ಹಕ್ಕಿ, ಹಂದಿ ಆಯ್ತು ಈಗ ಮೀನುಗಳ ಸಾವು ತಂದಿದೆ ಆತಂಕ
ಹಕ್ಕಿ ಪಕ್ಷಿ, ಹಂದಿಗಳ ಸಾವಿನ ಬೆನ್ನಲ್ಲೇ ಇದೀಗ ಮೀನುಗಳು ಸಾವಿಗೀಡಾಗುತ್ತಿದ್ದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಏಕಾಏಕಿ ಮೀನುಗಳ ಸಾವು ಭೀತಿ ಹುಟ್ಟಿಸಿದೆ.
ಸೊರಬ [ಮಾ.20]: ಯಲವಳ್ಳಿಯಲ್ಲಿ ಕಾಗೆಗಳ ಸಾವು, ಸೊರಬದಲ್ಲಿ ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿ ವಾರದ ಸಂತೆ ನಡೆಸಿರುವುದು, ಚಂದ್ರಗುತ್ತಿಯಲ್ಲಿ ಆದೇಶ ಉಲ್ಲಂಘಿಸಿ ಸಾವಿರಾರು ಜನರು ನೆರೆದು ದೇವಿ ಪೂಜೆ, ಕುರಿ ಕಡಿದು ಪರಿಸರ ಮಾಲಿನ್ಯ ಮಾಡಿದ ನಡುವೆ ಹರೂರಿನ ಕೆರೆಯಲ್ಲಿ ಇದ್ದಕ್ಕಿಂದತೆ ಅಪಾರ ಸಂಖ್ಯೆಯಲ್ಲಿ ಮೀನು ಅಸಹಜ ಸಾವನ್ನಪ್ಪಿರುವುದು ಸ್ಥಳೀಯರಿಗೆ ಆತಂಕವನ್ನುಂಟು ಮಾಡಿದೆ.
ಗ್ರಾಮಸ್ಥರು ತಮ್ಮೂರಿನ ಕೆರೆಗೆ 40 ಸಾವಿರಕ್ಕೂ ಹೆಚ್ಚು ಫಾರಂ ಮೀನು ಬಿಟ್ಟು ಕೆರೆಬೇಟೆಯ ಹವಣಿಕೆ ನಡೆಸುತ್ತಿರುವಾಗಲೇ ಮೀನು ಸಾಯುತ್ತಿರುವುದು ಬೇಸರದ ಜೊತೆಗೆ ಆತಂಕವನ್ನೂ ಮೂಡಿಸಿದೆ. ಸತ್ತು ತೇಲುತ್ತಿರುವ ಮೀನು ಹಿಡಿದು ದಡಕ್ಕೆ ಹಾಕಿ ಹೈರಾಣಾಗಿರುವ ಗ್ರಾಮಸ್ಥರು ಅವನ್ನು ಸುಟ್ಟು ಹಾಕಿದ್ದಾರೆ.
ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ...
ಕೊರೋನಾಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಗೊತ್ತಿದ್ದರೂ ಹಕ್ಕಿ ಜ್ವರ, ಮಂಗನಕಾಯಿಲೆ ಇತ್ಯಾದಿ ರೋಗದ ಸುದ್ಧಿ ಕೇಳುತ್ತಿರುವ ಇಲ್ಲಿನವರು ಸಹಜವಾಗಿ ಭೀತಿಗೊಂಡಿದ್ದಾರೆ. ಮೀನು ಸಾವಿನ ಕಾರಣ ಪತ್ತೆಹಚ್ಚಲು ಮೀನುಗಾರಿಕೆ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಕೆರೆಯ ಸಾಮರ್ಥ್ಯಕ್ಕಿಂತಲೂ ಅಧಿಕ ಮೀನು ಇರುವುದು, ವಾತಾವರಣದಲ್ಲಿನ ಅತಿ ಉಷ್ಣತೆ, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಆಮ್ಲಜನಕದ ಕೊರತೆಯಿಂದ ಮೀನು ಸತ್ತಿವೆ. ಹೀಗೆ ಕೆರೆಗೆ ಮೀನು ಬಿಟ್ಟಾಗ ನೀರು ಇಳಿಯುವ ಮೊದಲೇ ಮೀನು ಹಿಡಿಯುವುದು ಒಳ್ಳೆಯದು. ಇಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬಂದಿದ್ದು ಆತಂಕಪಡುವ ಅಗತ್ಯವಿಲ್ಲ. ಯಾವುದಕ್ಕೂ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಸೊರಬ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಎ. ತಿಳಿಸಿದ್ದಾರೆ.