್‌ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿ, ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮ ನಿಯಮಿತ, ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ 23 ಜಿಲ್ಲಾ ಹಾಗೂ ವಿಭಾಗೀಯ ಹಾಗೂ ಧಾರವಾಡದಲ್ಲಿರುವ ವಿಭಾಗೀಯ ಮಟ್ಟದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿ ಸೇರಿದಂತೆ 24 ಕಚೇರಿಗಳನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿ ಆದೇಶಿಸಿದೆ.

ರಾಜ್ಯ ಮಟ್ಟದ ಕಚೇರಿ ಬದಲಿಗೆ ಇಲ್ಲೇ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಇದು ಖಂಡನೀಯ. ಕೂಡಲೇ ಕುಮಾರಸ್ವಾಮಿ ಸರ್ಕಾರದಲ್ಲಿ ನಿರ್ಧರಿಸಿದಂತೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಇದರ ವಿರುದ್ಧ ಹೋರಾಟಕ್ಕೂ ನಾ ಸಿದ್ಧ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು, ಇಲ್ಲಿರುವ ಕಚೇರಿಗಳನ್ನೇ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವುದರಿಂದ ಅಭಿವೃದ್ಧಿ ಹೇಗಾಗುತ್ತದೆ. ಅಧಿಕಾರಿಗಳು ಏನೇನೋ ನೆಪ ಹೇಳಿ ಸರ್ಕಾರದ ಹಾದಿ ತಪ್ಪಿಸಿ ಉತ್ತರ ಕರ್ನಾಟಕಕ್ಕೆ ಕಚೇರಿಗಳನ್ನು ಬರುವುದನ್ನು ತಡೆಹಿಡಿಯುತ್ತಿದ್ದಾರೆ. ಕೂಡಲೇ ಸರ್ಕಾರ ತನ್ನ ನಿರ್ಧಾರ ಬದಲಿಸಿ ರಾಜ್ಯಮಟ್ಟದ ಕಚೇರಿಗಳನ್ನೇ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಮಹದಾಯಿ ಮಾದರಿಯಲ್ಲೇ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.