Asianet Suvarna News Asianet Suvarna News

2ನೇ ಲಾಕ್‌ಡೌನ್ ಭೀತಿ: ಮತ್ತೆ ಕಾರ್ಮಿಕರ ಗುಳೆ ಆರಂಭ!

ಮತ್ತೆ ಕಾರ್ಮಿಕರ ಗುಳೆ ಆರಂಭ| ಬೆಂಗಳೂರಿಂದ ರೈಲಲ್ಲಿ ಊರಿಗೆ ವಾಪಸ್‌| ನಿತ್ಯ ಸಾವಿರಾರು ಜನ ಉತ್ತರ ಭಾರತಕ್ಕೆ

Fear Of Another lockdown Migrant Workers Started Rush To Hometowns pod
Author
Bangalore, First Published Apr 8, 2021, 7:16 AM IST

ಬೆಂಗಳೂರು(ಏ.08/): ದೇಶಾದ್ಯಂತ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಏ.8ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಕರೆದಿದ್ದಾರೆ. ಮೊದಲನೇ ಅಲೆ ಸಂದರ್ಭದಂತೆ ಈ ಬಾರಿಯೂ ಮೋದಿ ಏಕಾಏಕಿ ಲಾಕ್‌ಡೌನ್‌ ಘೋಷಿಸಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕದಿಂದ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ.

ಪ್ರಮುಖವಾಗಿ ಉತ್ತರ ಭಾರತ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ, ಮಣಿಪುರ ರಾಜ್ಯಗಳ ದಿನಗೂಲಿ ನೌಕರರು, ಕೂಲಿಗಳು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಕಸುಬುಗಳನ್ನು ನಂಬಿಕೊಂಡಿದ್ದ ಕಾರ್ಮಿಕ ವರ್ಗ ಗುಳೆ ಹೊರಟಿದೆ. ಮೂಲಗಳ ಪ್ರಕಾರ, ನಿತ್ಯ ಸಾವಿರಾರು ಮಂದಿ ಕಾರ್ಮಿಕರು ಲಭ್ಯ ರೈಲಿನಲ್ಲಿ ತಮ್ಮ ಸ್ವಂತ ರಾಜ್ಯಗಳಿಗೆ ಹಿಂತಿರುಗಿದ್ದಾರೆ.

ಚುನಾವಣೆ ನೆಪದಲ್ಲಿ ಊರು ಸೇರಿದ ಜನ:

ಕೊರೋನಾ ಎರಡನೇ ಅಲೆಗೆ ಭಯ ಬಿದ್ದಿರುವ ಜನರು ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ, ಜಾರ್ಖಂಡ್‌, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸೇರಿ ಪಂಚರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಮತ ಚಲಾಯಿಸುವ ನೆಪದಲ್ಲಿ ಈಗಾಗಲೇ ಬೆಂಗಳೂರು ಬಿಟ್ಟಿದ್ದಾರೆ.

ಬೆಂಗಳೂರಿನ ಹಲವು ಬಡಾವಣೆಗಳಲ್ಲಿರುವ ನೆಲೆಸಿರುವ ತಮಿಳರು ಹಾಗೂ ಮಲಯಾಳಿಗಳು ಯುಗಾದಿ ಬಳಿಕ ಮತ್ತೆ ಮರಳುವುದಾಗಿ ತಿಳಿಸಿದ್ದಾರೆ. ಶ್ರೀರಾಂಪುರ ಸುತ್ತಲಿನ ಹಲವು ಕುಟುಂಬಗಳು ಮನೆ ಖಾಲಿ ಮಾಡಿಕೊಂಡು ತಮ್ಮ ಊರುಗಳಿಗೆ ತೆರಳಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಫಣಿರಾಜ್‌.

‘ನಾನು ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದೇನೆ. ಚಿಕ್ಕ ಶೆಡ್‌ವೊಂದರಲ್ಲಿ ಕುಟುಂಬದೊಂದಿಗೆ ನೆಲೆಸಿದ್ದೇನೆ. ಇದೀಗ ಮತ್ತೆ, ಲಾಕ್‌ಡೌನ್‌, ನೈಟ್‌ ಕಪ್ರ್ಯೂ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿ ಮಾಡುವುದರಿಂದ ಕೆಲಸ ಸಿಗದಿದ್ದರೆ, ನಿರುದ್ಯೋಗಿಯಾಗಿ ಬೆಂಗಳೂರಿನಲ್ಲಿ ದಿನ ಸಾಗಿಸುವುದು ಕಷ್ಟದ ವಿಷಯ. ಇದನ್ನು ಕಳೆದ ವರ್ಷವೇ ಅನುಭವಿಸಿರುವುದು ಸಾಕು. ಹೀಗಾಗಿ, ಯುಗಾದಿ ಹಬ್ಬ ಮತ್ತು ಮಸ್ಕಿ ಉಪ ಚುನಾವಣೆ ಇರುವುದರಿಂದ ಬುಧವಾರವೇ ಊರಿಗೆ ತೆರಳುತ್ತಿದ್ದೇವೆ’ ಎನ್ನುತ್ತಾರೆ ರಾಯಚೂರು ಮೂಲದ ಮಲ್ಲಿಕಾರ್ಜುನ.

ಇನ್ನು ಉತ್ತರ ಭಾರತೀಯರು ಸಾಮಾನ್ಯವಾಗಿ ಸಣ್ಣ ಪುಟ್ಟಕೆಲಸಗಳನ್ನು ಮಾಡಿಕೊಂಡಿರುವುದರಿಂದ ಲಾಕ್‌ಡೌನ್‌ ಪದ ಭೀತಿಗೊಳಿಸಿದೆ. ‘ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದರೆ, ಉತ್ತರ ಭಾರತ ರಾಜ್ಯಗಳಿಗೆ ತಲುಪಲು ಸಮಸ್ಯೆಯಾಗಲಿದೆ. ಅತಂತ್ರ ಪರಿಸ್ಥಿತಿ ಎದುರಾದರೆ, ಜೀವನ ನಡೆಸುವುದು ಕಷ್ಟ. ಆದ್ದರಿಂದ ಪ್ರಧಾನಿ ಲಾಕ್‌ಡೌನ್‌ ಘೋಷಿಸುವ ಮೊದಲೇ ಊರಿಗೆ ಸೇರಿಕೊಳ್ಳುವುದು. ಉತ್ತಮ ಅಲ್ಲಿ ಕೆಲಸವಿಲ್ಲದಿದ್ದರೂ ಕುಟುಂಬ ಜೊತೆಯಾದರೂ ಕಾಲ ಕಳೆಯಬಹುದು’ ಎನ್ನುತ್ತಾರೆ ಉತ್ತರ ಪ್ರದೇಶ ಮೂಲದ ರಿಷಭ್‌.

ಏಕೆ ಭೀತಿ?

- ಇಂದು ಕೋವಿಡ್‌ ಕುರಿತು ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

- ಮೋದಿ ಲಾಕ್‌ಡೌನ್‌ ಘೋಷಿಸಬಹುದು ಎಂಬ ವದಂತಿ

- ಇದಕ್ಕೆ ಬೆಚ್ಚಿ ಊರಿನತ್ತ ಹೊರಟ ಬೆಂಗಳೂರು ಕಾರ್ಮಿಕರು

- ಮರಳಿ ಹೊರಟವರಲ್ಲಿ ಉತ್ತರ ಪ್ರದೇಶ, ಹರಾರ‍ಯಣ, ಅಸ್ಸಾಂ, ಮಣಿಪುರದವರೇ ಹೆಚ್ಚು

- ಈಗಾಗಲೇ ಚುನಾವಣೆಗಾಗಿ ವಾಪಸ್‌ ಹೋಗಿರುವ ಬಂಗಾಳ, ತಮಿಳುನಾಡು, ಕೇರಳ ಕಾರ್ಮಿಕರು

Follow Us:
Download App:
  • android
  • ios