Asianet Suvarna News Asianet Suvarna News

ಅಕ್ಕಲಕೋಟೆ ಜನರಿಂದಲೂ ಕರ್ನಾಟಕ ಸೇರುವ ಠರಾವ್‌: ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ..!

ಮೂಲಸೌಕರ್ಯ ಕಲ್ಪಿಸದ ಮಹಾರಾಷ್ಟ್ರದ ವಿರುದ್ಧ ಗಡಿ ಕನ್ನಡಿಗರ ಕಿಡಿ, ಅಕ್ಕಲಕೋಟೆ ತಾಲೂಕಿನ 43 ಹಳ್ಳಿಗಳಿಂದ ಕರ್ನಾಟಕ ಸೇರಲು ಒಲವು, ಸಭೆ ನಡೆಸಿ ನಿರ್ಣಯ ಪಾಸ್‌: ಸಿಎಂ ಬೊಮ್ಮಾಯಿ ಆಹ್ವಾನಿಸಲು ನಿರ್ಧಾರ

People of Akkalkot Interest to Join Karnataka grg
Author
First Published Nov 29, 2022, 7:57 AM IST

ಕಲಬುರಗಿ(ನ.29):  ಜತ್‌, ಪಂಢರಪುರದ ಬಳಿಕ ಇದೀಗ ಮಹಾರಾಷ್ಟ್ರದ ಸೊಲ್ಲಾಪುರ ತಾಲೂಕಿನ ಅಕ್ಕಲಕೋಟೆ ತಾಲೂಕಿನ 43 ಹಳ್ಳಿಯ ಜನರು ಕರ್ನಾಟಕ ಸೇರುವ ಹಂಬಲ ಹೊರಹಾಕಿದ್ದಾರೆ. ತಮ್ಮ ಗ್ರಾಮಗಳಿಗೆ ಸೂಕ್ತ ಮೂಲ ಸವಲತ್ತು ಕಲ್ಪಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ ನಾವು ಕರ್ನಾಟಕ ಸೇರಲು ಬಯಸುತ್ತೇವೆ ಎಂದು ಅಕ್ಕಲಕೋಟೆ ತಾಲೂಕಿನ ತಡವಳದಲ್ಲಿ ಸಭೆ ಸೇರಿ 43 ಹಳ್ಳಿಗಳ ಜನ ಘೋಷಿಸಿದ್ದಾರೆ. ಈ ಸಂಬಂಧ ಸಭೆಯಲ್ಲಿ ಠರಾವು ಕೂಡ ಪಾಸ್‌ ಮಾಡಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಕರ್ನಾಟಕ, ಕನ್ನಡಿಗರ ಜತೆಗೆ ಜಗಳಕ್ಕೆ ನಿಲ್ಲುತ್ತಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಇದೀಗ ತನ್ನ ಗಡಿಭಾಗದ ಜನರೇ ಕರ್ನಾಟಕ ಸೇರುವ ಘೋಷಣೆ ಮೊಳಗಿಸುತ್ತಿರುವುದು ತೀವ್ರ ಇರುಸು ಮುರುಸು ಉಂಟುಮಾಡಿದೆ.
ಸೊಲ್ಲಾಪುರ ಸೇರಿದಂತೆ ಅಕ್ಕಲಕೋಟೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರಂಭದಿಂದಲೂ ಅಕ್ಕಲಕೋಟೆಯ ಜನ ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕುರಿತು ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಇದೀಗ ಎರಡೂ ರಾಜ್ಯಗಳ ನಡುವೆ ಸಂಘರ್ಷದ ಬಿಸಿ ಏರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನ ಮತ್ತೆ ಕರ್ನಾಟಕ ಸೇರುವ ತಮ್ಮ ಆಕಾಂಕ್ಷೆ ಹೊರಹಾಕಿದ್ದಾರೆ.

ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾ​ರಾಷ್ಟ್ರದ ಸಚಿವರು ಬೆಳ​ಗಾ​ವಿ​ಗೆ, ಎಂಇ​ಎ​ಸ್‌ ಜತೆ ಚರ್ಚೆ

ಕರ್ನಾಟಕದ ಬೆಳಗಾವಿ ಜನರ ಬಗ್ಗೆ ಚಿಂತಿಸಬೇಡಿ, ಮೊದಲು ಮಹಾರಾಷ್ಟ್ರದಲ್ಲಿರುವ ಜನರ ಹಿತ ಕಾಪಾಡಲು ಕ್ರಮ ಕೈಗೊಳ್ಳಿ ಎಂದು ಬಿಸಿ ಮುಟ್ಟಿಸಿರುವ ಈ ಭಾಗದ ಜನ, ಮಹಾಜನ್‌ ಆಯೋಗದ ವರದಿಯಂತೆ ಕೂಡಲೇ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲೂ ನಿರ್ಣಯ ಕೈಗೊಂಡಿದ್ದಾರೆ.

ಜತ್‌ ತಾಲೂಕಿನ ಕನ್ನಡಿಗರಿಗೆ ಕರ್ನಾಟಕ ಸೇರೋ ಆಹ್ವಾನ ನೀಡಿದ ಕರವೇ

ಬೆಳಗಾವಿ: ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತು ಕರ್ನಾಟಕಕ್ಕೆ ಸೇರುವ ಘೋಷಣೆ ಮೊಳಗಿಸಿರುವ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಕನ್ನಡಿಗರಿಗೆ ಇದೀಗ ಬೆಳಗಾವಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ಘೋಷಿಸಿದ್ದಾರೆ. 

ಜತ್‌ ತಾಲೂಕಿನ ಬಾಲಗಾಂವ್‌ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಪ್ರತಿಭಟನೆಗಿಳಿದಿರುವ ಅಲ್ಲಿನ ಕನ್ನಡಿಗರನ್ನು ಕರ್ನಾಟಕಕ್ಕೆ ಆಹ್ವಾನಿಸಿದ್ದಾರೆ. ಕಾಗವಾಡ ತಾಲೂಕು ಕರವೇ ಅಧ್ಯಕ್ಷ ಸಿದ್ದು ಒಡೆಯರ್‌ ನೇತೃತ್ವದಲ್ಲಿ ಕಾರ್ಯಕರ್ತರು ತಾಯಿ ಭುವನೇಶ್ವರಿ ದೇವಿ ಫೋಟೋ ನೀಡಿ ಅಲ್ಲಿನ ಕನ್ನಡಿಗರಿಗೆ ಕರ್ನಾಟಕಕ್ಕೆ ಸೇರುವಂತೆ ಆಹ್ವಾನ ಕೊಟ್ಟಿದ್ದಾರೆ. ನೀರಿನ ಸೌಲಭ್ಯ ಮತ್ತು ಮೂಲ ಸೌಕರ್ಯ ವಂಚಿತ ಜತ್‌ ತಾಲೂಕಿನ 42 ಗ್ರಾಮಗಳ ಜನ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಕರ್ನಾಟಕ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.
 

Follow Us:
Download App:
  • android
  • ios