ರಾಜಧಾನಿಯಲ್ಲಿ ಕೊರೋನಾರ್ಭಟ: ಮತ್ತೆ ಬೆಂಗ್ಳೂರು ತೊರೆಯುತ್ತಿರುವ ಜನ..!
ಬೆಂಗಳೂರಲ್ಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ| ರಾಜಧಾನಿಯಲ್ಲಿ ಹೊತ್ತಿ ಉರಿಯುತ್ತಿರುವ ಕೊರೋನಾ ಕಂಡು ಕಂಗಾಲಾದ ಜನ| ಕೊರೋನಾ ಹೆಮ್ಮಾರಿ ಆರ್ಭಟ ಕಂಡು ಬೆಚ್ಚಿ ಬಿದ್ದ ಹೊರ ಜಿಲ್ಲೆಗಳ ಜನ| ಪ್ರಾಣ ಉಳಿದರೆ ಸಾಕು ಅಂತ ತಮ್ಮ ತಮ್ಮ ಊರುಗಳಿಗೆ ವಾಪಸ್|
ವಿಜಯಪುರ(ಏ.18): ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದ ಜನರು ತಮ್ಮ ತಮ್ಮ ಊರಿನತ್ತ ಮುಖ ಮಾಡುತ್ತಿದ್ದಾರೆ. ಹೌದು, ಪ್ರಾಣ ಉಳಿದರೆ ಸಾಕು ಅಂತ ತಮ್ಮ ಜಿಲ್ಲೆಗಳಿಗೆ ವಾಪಸ್ ಹೋಗುತ್ತಿದ್ದಾರೆ. ಅದೇ ರೀತಿ ಖಾಸಗಿ ಕಂಪನಿ, ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಹೋಗಿದ್ದ ಯುವಕರು ಜಿಲ್ಲೆಗೆ ವಾಪಸ್ ಅಗುತ್ತಿದ್ದಾರೆ.
ಕೊರೋನಾ ಆಟಾಟೋಪಕ್ಕೆ ಹೊರ ಜಿಲ್ಲೆಗಳ ಜನರೇ ಕಂಗಾಲಾಗಿದ್ದಾರೆ. ಸಿಲಿಕಾನ್ ಸಿಟಿ ಮತ್ತೆ ಲಾಕ್‌ಡೌನ್ ಆಗುವ ಭಯದಿಂದ ನೂರಾರು ಜನರು ವಿಜಯಪುರಕ್ಕೆ ವಾಪಸ್ ಬರುತ್ತಿದ್ದಾರೆ. ಪೋಷಕರ ಜೊತೆ ಪುಟ್ಟ ಪುಟ್ಟ ಮಕ್ಕಳು ಲಗೇಜ್ ಸಮೇತ ಬೆಂಗಳೂರು ತೊರೆಯುತ್ತಿದ್ದಾರೆ.
2ನೇ ಲಾಕ್‌ಡೌನ್ ಭೀತಿ: ಮತ್ತೆ ಕಾರ್ಮಿಕರ ಗುಳೆ ಆರಂಭ!
ಸದ್ಯ ಕೋವಿಡ್ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಬೆಂಗಳೂರಲ್ಲಿ ಕೊರೋನಾ ರೋಗಿಗಳಿಗೆ ಬೆಡ್, ಆಕ್ಸಿಜನ್ ಸಿಗ್ತಿಲ್ಲ, ಕಂಡಿಷನ್ ಕ್ರಿಟಿಕಲ್ ಆಗುತ್ತಿದೆ. ಹೀಗಾಗಿ ಸ್ವಲ್ಪ ದಿನ ಊರಲ್ಲಿದ್ದು ಕೊರೋನಾ ತಣ್ಣಗಾದ ಮೇಲೆ ವಾಪಸ್ ಬೆಂಗಳೂರಿಗೆ ಹೋಗುತ್ತೇವೆ ಎಂದು ಜನರು ಹೇಳುತ್ತಿದ್ದಾರೆ.