ಸುವರ್ಣ ಸೌಧದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠ ಕಾರ್ಯಾರಂಭ
ಆಯೋಗದ ಬೆಳಗಾವಿ ಪೀಠವು ಮಾರ್ಚ್ 3 ರಂದು ಕಾರ್ಯಾರಂಭಿಸಬೇಕಿತ್ತು| ಕೊರೊನಾ ಹಿನ್ನೆಲೆಯಲ್ಲಿ ವಿಳಂಬ| ಸರ್ಕಾರ ಮತ್ತು ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಸುವರ್ಣ ವಿಧಾನಸೌಧದಲ್ಲಿ ಕಾರ್ಯ ಕಲಾಪ ಆರಂಭ| ಉತ್ತರ ಕರ್ನಾಟಕ ಜನರ ಬಹುದಿನಗಳ ಆಶಯ ಇದೀಗ ಈಡೇರಿದಂತಾಗಿದೆ|
ಬೆಳಗಾವಿ(ಜೂ.19): ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯಾರಂಭಿಸಿದೆ.
ಈ ಕುರಿತು ಇಂದು(ಶುಕ್ರವಾರ) ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಅವರು, ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ: ಸುವರ್ಣ ಸೌಧ ಕೋಮಾ ಸ್ಥಿತಿಯಲ್ಲಿದೆ, ವಾಟಾಳ್ ನಾಗರಾಜ್
ಪೀಠಕ್ಕೆ ಏಳು ಜಿಲ್ಲೆಯ ವ್ಯಾಪ್ತಿ:
ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳು ಬರಲಿದ್ದು, ಪೀಠದ ವ್ಯಾಪ್ತಿಯಲ್ಲಿ ಒಟ್ಟಾರೆ ನಾಲ್ಕು ಸಾವಿರ ಪ್ರಕರಣಗಳು ಬಾಕಿ ಉಳಿದಿರುತ್ತವೆ. ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ಪೀಠ ನಿರ್ವಹಿಸಲಿದೆ.