ರೋಣದಲ್ಲಿ ಲಾಕ್‌ಡೌನ್‌ಗೆ ಕ್ಯಾರೇ ಎನ್ನದ ಜನ..!
* ಗ್ರಾಪಂ ಕೂಗಳತೆಯಲ್ಲೇ ದಿನವಿಡೀ ತೆರೆದಿರುವ ಹೋಟೆಲ್, ಕಿರಾಣಿ ಅಂಗಡಿಗಳು
* ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕುಳಿತುಕೊಳ್ಳುವ ಜನ
* ಸೂಚನೆಗೆ ಕಿವಿಗೊಡದ ಜನತೆ
ಪಿ.ಎಸ್. ಪಾಟೀಲ
ರೋಣ(ಜೂ.04): ಕೊರೊನಾ 2ನೇ ಅಲೆಗೆ ಬಹುತೇಕ ನಗರ, ಹಳ್ಳಿಗಳು ತಲ್ಲಣಗೊಂಡಿದ್ದು, ಲಾಕ್‌ಡೌನ್ ನಿಯಮ ಪಾಲನೆಗೆ ಸ್ವಯಂ ಮುಂದಾಗಿದ್ದಾರೆ. ಆದರೆ ತಾಲೂಕಿನ ಹುಲ್ಲೂರಲ್ಲಿ ಕೊರೋನಾ ಲಾಕ್‌ಡೌನ್ ನಿಯಮಕ್ಕೆ ಜನ ಕ್ಯಾರೆ ಎನ್ನದೇ ದಿನವಿಡೀ ಅನಗತ್ಯ ಹೊರಗಡೆ ತಿರುಗುತ್ತಾರೆ! ದೇವಸ್ಥಾನ, ಶಾಲೆ, ಅಂಗನವಾಡಿಯಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕುಳಿತಿರುವುದು, ಮುಖ್ಯ ಬಜಾರದಲ್ಲಿ ಸಾಮಾಜಿಕ ಅಂತರ ಪಾಲಿಸದೇ, ಮಾಸ್ಕ್ ಧರಿಸದೆ ಸಂಚರಿಸುವುದು ಸಾಮಾನ್ಯವಾಗಿದೆ.
ಕಾರ್ಯಪಡೆ ನಿರ್ಲಕ್ಷ್ಯ
ಇಲ್ಲಿನ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್ (ಕಾರ್ಯಪಡೆ) ಕಾಟಾಚಾರಕ್ಕೆ ಎಂಬಂತಿದೆ. ಗ್ರಾಮದ ಮಧ್ಯ ಭಾಗದಲ್ಲಿರುವ ಗ್ರಾಪಂ ಕಾರ್ಯಾಲಯ ಎದುರೇ ಜನ ಗುಂಪು ಗುಂಪಾಗಿ ಕುಳಿತಿರುತ್ತಾರೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯ ಹೊರಗಡೆ ಸಂಚರಿಸುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗುಂಪು ಕುಳಿತು ಹರಟೆ ಹೊಡೆಯುವವರಿಗೆ ಬಿಸಿ ಮುಟ್ಟಿಸಿಲ್ಲ. ಇದರಿಂದ ಇಲ್ಲಿನ ಕೆಲ ಜನರಿಗೆ ಕೊರೋನಾ ಕಾಯಿಲೆ ಮತ್ತು ಲಾಕ್‌ಡೌನ್ ನಿಯಮ ಪಾಲನೆ ಭಯ ಇಲ್ಲದಂತಾಗಿದೆ.
ಕಿರಾಣಿ, ಹೊಟೇಲ್ ಓಪನ್:
ಜಿಲ್ಲಾಡಳಿತ ಕಿರಾಣಿ ಸಾಮಗ್ರಿ ಖರೀದಿಗಾಗಿ ಜೂನ್ 1 ಮತ್ತು 2ರಂದು ಅವಕಾಶ ನೀಡಿತ್ತು. ಇದನ್ನು ಹೊರತುಪಡಿಸಿ ಮತ್ತೆ ಜೂನ್ 7ರ ವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರೆಸಿದೆ. ದಿನವಿಡೀ ಕಿರಾಣಿ ಅಂಗಡಿ, ಜನರಲ… ಸ್ಟೋರ್, ಚಹಾದ ಅಂಗಡಿ, ತರಕಾರಿ ಅಂಗಡಿ, ಕೋಲ್ಡಿ್ರಂಕ್ಸ್ ಅಂಗಡಿಗಳು ತೆರೆದಿರುತ್ತವೆ. ಅದರಲ್ಲೂ ಗ್ರಾಪಂ ಕಚೇರಿಯ ಸಮೀಪದಲ್ಲಿಯೇ ಕೇವಲ 20 ಮೀಟರ್ ಅಂತರದಲ್ಲಿ 6ಕ್ಕೂ ಹೆಚ್ಚು ಕಿರಾಣಿ ಅಂಗಡಿ, 4ಕ್ಕೂ ಹೆಚ್ಚು ಚಹಾದ ಅಂಗಡಿಗಳು ತೆರೆದಿರುತ್ತವೆ. ಈ ಕುರಿತು ಗ್ರಾಪಂ ಅಧಿಕಾರಿಗಳು ಗಮನ ಹರಿಸದೇ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.
ಲಾಕ್‌ಡೌನ್ ಎಫೆಕ್ಟ್: ಹೆಚ್ಚಿದ ಅಕ್ರಮ ಮದ್ಯದ ಹಾವಳಿ
ಸೂಚನೆಗೆ ಕಿವಿಗೊಡದ ಜನತೆ
ಪ್ರತಿದಿನ ಬೆಳಗ್ಗೆ ಗ್ರಾಪಂ ಟಾಸ್ಕ್ ಫೋರ್ಸ್ ಸಮಿತಿ ಗ್ರಾಮದ ಕೆಲ ಆಯ್ದ ಪ್ರದೇಶದಲ್ಲಿ, ಕೇವಲ ಒಂದೇ ಒಂದು ಸುತ್ತು ಕಾಟಾಚಾರಕ್ಕೆ ಎಂಬಂತೆ ಸಂಚರಿಸುತ್ತಿದ್ದು, ಇದರಿಂದ ಸಮಿತಿ ಕಂಡೊಡನೆ ಮರೆಯಾಗುವ ಜನತೆ ಮತ್ತೆ ಸಮಿತಿ ಮರೆಯಾಗುತ್ತಿದ್ದಂತೆ ಮನೆಯಿಂದ ಹೊರ ಬಂದು ಗುಂಪು ಕುಳಿತು ಹರಟೆ ಹೊಡೆಯತ್ತಾರೆ. ಗ್ರಾಮದಲ್ಲಿ ಒಟ್ಟು 13 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ದಿನದ ಹಿಂದೆ ಓರ್ವ ಕೊರೋನಾಗೆ ಬಲಿಯಾಗಿದ್ದಾನೆ. ಹೀಗಿದ್ದಾಗ್ಯೂ ಜನತೆ ಎಚ್ಚೆತ್ತುಕೊಂಡಿಲ್ಲ. ಅನಗತ್ಯ ಹೊರಗಡೆ ತಿರುಗಾಡುವುದನ್ನು ಕೈಬಿಟ್ಟಲ್ಲ.
ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ, ಲಾಕ್‌ಡೌನ್ ನಿಯಮ ಪಾಲಿಸುವಂತೆ ಸಾಕಷ್ಟು ಬಾರಿ ಹೇಳಲಾಗಿದೆ. ದೇವಸ್ಥಾನ, ಶಾಲೆಗಳಲ್ಲಿ ಗುಂಪಾಗಿ ಕುಳಿತುಕೊಳ್ಳದಂತೆ ಈಗಾಗಲೇ ಡಂಗೂರ ಸಾರಿದ್ದು, ಧ್ವನಿ ವರ್ಧಕದ ಮೂಲಕ ಸೂಚನೆ ನೀಡಲಾಗಿದೆ. ಆದರೆ ಜನ ಮಾತು ಕೇಳುತ್ತಿಲ್ಲ. ಪೊಲೀಸರಿಗೆ ಮಾತ್ರ ಮಾತು ಕೇಳುತ್ತಾರೆ. ತಕ್ಷಣ ಇಬ್ಬರು ಪೊಲೀಸರನ್ನು ನಿಯೋಜಿಸುವಂತೆ ನಮ್ಮ ಮೇಲಧಿಕಾರಿಗಳಲ್ಲಿ ವಿನಂತಿಸುತ್ತೇನೆ ಎಂದು ಹುಲ್ಲೂರ ಗ್ರಾಪಂ ಪಿಡಿಒ ಎಚ್.ಎಲ್.ಇಮ್ರಾಪುರ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona