ನವದೆಹಲಿ [ಮಾ.15]: ದೇಶಾದ್ಯಂತ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಿ ಜನರಲ್ಲಿ ಆತಂಕ ಉಲ್ಬಣಗೊಂಡಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ದೇಶದ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸೋಂಕು ಪೀಡಿತರು ಆತಂಕಪಡಬೇಕಿಲ್ಲ. ಈಗಾಗಲೇ ಸೋಂಕು ಪೀಡಿತರಾಗಿದ್ದವರ ಪೈಕಿ 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ ಎಂದು ತಿಳಿಸಿದೆ.

ಮತ್ತೊಂದೆಡೆ ಶನಿವಾರ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಸುದ್ದಿಗಳ ಅನ್ವಯ 16 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ 84 ಜನರ ಸಾವಿನ ಬಗ್ಗೆ ಮಾತ್ರ ಖಚಿತಪಡಿಸಲಾಗಿದೆ. ಮತ್ತೊಂದೆಡೆ ಜೊತೆಗೆ ಕೊರೋನಾ ಸೋಂಕಿನ ಲಕ್ಷಣದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಬುಲ್ಡಾನದ 71 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ. ಒಂದು ವೇಳೆ ಈ ಸಾವು ಕೊರೋನಾದಿಂದಲೇ ಆಗಿದ್ದು ಎಂದು ಖಚಿತವಾದರೆ, ಅದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದ ಮೂರನೇ ಪ್ರಕರಣವಾಗಲಿದೆ.

10 ಜನ ಗುಣಮುಖ: ಈ ನಡುವೆ ದೇಶದಲ್ಲಿ ಈವರೆಗೆ ಸೋಂಕು ಪೀಡಿತರಾಗಿದ್ದವರ ಪೈಕಿ 10 ಜನ ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಪೈಕಿ ಕೇರಳದ ಮೂವರು, ಉತ್ತರಪ್ರದೇಶದ 5, ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೋನಾ ಭಯ: ನಾನೊಬ್ಬನೇ ಮಗ, 100 ದಿನ ರಜೆ ಕೊಡಿ ಎಂದು ಪತ್ರ ಬರೆದ ಪೇದೆ..

16 ಹೊಸ ಕೇಸು:  ಈ ನಡುವೆ ಶನಿವಾರ ಮಹಾರಾಷ್ಟ್ರದಲ್ಲಿ 14, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ತಲಾ 1 ಹೊಸ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 100ಕ್ಕೆ ಏರಿದೆ. ಜೊತೆಗೆ ಇಷ್ಟೂಮಂದಿ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ 4000ಕ್ಕೂ ಹೆಚ್ಚು ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 5, ಪುಣೆಯ ಬಳಿಕ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ 5, ಯವತ್ಮಾಲ್‌ನಲ್ಲಿ 2, ಅಹಮದ್‌ನಗರ ಹಾಗೂ ನಾಗಪುರದಲ್ಲಿ ತಲಾ ಒಂದು ಸೇರಿದಂತೆ ಶನಿವಾರ ಮಹಾರಾಷ್ಟ್ರದಲ್ಲಿ ಹೊಸದಾಗಿ 14 ಪ್ರಕರಣಗಳು ಬೆಳಕಿಗೆ ಬಂದಿವೆ. ಮತ್ತೊಂದೆಡೆ ತೆಲಂಗಾಣದಲ್ಲಿ ಇಟಲಿಯಿಂದ ಮರಳಿದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು ಸ್ಪೇನ್‌ನಿಂದ ರಾಜಸ್ಥಾನದ ಜೈಪುರಕ್ಕೆ ಮರಳಿದ್ದ ವ್ಯಕ್ತಿಯೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ.