ಬೆಂಗಳೂರು(ಜು.11): ದುಬೈನಿಂದ ರಾಜಧಾನಿಗೆ ಬಂದಿರುವ 114 ಮಂದಿಯನ್ನು ಖಾಸಗಿ ಹೋಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ತೆರಳಿದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಸರ್ಜಾಪುರದಲ್ಲಿ ನಡೆದಿದೆ.

ದುಬೈನಲ್ಲಿ ಲಾಕ್‌ಡೌನ್‌ನಲ್ಲಿ ಸಿಲುಕಿದ್ದ 114 ಮಂದಿ ವಿಶೇಷ ವಿಮಾನದ ಮೂಲಕ ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬಳಿಕ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಎಲ್ಲ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದರು. ನಂತರ ಅವರ ಇಚ್ಛೆ ಅನುಸಾರ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ಬಿಎಂಟಿಸಿ ಬಸ್‌ಗಳಲ್ಲಿ ಸರ್ಜಾಪುರದ ಖಾಸಗಿ ಹೋಟೆಲ್‌ವೊಂದಕ್ಕೆ ಕರೆತರಲಾಯಿತು.

ವಿಕ್ಟೋರಿಯಾ ಆಸ್ಪತ್ರೆ ಸೌಲಭ್ಯದ ಬಗ್ಗೆ ಸಚಿವ ಸುಧಾಕರ್‌ಗೆ ಮೆಚ್ಚುಗೆ ಪತ್ರ

ಅರಬ್‌ ದೇಶಗಳಿಂದ ಬರುವವರಲ್ಲಿ ಕೊರೋನಾ ಸೋಂಕು ದೃಢಪಡುತ್ತಿರುವುದರಿಂದ ಸರ್ಜಾಪುರದ ನಿವಾಸಿಗಳು, ಈ ದುಬೈ ಪ್ರಯಾಣಿಕರನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲು ವಿರೋಧ ವ್ಯಕ್ತಪಡಿಸಿದರು. ಸದ್ಯ ಈ ಪ್ರದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಲ್ಲ. ಇವರನ್ನು ಕ್ವಾರಂಟೈನ್‌ ಮಾಡುವುದರಿಂದ ಸ್ಥಳೀಯರಿಗೂ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಧಿಕಾರಿಗಳು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಸ್ಥಳೀಯರು ಕ್ವಾರಂಟೈನ್‌ಗೆ ಒಳಪಡಿಸಲು ಒಪ್ಪಲಿಲ್ಲ.

6 ತಾಸು ಬಸ್ಸಲ್ಲೇ ಕುಳಿತರು:

ಬೆಳಗ್ಗೆ ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಸರ್ಜಾಪುರ ನಿವಾಸಿಗಳ ನಡುವೆ ಜಟಾಪಟಿ ಜರುಗಿತು. ಸ್ಥಳೀಯರ ಮನವೊಲಿಸುವ ಅಧಿಕಾರಿಗಳ ಎಲ್ಲ ಪ್ರಯತ್ನಗಳು ವಿಫಲವಾದವು. ಅಂತಿಮವಾಗಿ ಬೆಳ್ಳಂದೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ನಿಗದಿಯ ಮಾಡಿರುವ ಹೋಟೆಲ್‌ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಬಳಿಕ ಪ್ರಯಾಣಿಕರನ್ನು ಅಲ್ಲಿಗೆ ಕರೆದೊಯ್ದು ಕ್ವಾರಂಟೈನ್‌ಗೆ ಒಳಪಡಿಸಿದರು. ಹೀಗಾಗಿ ದುಬೈನಿಂದ ಬಂದಿದ್ದ ಕನ್ನಡಿಗರು ಸುಮಾರು ಆರು ತಾಸು ಬಿಎಂಟಿಸಿ ಬಸ್‌ಗಳಲ್ಲೇ ಕುಳಿತುಕೊಂಡಿದ್ದರು. ಕ್ವಾರಂಟೈನ್‌ಗೆ ಒಳಪಡಿಸಲು ವಿಳಂಬವಾಗಿದ್ದಕ್ಕೆ ಕೆಲವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.