ಹಗರಿಬೊಮ್ಮನಹಳ್ಳಿ(ಮೇ.21):  ತಾಲೂಕಿನಲ್ಲಿ ಪ್ರತ್ಯಕ್ಷವಾದ ಕರಡಿಯಿಂದ ಜನರು ಭಯಭೀತರಾಗಿದ್ದಾರೆ. ಶಿವಾನಂದ ನಗರದ ವ್ಯಾಪ್ತಿಯಲ್ಲಿ ಇಬ್ಬರಿಗೆ ದಾಳಿಮಾಡಿ ಗಾಯಗೊಳಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಪಕ್ಕೀರಪ್ಪ ಎನ್ನುವ ರೈತ ಮೋಟರ್‌ಪಂಪ್‌ ಎತ್ತಲು ಹೋಗಿದ್ದು, ಕರಡಿಯನ್ನು ನೋಡಿ ದಂಗಾಗಿದ್ದಾನೆ. ಕೂಡಲೇ ವ್ಯಕ್ತಿಯ ಮೇಲೆ ಎರಗಿದೆ, ಸುತ್ತಮುತ್ತ ಇದ್ದ ಜನರು ಗಲಾಟೆ ಮಾಡುತ್ತಿದ್ದಂತೆ ತಪ್ಪಿಸಿಕೊಂಡು ಮುಂದೆ ಹೋಗಿದೆ. ನಂತರ ಮಲ್ಲಿಗೆ ಮೊಗ್ಗು ಬಿಡಿಸಲು ಹೋಗಿದ್ದ ಕೃಷಿ ಕೂಲಿ ಕಾರ್ಮಿಕ ಮಹಿಳೆ ರತ್ನಮ್ಮ ಮಹಿಳೆ ಮೇಲೂ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಗೊಂಡವರನ್ನು ಪಟ್ಟಣದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಶಂಕರ್‌ನಾಯ್ಕ ತಿಳಿಸಿದರು.

ಕೊರೋನಾ ತೊಲ​ಗು​ವು​ದು ಅಷ್ಟು ಸುಲಭವಿಲ್ಲ: ಸಚಿವ ಶ್ರೀರಾಮುಲು

ಈ ಕರಡಿ ತಾಲೂಕಿನ ನೆಲ್ಕುದ್ರಿ, ಉಲವತ್ತಿ ವ್ಯಾಪ್ತಿಯ ಕಬ್ಬಿನ ಹೊಲಗಳಲ್ಲಿ ಕಾಣಿಸಿಕೊಂಡಿದ್ದ ಭಯಭೀತರಾಗಿದ್ದರು. ನಂತರ ಮಂಗಳವಾರ ಬೆಳಗಿನ ಜೋವ ಶಿವಾನಂದ ನಗರದ ಬಳಿ ಈ ದಾಳಿ ನಡೆಸಿದೆ. ವಿಷಯ ತಿಳಿದ ಹೊಸಪೇಟೆಯ ಅರಣ್ಯ ಇಲಾಖೆಯ ಎಸಿಎಫ್‌ ಮೋಹನ್‌, ಹೂವಿನ ಹಡಗಲಿ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿ ಕಿರಣ್‌, ಇಲ್ಲಿಯ ಅರಣ್ಯ ಪಾಲಕರಾದ ಕರಿಬಸಪ್ಪ ಹಾಗೂ ಸಿಬ್ಬಂದಿವರ್ಗ ಕರಡಿಯನ್ನು ಹಿಡಿಯಲು ಸ್ಥಳಕ್ಕೆ ಧಾವಿಸಿದ್ದಾರೆ. ಸಂಜೆ 5 ಗಂಟೆಯಾದರೂ ಕರಡಿ ಸಿಗದೆ ಪರಾರಿಯಾಗಿದೆ ಎಂದು ಇಲಾಖೆಯವರು ತಿಳಿಸಿದರು. ಕರಡಿ ಹೋದ ಜಾಡು ಹಿಡಿದು ಬೆಂಬತ್ತಿದ್ದು. ಹಿಡಿಯುವ ಪ್ರಯತ್ನದಲ್ಲಿದ್ದೇವೆ ಎಂದು ಅಧಿಕಾರಿ ಕಿರಣ್‌ ತಿಳಿದರು.