ಬಳ್ಳಾರಿ(ಜೂ.15): ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ನಗರದ ಮಾಂಸಹಾರಿಗಳನ್ನು ಭಯಭೀತರನ್ನಾಗಿಸಿದೆ.ಇಲ್ಲಿನ ಕೌಲ್‌ಬಜಾರ್‌ ಪ್ರದೇಶದಲ್ಲಿ ಪ್ರತಿ ಭಾನುವಾರ ಬರೀ ಒಂದು ಗಂಟೆಯೊಳಗೆ ಬಿಕರಿಯಾಗುತ್ತಿದ್ದ ‘ಕೌಲ್‌ಬಜಾರ್‌ ಬಿರಿಯಾನಿ’ಯನ್ನು ಭಾನುವಾರ ಕೇಳುವವರಿರಲಿಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೋನಾ: ಮನೆಯಿಂದ ಹೊರ ಬರಲು ಜನರ ಹಿಂದೇಟು

ವೈರಸ್‌ ಭೀತಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ. ಕೌಲ್‌ಬಜಾರ್‌ ಬಿರಿಯಾನಿ ಎಷ್ಟುಪ್ರಸಿದ್ಧಿ ಎಂದರೆ, ಹೊರ ರಾಜ್ಯ, ದೇಶಗಳಲ್ಲಿರುವ ಬಿರಿಯಾನಿ ಪ್ರಿಯರು, ಬಳ್ಳಾರಿಗೆ ಬಂದರೆ ಕೌಲ್‌ಬಜಾರ್‌ ಬಿರಿಯಾನಿ ತಿಂದು ತೃಪ್ತರಾಗುತ್ತಾರೆ. ಹೈದರಾಬಾದ್‌ ಕರ್ನಾಟಕದ ಜಿಲ್ಲೆಯ ಬಿರಿಯಾನಿ ಪ್ರಿಯರಿಗೆ ಬಳ್ಳಾರಿಯ ಕೌಲ್‌ಬಜಾರ್‌ ಬಿರಿಯಾನಿ ಪರಿಚಿತ.

ಈ ಪ್ರದೇಶದಲ್ಲಿ ವಿವಿಧ ಬಿರಿಯಾನಿ ಹೋಟೆಲ್‌ಗಳು ಇದ್ದು, ಅಜೀಮ್‌ ಬಿರಿಯಾನಿ ಅಂಗಡಿ ಮುಂದೆ ನೂರಾರು ಜನರು ಮುಗಿ ಬೀಳುತ್ತಾರೆ. ಸುಮಾರು 50 ರಿಂದ 1 ಲಕ್ಷ ವರೆಗೆ ವ್ಯಾಪಾರ​-ವಹಿವಾಟು ನಡೆಯುತ್ತಿರಬಹುದು ಎಂದು ಅಂದಾಜಿಸಲಾಗುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲೂ ಪ್ರತಿ ಭಾನುವಾರ ಬಿರಿಯಾನಿಗಾಗಿ ಜನರು ಸಾಲುಗಟ್ಟಿನಿಲ್ಲುತ್ತಿದ್ದರು. ಇದಕ್ಕಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ, ಈ ಭಾನುವಾರ ಬಿರಿಯಾನಿ ಅಂಗಡಿ ಮುಂದೆ ಗ್ರಾಹಕರು ಕಂಡು ಬರಲಿಲ್ಲ. ಕೊರೋನಾ ವೈರಸ್‌ ಹೆಚ್ಚಳವಾಗುತ್ತಿರುವುದರಿಂದ ಜನರು ಮಾಂಸ ತಿನ್ನಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದರು.