ಮುನ್ನೆಲೆಗೆ ಬಂದ ಪ್ರತ್ಯೇಕ ಧಾರವಾಡ ಪಾಲಿಕೆ ಕೂಗು
* ಚುನಾವಣಾ ಪ್ರಚಾರ ವೇಳೆ ಪ್ರತ್ಯೇಕ ಪಾಲಿಕೆ ಕೇಳುತ್ತಿರುವ ಮತದಾರರು
* ಪ್ರತ್ಯೇಕ ಪಾಲಿಕೆಯ ಎಲ್ಲ ಅರ್ಹತೆ ಇದ್ದರೂ ಏತಕ್ಕೆ ಈ ಬೇಡಿಕೆ ಈಡೇರುತ್ತಿಲ್ಲ
* ಸ್ಮಾರ್ಟ್‌ಸಿಟಿ ಬರೀ ಹುಬ್ಬಳ್ಳಿಗೆ ಮಾತ್ರ ಸೀಮಿತ
ಬಸವರಾಜ ಹಿರೇಮಠ
ಧಾರವಾಡ(ಆ.28): ಕಳೆದ ಹಲವು ವರ್ಷಗಳಿಂದ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ರಚನೆಯಾಗಲಿ ಎಂಬ ಬೇಡಿಕೆ, ಒತ್ತಾಯ ಮತ್ತು ಕೂಗು ಪ್ರಸ್ತುತ ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಚನೆಯಾದಾಗಿನಿಂದಲೂ ಧಾರವಾಡ ವಿಷಯದಲ್ಲಿ ಪಾಲಿಕೆಯ ಆಡಳಿತ ನಿರ್ಲಕ್ಷ್ಯ ತೋರಿರುವ ಕಾರಣ ಧಾರವಾಡದ ಜನರು ಇತ್ತೀಚಿನ ವರ್ಷಗಳಲ್ಲಿ ಪ್ರತ್ಯೇಕ ಪಾಲಿಕೆಯ ಬೇಡಿಕೆ ಇಟ್ಟಿದ್ದಾರೆ. ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ಸಹ ಹುಟ್ಟಿಕೊಂಡಿದ್ದು, ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಕೆಯಂತಹ ಪ್ರಯತ್ನಗಳು ನಡೆದಿವೆ. ಪ್ರಸ್ತುತ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೇಡಿಕೆಗೆ ಮತ್ತಷ್ಟುಬಲ ಬಂದಂತಾಗಿದ್ದು ಮತದಾರರು ಅಭ್ಯರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ.
ಅಭ್ಯರ್ಥಿಗಳಿಗೆ ಒತ್ತಡ:
ತಮ್ಮ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಪಾಲಿಕೆಯ ಭರವಸೆ ಸಹ ಸೇರ್ಪಡೆ ಮಾಡಿಕೊಳ್ಳಿ ಹಾಗೂ ತಾವು ಆಯ್ಕೆಯಾಗಿ ಬಂದ ನಂತರ ಅದನ್ನು ಪೂರೈಸಿ ಎಂದು ಒತ್ತಡ ಹೇರುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತವಿದ್ದು ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಬಂದರೆ ಖಚಿತವಾಗಿಯೂ ಪ್ರತ್ಯೇಕ ಪಾಲಿಕೆ ಬಗ್ಗೆ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕೆಂದು ಬಿಜೆಪಿ ಆಭ್ಯರ್ಥಿಗಳಿಗೆ ತಾಕೀತು ಮಾಡುತ್ತಿದ್ದಾರೆ. ಅಭ್ಯರ್ಥಿಗಳು ಈ ವಿಷಯದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ ಈ ವಿಷಯವಾಗಿ ಆಡಳಿತದ ಮೇಲೆ ಒತ್ತಡ ಹೇರುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಹುಬ್ಬಳ್ಳಿ: ಸಚಿವರ ಪುತ್ರಿ ಮದುವೆ, ರಸ್ತೆಗಳಿಗೆ ಡಾಂಬರ್ ಭಾಗ್ಯ..!
ಏತಕ್ಕೆ ಬೇಕು ಪ್ರತ್ಯೇಕ ಪಾಲಿಕೆ
ಹು-ಧಾ ಮಹಾನಗರ ಪಾಲಿಕೆ ಎಲ್ಲ ದೃಷ್ಟಿಯಿಂದಲೂ ಧಾರವಾಡ ನಗರವನ್ನು ಕಡೆಗಣಿಸುತ್ತಿರುವ ಕಾರಣ ಪ್ರತ್ಯೇಕ ಪಾಲಿಕೆಯ ಕೂಗು ಎದ್ದಿತು. ಪಾಲಿಕೆಯ ಸಾಮಾನ್ಯ ಸಭೆ ಸೇರಿದಂತೆ ಪ್ರಮುಖ ಸಭೆ-ಸಮಾರಂಭ, ನಿರ್ಣಯಗಳೆಲ್ಲವೂ ಹುಬ್ಬಳ್ಳಿಯಲ್ಲಿಯೇ ನಡೆಯುತ್ತವೆ. ಧಾರವಾಡದಲ್ಲಿ ಪಾಲಿಕೆ ಕಚೇರಿ ಇದ್ದರೂ ಸಹ ಹೆಸರಿಗೆ ಮಾತ್ರ. ಹುಬ್ಬಳ್ಳಿಯಂತೆಯೇ ಧಾರವಾಡದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರವಾಗುತ್ತಿದೆ. ತೆರಿಗೆ ಸೇರಿದಂತೆ ಪಾಲಿಕೆಯ ಅನುದಾನ ಮಾತ್ರ ಸರಿಯಾದ ಪ್ರಮಾಣದಲ್ಲಿ ಧಾರವಾಡಕ್ಕೆ ಹಂಚಿಕೆಯಾಗುತ್ತಿಲ್ಲ. ಸ್ಮಾರ್ಟ್‌ಸಿಟಿ, ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, ಮೇಲ್ಸೇತುವೆ ಅಂತಹ ಪ್ರಮುಖ ಯೋಜನೆಗಳು ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಜತೆಗೆ ಪಾಲಿಕೆ ಸದಸ್ಯರ ಪೈಕಿ ಹುಬ್ಬಳ್ಳಿಯವರೇ ಅತೀ ಹೆಚ್ಚಿನ ಬಾರಿ ಮೇಯರ್ ಆದವರು. ಹೀಗಾಗಿ ಅಧಿಕಾರ ಹುಬ್ಬಳ್ಳಿಯಲ್ಲಿ ಇರುವ ಕಾರಣ ಧಾರವಾಡಿಗರು ಇಂತಹ ಮಲತಾಯಿ ಧೋರಣೆಯಿಂದ ಬೇಸತ್ತಿದ್ದಾರೆ. ಇದರ ಪರಿಣಾಮವೇ ಪ್ರತ್ಯೇಕ ಪಾಲಿಕೆಯ ಕೂಗು.
ಚುನಾವಣೆ ಬಳಿಕ ಹೋರಾಟಕ್ಕೆ ಸಿದ್ಧತೆ
ಕೆಎಂಸಿ ಕಾಯ್ದೆ ಪ್ರಕಾರ 4 ಲಕ್ಷ ಜನಸಂಖ್ಯೆ ಹೊಂದಿದ ನಗರಕ್ಕೆ ಮಹಾನಗರ ಪಾಲಿಕೆಯ ಅರ್ಹತೆ ಇದೆ. ಸ್ಮಾರ್ಟ್‌ಸಿಟಿ ಬರೀ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ಬರೀ ಹುಬ್ಬಳ್ಳಿಗೆ ಮಾತ್ರ ಎನ್ನುವಂತಾಗಿದ್ದು ಧಾರವಾಡ ದಿನದಿಂದ ದಿನಕ್ಕೆ ಹಿಂದುಳಿಯುತ್ತಿದೆ. ಜಿಲ್ಲಾ ಕೇಂದ್ರ ಧಾರವಾಡ ಇದ್ದರೂ ಸಹ ಪಾಲಿಕೆ ವಿಷಯದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ. ರಾಜಕಾರಣಿಗಳು ಸಹ ಧಾರವಾಡಕ್ಕೆ ಮಹತ್ವ ನೀಡದೇ ಹುಬ್ಬಳ್ಳಿಗೆ ಆದ್ಯತೆ ನೀಡುತ್ತಿರುವುದು ಬೇಸರದ ಸಂಗತಿ. ಈ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗು ಎದ್ದಿದೆ. ಈ ಕುರಿತು ಹಲವು ಹೋರಾಟ, ಸಹಿ ಸಂಗ್ರಹ ಸಹ ಆಗಿದೆ. ಪ್ರಸ್ತುತ ಪಾಲಿಕೆ ಚುನಾವಣೆ ಇದ್ದು ಧಾರವಾಡದ ಪ್ರಜ್ಞಾವಂತ ಮತದಾರರು ತಮ್ಮ ಅಭ್ಯರ್ಥಿಗಳಿಗೆ ಪ್ರತ್ಯೇಕ ಪಾಲಿಕೆ ಬಗ್ಗೆ ಒತ್ತಡ ಹೇರಬೇಕಾಗಿರುವುದು ಕರ್ತವ್ಯ. ಅಲ್ಲದೇ, ಈ ಬೇಡಿಕೆ ಕುರಿತು ಚುನಾವಣೆ ನಂತರದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯ ಲಲಿತ ಭಂಡಾರಿ ಹೇಳಿದ್ದಾರೆ.