ಜನ ಬೆಂಗಳೂರು ತೊರೆಯುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.  ಇದರಿಂದ ಬಸ್‌ ಗಳು ಸಂಪೂರ್ಣ ರಷ್ ಆಗಿವೆ. 

ಬೆಂಗಳೂರು [ಮಾ.15]: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ತೊರೆಯುವವರ ಸಂಖ್ಯೆ ಹೆಚ್ಚಳವಾದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಗಳಿಗೆ ಶನಿವಾರ ಅನಿರೀಕ್ಷಿತ ಡಿಮ್ಯಾಂಡ್ ಉಂಟಾಗಿತ್ತು. 

ಕಳೆದೊಂದು ವಾರದಿಂದ ಕೆಎಸ್ ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದ್ದರಿಂದ ಶನಿವಾರವೂ ಭಾರೀ ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ರೀತಿಯಾಗಲಿಲ್ಲ. ಬದಲಾಗಿ, ಶನಿವಾರ ಬೆಳಗ್ಗೆಯಿಂದಲೇ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ಅದರಲ್ಲೂ ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ವೋಲ್ವೋ ಬಸ್‌ಗಳು ಶೇ. 100ರಷ್ಟು ಭರ್ತಿಯಾಗಿದ್ದವು. ಇನ್ನು ಮೈಸೂರು, ಶಿವಮೊಗ್ಗ, ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ನಿಗದಿತ ಬಸ್‌ಗಳು ಭರ್ತಿಯಾಗಿದ್ದರಿಂದ ಈ ಮಾರ್ಗಗಳಲ್ಲಿ 40 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಯಿತು.

ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ...

ರಾಜಧಾನಿ ತೊರೆಯುತ್ತಿದ್ದಾರಾಜನ?: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಮಂದಿ ಊರುಗಳತ್ತ ಮುಖ ಮಾಡಿರುವ ಸಾಧ್ಯತೆಯಿದೆ. ಇದಲ್ಲದೆ, ವಾರಾಂತ್ಯ ರಜೆ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದಲೂ ಶನಿವಾರ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿರಬಹುದು. 

ಇದರ ಪರಿಣಾಮವಾಗಿ ಕೆಲ ಮಾರ್ಗಗಳಿಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಬೇಕಾಯಿತು ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ಹೇಳಿದರು. ಆದರೆ ಹೊರ ರಾಜ್ಯಗಳಿಗೆ ತೆರಳುವ ವರ ಸಂಖ್ಯೆ ಕುಸಿದಿದೆ ಎಂದರು.