ಗದಗ(ಜೂ.06):  ಜಿಲ್ಲೆಯಲ್ಲಿ ಎರಡನೇ ಹಂತದ ಬಿಗಿ ಲಾಕ್‌ಡೌನ್‌ಗೆ ದಿನೇ ದಿನೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ನಗರದ ಮುಖ್ಯ ರಸ್ತೆಗಳಲ್ಲಿ, ಮಾರುಕಟ್ಟೆಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ ಇದ್ದರೂ ಜನರ ಸಂಚಾರ ಕಡಿಮೆಯಾಗಿಲ್ಲ. ದಿನಕಳೆದಂತೆ ಜನರು ಲಾಕ್‌ಡೌನ್‌ ನಿಯಮ ಪಾಲಿಸದೇ ರಸ್ತೆಗಿಳಿಯುತ್ತಿದ್ದಾರೆ.

ಕೊರೋನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ನಿರ್ಧಾರಕ್ಕೆ ಜನರ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್‌ ಸೋಂಕಿನ ಪ್ರಮಾಣ ಸಂಪೂರ್ಣ ಕಡಿಮೆಯಾಗುವ ಹೊಸ್ತಿಲಲ್ಲಿ ಈ ರೀತಿ ಜನರಿಂದ ಮತ್ತೆ ನಿರ್ಲಕ್ಷ್ಯ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಗದಗ: ಕಾಂಗ್ರೆಸ್‌ ಮುಖಂಡನ ಅಂತ್ಯಸಂಸ್ಕಾರ ವೇಳೆ ಜನಜಾತ್ರೆ

ಗದಗ ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸರು ಬಿಗಿಯಾದ ಬಂದೋಬಸ್ತ್‌ ಕಲ್ಪಿಸಿದ್ದು, ಅಲ್ಲಿ ಜನಸಂಚಾರ ವಿರಳವಾಗಿದೆ. ಆದರೆ ಇನ್ನುಳಿದ ಪ್ರದೇಶಗಳಲ್ಲಿ ಜನ ಸಂಚಾರ ಹಾಗೆಯೇ ಮುಂದುವರೆದಿದೆ. ಜನರ ಬೇಕಾಬಿಟ್ಟಿಓಡಾಟ ಕಡಿಮೆಯಾಗುತ್ತಿಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಇಲ್ಲದ ಪರಿಣಾಮ ಲಾಕ್‌ಡೌನ್‌ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ.

ಈಗಾಗಲೇ ಪಾಸಿಟಿವಿಟಿ ದರ ಕಡಿಮೆಯಾಗುವ ಜಿಲ್ಲೆಗಳಿಗೆ ಆದ್ಯತೆಗನುಸಾರ ಸಡಿಲಿಕೆ ಮಾಡುವ ಕುರಿತು ಮುಖ್ಯಮಂತ್ರಿ ಹೇಳಿದ್ದಾರೆ. ಜಿಲ್ಲಾಡಳಿತವೂ ಪಾಸಿಟಿವಿಟಿ ದರ ಕಡಿಮೆಯಾಗಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮುಖ್ಯವಾಗಿ ಬಿಗಿಯಾದ ಲಾಕ್‌ಡೌನ್‌ ಜಾರಿ ಮಾಡಿದೆ. ಆದರೆ ಮೊದಲ 5 ದಿನ ಬಿಗಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ತೋರಿದ್ದ ಜನರು 2ನೇ ಹಂತದಲ್ಲಿ ನೀರಸ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಲಾಕ್‌ಡೌನ್‌ ನಿಯಮ ಅನುಷ್ಠಾನವಾಗುತ್ತಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona