ಸುರಪುರ: ನೀಲಕಂಠರಾಯ ಗಡ್ಡೆ ಬಿಡಲೊಪ್ಪದ ನಿವಾಸಿಗಳು..!
ಮಳೆಗಾಲ ಮತ್ತು ಪ್ರವಾಹದ ಸಂದರ್ಭದಲ್ಲಿನ ತೊಂದರೆ, ನೀಲಕಂಠರಾಯ ಗಡ್ಡೆಗೆ ಶಾಶ್ವತ ಬ್ರಿಡ್ಜ್, ನಿರಂತರ ವಿದ್ಯುತ್ ಪೂರೈಕೆಗೆ, ನಿವಾಸಿಗಳು ಒತ್ತಾಯ
ನಾಗರಾಜ್ ನ್ಯಾಮತಿ
ಸುರಪುರ(ನ.18): ನಾಲ್ಕೈದು ಶತಮಾನದಿಂದಲೂ ನೀಲಕಂಠರಾಯನ ಗಡ್ಡೆಯೊಂದಿಗೆ ನಂಟು ಇಟ್ಟುಕೊಂಡಿರುವ ಜನರು ನಾರಾಯಣಪುರದ ಬಸವಸಾಗರ ಅಣೆಕಟ್ಟು ತುಂಬಿದ ಬಳಿಕ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಬಿಟ್ಟಾಗ ತೊಂದರೆಗೊಳಗಾಗುತ್ತಾರೆ. ಆದರೂ ಇಲ್ಲಿನವರು ಸ್ಥಳಾಂತರಕ್ಕೆ ಸುತಾರಾಂ ಒಪ್ಪುತ್ತಿಲ್ಲ. ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ 17ನೇ ವಾರ್ಡ್‌ಗೆ ಒಳಪಡುತ್ತಿದೆ. ಪುರಸಭೆಯಿಂದ ಸುಮಾರು 35 ಕಿಮೀ ದೂರದಲ್ಲಿ ನೀಲಕಂಠರಾಯನ ಗಡ್ಡೆಯಿದೆ. ಮೊದಲಿನ ಪಟ್ಟಿಯಲ್ಲಿ 30 ಕುಟುಂಬಗಳಿದ್ದವು. ಪ್ರಸಕ್ತ ಸಾಲಿನಲ್ಲಿ ಸರ್ವೇ ಮಾಡಲಾಗಿದ್ದು, 60ಕ್ಕೂ ಹೆಚ್ಚು ಕುಟುಂಬಗಳಿಂದ 320ಕ್ಕೂ ಅಧಿಕ ಜನರು ವಾಸವಾಗಿದ್ದಾರೆ.
ಗುಡುಗುಂಟ ಮತ್ತು ಸುರಪುರ ಸಂಸ್ಥಾನದ ಅರಸರ ಸಹೋದರರಿಂದ ನೀಲಕಂಠರಾಯ ಗಡ್ಡೆಯಲ್ಲಿ ಆಳ್ವಿಕೆ ನಡೆಸಿದ ಅವಿಶೇಷ ಕೋಟೆಗಳು ಈಗಲೂ ಕಾಣಬಹುದು. ಹುಣಸಗಿ ತಾಲೂಕಿಗೆ ಹೋಗಲು ಒಪ್ಪದ ಇವರು ಸುರಪುರ ತಾಲೂಕಿನಲ್ಲಿ ಇರುವುದಾಗಿ ಪಟ್ಟು ಹಿಡಿದಿದ್ದಾರೆ. ಪುನರ್ವಸತಿ ಕಲ್ಪಿಸಲು ಎರಡ್ಮೂರು ಕಡೆ ಜಾಗ ನೋಡಲಾಗಿದೆ.
ಎಫ್‌ಡಿಎ, ಎಸ್‌ಡಿಎ ನೇಮಕಾತಿ ಅಕ್ರಮದ ತನಿಖೆಗೆ ಸರ್ಕಾರ ಮೀನಾಮೇಷ..!
ಮಳೆಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಉಪ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಕೊಂಡೊಯ್ಯಲು ಆಗುವುದಿಲ್ಲ. ಆದ್ದರಿಂದ ಈ ಮೊದಲೇ ಕೆಡದಂತ ಆಹಾರ ಪದಾರ್ಥಗಳನ್ನು ಸಂಗ್ರಹಿಸಡಬೇಕಾಗುತ್ತದೆ. ಮೇ ತಿಂಗಳಿನಿಂದಲೇ ಆಹಾರ ಪದಾರ್ಥಗಳನ್ನು ಶೇಖರಿಸಿಡಲಾಗುತ್ತದೆ. ಇಲ್ಲದಿದ್ದರೆ ಊಟಕ್ಕಾಗಿ ಪರದಾಡಬೇಕಾಗುತ್ತದೆ.
ಈಜು ಪರಿಣಿತರು:
ತುಂಬಿ ಹರಿಯುತ್ತಿರುವ ನದಿಯನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈಜುತ್ತಾರೆ. ಈಜುವುದರಲ್ಲಿ ಪ್ರತಿಯೊಬ್ಬರೂ ಪರಿಣಿತರು. ಇಲ್ಲಿಯವರೆಗೂ ಯಾರೊಬ್ಬರಿಗೂ ತೊಂದರೆಯಾಗಿಲ್ಲ ಎಂದರೆ ನಮ್ಮ ಕುಲದೈವ ನೀಲಕಂಠ ನಮ್ಮನ್ನು ರಕ್ಷಿಸುತ್ತಿದ್ದಾನೆ. ಈಜುಕಾಯಿ ಕಟ್ಟಿಕೊಂಡು ಈಜುತ್ತಾರೆ. ತುಂಬಿದ ಗರ್ಭಿಣಿ ಈಜಿರುವುದು ಈಗಲೂ ಎಲ್ಲರ ಮನದಲ್ಲಿ ಹಾಗೆಯಿದೆ.
ಶುದ್ಧ ನೀರಿಲ್ಲ:
ನೀಲಕಂಠರಾಯನ ಗಡ್ಡೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಇಲ್ಲ. ಇದರಿಂದ ಸ್ಥಳೀಯವಾಗಿ ದೊರೆಯುವ ನೀರನ್ನು ಸೇವಿಸುತ್ತಾರೆ. ಮಳೆಗಾಲದಲ್ಲಿ ಕುಡಿಯಲು ನೀರು ಯೋಗ್ಯವಾಗಿರದೆ ಅಶುದ್ಧವಾಗಿರುತ್ತದೆ. ಇಲ್ಲಿನ ಗಡ್ಡೆಯ ಜನರು ಡ್ರಮ್‌ಗಳಲ್ಲಿ ನೀರನ್ನು ಸಂಗ್ರಹಿಸಿಡುತ್ತಾರೆ.
ವಿದ್ಯುತ್ ಸಮಸ್ಯೆ:
ಗಡ್ಡೆಯಲ್ಲಿ ವಿದ್ಯುತ್ ಸಮರ್ಪಕವಾಗಿರುವುದಿಲ್ಲ. ಮಳೆಗಾಲದಲ್ಲಿ ದಿನಕ್ಕೆ ಆರೇಳು ಗಂಟೆ ವಿದ್ಯುತ್ ದೊರೆತರೆ ದೊಡ್ಡದಾಗಿದೆ. ಬೆಳಗ್ಗೆ ವಿದ್ಯುತ್ ಸಂಜೆಯೇ ಬರುತ್ತದೆ. ಕೆಲವೊಮ್ಮೆ ವಿದ್ಯುತ್ ಇಲ್ಲದೆ ಮೇಣದ ಬತ್ತಿ, ಚಿಕ್ಕ ಬ್ಯಾಟರಿಯ ಬೆಳಕೆ ಗತಿಯಾಗಿದೆ. ಆದ್ದರಿಂದ ದಿನದ 24 ಗಂಟೆ ವಿದ್ಯುತ್ ಪೂರೈಸಿದರೆ ವಿದ್ಯಾಭ್ಯಾಸ ಮಾಡಲು, ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.
ಸೌಲಭ್ಯ ಕೊರತೆ:
ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿಕ ಕಾರಣದಿಂದ ರಸ್ತೆ ನಿರ್ಮಿಸಿಲ್ಲ. ಚರಂಡಿಯಂತೂ ಮೊದಲೇ ಇಲ್ಲ. ಜನರು ಶಿಕ್ಷಣಕ್ಕಾಗಿ ಹುಣಸಗಿ, ಕಕ್ಕೇರಾ ಸೇರಿದಂತೆ ದೂರದೂರುಗಳಿಗೆ ಪ್ರಯಾಣಿಸಬೇಕಿದೆ. ಆರೋಗ್ಯ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆಯಿದೆ. ಇಲ್ಲಿನ ಸಮಸ್ಯೆಗೆ ಜಿಲ್ಲಾಡಳಿತ ಮುಕ್ತಿ ನೀಡುವುದೇ ಕಾದು ನೋಡಬೇಕಿದೆ.
ವಸತಿ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿತಯಾರಿಸಲಾಗಿದೆ. ಮಾಸಾಶನ, ಅಂಗವಿಕಲ ವೇತನ ಆದೇಶ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಡಲಾಗುವುದು. ಜನರ ಸಮಸ್ಯೆಗಳಿದ್ದರೆ ಸ್ಥಳದಲ್ಲೇ ಬಗೆಹರಿಸಲು ಯತ್ನಿಸಲಾಗುವುದು ತಾಲೂಕಾಡಳಿತ ತಿಳಿಸಿದೆ.
ಬೆಳೆಹಾನಿ ಪರಿಹಾರದಲ್ಲಿ ರಾಜಕೀಯ ಮಾಡಬೇಡಿ: ರಾಜೂಗೌಡ
ಗರ್ಭಿಣಿಯರು ಆಸ್ಪತ್ರೆಗೆ ಹೋಗಲು ತೊಂದರೆಯಿದೆ. ಗುಣಮಟ್ಟದ ಬ್ರಿಡ್ಜ್ ನಿರ್ಮಿಸಿಕೊಟ್ಟರೆ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಇಲ್ಲಿಯೇ ಅಂಗನವಾಡಿ ಆರಂಭಿಸಿ, 1 ರಿಂದ 5ನೇ ತರಗತಿಗೆ ಇರುವುದನ್ನು 8ನೇ ತರಗತಿಗೆವರೆಗೆ ಹೆಚ್ಚಿಸಬೇಕು. ಜಮೀನುಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿಕೊಡಬೇಕು ಅಂತ ನೀಲಕಂಠರಾಯ ಗಡ್ಡೆ ನಿವಾಸಿ ಅಮರಪ್ಪ ಕನಕಪ್ಪ ಹೇಳಿದ್ದಾರೆ.
ಮೂರು ತಲೆಮಾರು ಕಳೆದು ನಾಲ್ಕನೇ ತಲೆಮಾರು ಜೀವಿಸುತ್ತಿದ್ದೇವೆ. 400 ವರ್ಷದಿಂದ ಇಲ್ಲಿರುವ ಜನರನ್ನು ಸ್ಥಳಾರಿಸಿದರೆ ನಮ್ಮ ಮನಸ್ಸು ಇಲ್ಲಿರಲು ಹೇಗೆ ಸಾಧ್ಯ. ಹೊಲ, ಮನೆ, ಪ್ರಾಣಿ, ಇಲ್ಲಿನ ಪರಿಸರ ಬಿಟ್ಟು ಹೋಗಲು ನಮ್ಮಿಂದ ಆಗುತ್ತಿಲ್ಲ. ಹಿರಿಯರೊಂದಿಗೆ ನಾವಿದ್ದೇವೆ. ಇಲ್ಲಿರುವ ಸಂಬಂಧ ಕಡಿದುಕೊಳ್ಳಲು ಆಗುವುದಿಲ್ಲ ಅಂತ ನೀಲಕಂಠರಾಯ ಗಡ್ಡೆಯ ನಿವಾಸಿ ಅಮರಮ್ಮ ದುರ್ಗಪ್ಪ ತಿಳಿಸಿದ್ದಾರೆ.