ಚಿಕ್ಕಮಗಳೂರು: ಕಾಫಿ ಗಿಡ ಕಡಿದ ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರ ಆಕ್ರೋಶ
ಒಕ್ಕಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖೆ ವಿರುದ್ಧ ಸಂತ್ರಸ್ತರ ಆಕ್ರೋಶ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.05): ಚಿಕ್ಕಮಗಳೂರು ತಾಲೂಕಿನ ಬೊಗಸೆ ಸಮೀಪದ ಪರದೇಶಪ್ಪನಮಠ ಗ್ರಾಮದಲ್ಲಿ ಮಲ್ಲಿಕಾರ್ಜುನ-ಅನ್ನಪೂರ್ಣ ದಂಪತಿಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿದ್ದ ನೂರಾರು ಕಾಫಿಗಿಡಗಳನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಿದು ಹಾಕಿದ್ದಾರೆ. ಈ ಗ್ರಾಮವನ್ನ ಅರಣ್ಯ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ನಿಮಗೆ ಪರ್ಯಾಯ ಜಾಗ ಕೊಡ್ತೀವಿ ಎಂದೇಳಿ ನೂರಾರು ಕಾಫಿಗಿಡಗಳನ್ನ ಕ್ಷಣಾರ್ಧದಲ್ಲಿ ಕಡಿದು ಹಾಕಿದ್ದಾರೆ. ಆದ್ರೆ, ಪರ್ಯಾಯ ಜಾಗ ಕೊಡ್ತೀವಿ ಎಂದೇಳಿ ವರ್ಷಗಳೇ ಕಳೆದ್ರು ನಮಗೆ ಇನ್ನೂ ಜಾಗ ಕೊಟ್ಟಿಲ್ಲ. ಪರಿಹಾರ ನೀಡಿಲ್ಲ ನಾವು ಇಲ್ಲಿಂದ ಎಲ್ಲಿಗೆ ಹೋಗೋದು ಅಂತ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರ ಆಕ್ರೋಶ
ಒಂದು ಕುಟುಂಬವನ್ನ ಗುರಿಯಾಗಿಸಿಕೊಂಡು ಅರಣ್ಯ ಇಲಾಖೆ ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇವತ್ತು ಆ ಕುಟುಂಬವನ್ನ ಹೊರಗೆ ಕಳಿಸ್ತೀರಿ, ನಾಳೆ ನಮ್ಮನ್ನೂ ಕೂಡ ಇಲ್ಲಿ ಬದುಕಲು ಬಿಡಲ್ಲ ಅಂತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಸುರಿಯುತ್ತಿರೋ ಮಳೆಯನ್ನೂ ಲೆಕ್ಕಿಸದೇ ಕಡಬಗೆರೆಯಲ್ಲಿ ರಾಜ್ಯ ಹೆದ್ದಾರಿಯನ್ನ ತಡೆದು ತಮ್ಮ ಸಿಟ್ಟನ್ನ ಹೊರ ಹಾಕಿದ್ದರು. ತೆರವು ಕಾರ್ಯಚರಣೆ ವೇಳೆ ಫಸಲು ತುಂಬಿದ್ದ ಕಾಫಿ ಗಿಡಗಳನ್ನು ಕಡಿದು ದೌರ್ಜನ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಬ್ರಿಟೀಷ್ ಧೋರಣೆ ತೋರುತ್ತಿದ್ದಾರೆ.ಯಾವುದೇ ನಿರ್ಧಿಷ್ಟ ಆದೇಶ ಇಲ್ಲದೆ ಕಾಫಿ ಗಿಡಗಳನ್ನು ಕಡಿಯಲಾಗಿದೆ. ಬಡವರ ಪರ ರಾಜಕಾರಣಿಗಳು,ಶ್ರೀಮಂತರು ಧ್ವನಿ ಎತ್ತಬೇಕು. ತೆರವುಗೊಳಿಸುವುದಾದಲ್ಲಿ ಅಲ್ಲಿನ ನಿವಾಸಿಗಳಿಗೆ ಕಾನೂನು ಬದ್ದವಾಗಿ ಪರಿಹಾರ ವಿತರಿಸಬೇಕೆಂದು ಪ್ರತಿಭಟನಾನಿತರು ಒತ್ತಾಯಿಸಿದರು.
ಚಿಕ್ಕಮಗಳೂರು: ಎರಡೇ ತಿಂಗಳಲ್ಲಿ ಹಾಳಾದ ರಸ್ತೆ, ಕಿತ್ತು ಬರ್ತೀರೋ ಟಾರ್ ಕಂಡು ಜನರ ಆಕ್ರೋಶ
ರಸ್ತೆಯ ಮಧ್ಯದಲ್ಲೇ ಪಕ್ಷ ರಾಜಕೀಯ
ಕಡಬಗೆರೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.ಡಿ.ಎನ್.ಜೀವರಾಜ್ ಮಾತನಾಡಿ, ಶಾಸಕರ ಮನೆಯಿಂದ ಎರಡು ಕಿಮೀ ದೂರದಲ್ಲಿರುವ ಪರದೇಶಪ್ಪನ ಮಠದಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ನನ್ನ ಅವದಿಯಲ್ಲಿ ಒಬ್ಬನೇ ಒಬ್ಬ ರೈತರ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ತೆರವುಗೊಳಿಸಲು ಅವಕಾಶ ನೀಡಿರಲಿಲ್ಲ. ಆದರೆ ಈಗಿನ ಶಾಸಕರ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಶಾಸಕರೂ ಪ್ರಯತ್ನಿಸಿದ್ದಾರೆ, ಈಗ ನಿಮ್ಮ ನಿಲುವೇನು ಎಂದು ಪ್ರಶ್ನಿಸುತ್ತಿದ್ದಂತೆ ಅಲ್ಲಿದ್ದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದರು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಎರಡೂ ಬಣದ ಸದಸ್ಯರನ್ನು ಸಮಾಧಾನ ಪಡಿಸಿದರು.