ಬಳ್ಳಾರಿ(ಮೇ.18): ಕೊರೋನಾ ವೈರಸ್‌ ನಮ್ಮನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಿಲ್ಲ. ಲಾಕ್‌ಡೌನ್‌ ಸಡಿಲಿಕೆ ಬಳಿಕವೂ ಅದು ನಮ್ಮ ಜತೆ ಪಯಣ ಬೆಳೆಸುತ್ತದೆ. ಹೀಗಾಗಿ ಅದರ ಜತೆ ನಾವು ಬದುಕುವುದನ್ನು ಕಲಿಯಬೇಕಾಗಿದೆ. ಇನ್ನು 2 ರಿಂದ 3 ವರ್ಷಗಳ ಕಾಲ ಮಾಸ್ಕ್‌, ಸ್ಯಾನಿಟೈಸರ್‌ ಬಳಸಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ನಗರದ ಮಿಲ್ಲಾರ್‌ಪೇಟೆ ಪ್ರದೇಶದಲ್ಲಿ ಮಾಜಿ ಮೇಯರ್‌ ಇಬ್ರಾಹಿಂಬಾಬು ಹಮ್ಮಿಕೊಂಡಿದ್ದ ಬಡಜನರಿಗೆ ಆಹಾರಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡಿದ್ದ ಸಚಿವರು, ಕೊರೋನಾ ವೈರಸ್‌ ನಿಯಂತ್ರಣಕ್ಕೆ ಜನರ ಸಹಕಾರ ಬಹಳ ಮುಖ್ಯವಾಗಿದ್ದು, ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದಿಂದ ನಾಲ್ಕನೇ ಲಾಕ್‌ಡೌನ್‌ ಕುರಿತು ಗೈಡ್‌ಲೈನ್ಸ್‌ ಬರಬೇಕಾಗಿದೆ. ಕೆಲವು ರಾಜ್ಯಗಳಲ್ಲಿ ಯಥಾಸ್ಥಿತಿಯನ್ನು ಮುಂದುವರಿಸುವ ಕುರಿತು ಚರ್ಚೆ ನಡೆದಿದೆ.

ಆಂಧ್ರ ಗಡಿ ಬಂದ್ ವಿಚಾರಕ್ಕೆ ಕರ್ನಾಟಕದಲ್ಲಿ ಜನಪ್ರತಿನಿಧಿಗಳ ಜಟಾಪಟಿ...!

ಕರ್ನಾಟಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರಕ್ಕೆ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದು, ಗ್ರೀನ್‌ ಮತ್ತು ಆರೆಂಜ್‌ ವಲಯದಲ್ಲಿ ಸಡಿಲಿಕೆ ಮಾಡಿ, ಜನಜೀವನ ಸುಗಮವಾಗಿ ನಡೆದುಕೊಂಡು ಹೋಗುವಂತೆ ಅನುವು ಮಾಡಿಕೊಡಬೇಕು ಎಂದು ಕೋರಿದ್ದಾರೆ. ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರನ್ನು ಕ್ವಾರಂಟೈನ್‌ ಮಾಡಲು ತೀರ್ಮಾನಿಸಲಾಗಿದ್ದು, ಈಗಾಗಲೇ ಅದು ಕಾರ್ಯರೂಪ ಪಡೆದಿದೆ. ವೈದ್ಯರು ಹೇಳುವ ಪ್ರಕಾರ ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ 82 ಸಾವಿರ ಮಹಿಳೆಯರು ಹೆರಿಗೆಯಾಗಲಿದ್ದಾರೆ. ಹೀಗಾಗಿ ಕಂಟೈನ್ಮೆಂಟ್‌ (ಸೋಂಕಿತ) ಪ್ರದೇಶದಿಂದ ಬರುವ ಮಹಿಳೆಯರನ್ನು ಕಡ್ಡಾಯವಾಗಿ ಕೊರೋನಾ ಟೆಸ್ಟ್‌ ಮಾಡಲು ನಿರ್ಧರಿಸಲಾಗಿದೆ ಎಂದರು.

ಆರೋಗ್ಯ ಸೇತು, ಆಪ್ತಮಿತ್ರ ಆ್ಯಪ್‌ ಹಾಗೂ ಕ್ವಾರಂಟೈನ್‌ ಆಗಲೇಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಮೇಯರ್‌ ಇಬ್ರಾಹಿಂಬಾಬು ಮತ್ತಿತರರಿದ್ದರು.