ಪಿ.ಎಸ್‌. ಪಾಟೀಲ

ರೋಣ(ಅ.27): ಈ ಗ್ರಾಮಸ್ಥರು ತಿಂಗಳಿಗೊಮ್ಮೆ ಎರಡೂವರೆ ಕಿಮೀ ನಡೆದರೆ ಮಾತ್ರ ಪಡಿತರ. ಇಲ್ಲದಿದ್ದರೆ ಇಲ್ಲ. ನಾಲ್ಕು ತಿಂಗಳಿನಿಂದ ನ್ಯಾಯಬೆಲೆ ಅಂಗಡಿ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ತಾಲೂಕಿನ ಮುದೇನಗುಡಿ ಗ್ರಾಮದ ಅನ್ನಭಾಗ್ಯದ ಕಥೆಯಿದು!

ಹುಲ್ಲೂರ ಗ್ರಾಮದ ವಿಎಸ್‌ಎಸ್‌ ಸೊಸೈಟಿ ಮೂಲಕ ಮುದೇನಗುಡಿ ಗ್ರಾಮಸ್ಥರಿಗೆ ಪಡಿತರ ಆಹಾರ ವಿತರಿಸುವ ಜವಾಬ್ದಾರಿ ನೀಡಲಾಗಿದೆ. ಈ ಗ್ರಾಮದಲ್ಲಿ 450ಕ್ಕೂ ಹೆಚ್ಚು ಕಾರ್ಡ್‌ದಾರರಿದ್ದರೂ ಪಕ್ಕದ ಹುಲ್ಲೂರಿನ ವಿಎಸ್‌ಎಸ್‌ ಸೊಸೈಟಿಗೆ ವಹಿಸಿದ್ದರಿಂದ ತಾಂತ್ರಿಕ ತೊಂದರೆ ನೆಪ ಮುಂದಿಟ್ಟುಕೊಂಡು ಹುಲ್ಲೂರ ಗ್ರಾಮದಲ್ಲಿ ಪಡಿತರ ವಿತರಿಸಲಾಗುತ್ತಿದೆ.

ಕಾರ್ಡ್‌ದಾರರು ಪ್ರತಿ ತಿಂಗಳು ರೇಷನ್‌ ಪಡೆಯಲು ಮುದೇನಗುಡಿಯಲ್ಲಿಯೇ ಥಂಬ್‌(ಬಯೊ ಮೆಟ್ರಿಕ್‌) ಕೊಟ್ಟು, ರೇಷನ್‌ ಪಡೆಯಲು ಮಾತ್ರ 2.5 ಕಿಮೀ ದೂರವಿರುವ ಪಕ್ಕದ ಗ್ರಾಮ ಹುಲ್ಲೂರಿಗೆ ತೆರಳಬೇಕು. ಬೈಕ್‌, ಸೈಕಲ… ಟ್ರ್ಯಾಕ್ಟರ್‌ ಇದ್ದವರಿಗೆ ಹೇಳಿಕೊಳ್ಳುವಷ್ಟುಸಮಸ್ಯೆ ಆಗಲ್ಲ. ಆದರೆ ವಾಹನ ಇಲ್ಲದವರು, ವೃದ್ದರು, ಅಂಧ, ಅನಾಥರು, ಅಂಗವಿಕಲರು, ಎರಡೂವರೆ ಕಿಮೀ ದೂರ ನಡೆದುಕೊಂಡು ಹೋಗಿ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರೇಷನ್‌ ಬೇಕೆಂದ್ರೆ ನಡೆದುಕೊಂಡು ಬರಬೇಕು, ಇಲ್ಲವಾದಲ್ಲಿ ಬಿಡಬಹುದಂತೆ. ಆದರೆ ಥಂಬ…(ಬಯೋ ಮೆಟ್ರಿಕ್‌) ಕೊಡೊದು ಮಾತ್ರ ಕಡ್ಡಾಯವಂತೆ. ಆ ತಿಂಗಳು ಯಾರು ಥಂಬ್‌ ಕೊಡೊದಿಲ್ಲವೋ, ಅಂಥವರಿಗೆ ಮುಂದಿನ ತಿಂಗಳು ರೇಷನ್‌ ಇರಲ್ಲ, ಅವರ ಕಾರ್ಡ್‌ ರದ್ದಾಗುತ್ತೆ ಎಂಬ ಹೆದರಿಕೆಯೂ ಹಾಕುತ್ತಾರಂತೆ. ಇದರಿಂದ ಪಡಿತರದಾರರು ರೇಷನ್‌ ಸಿಗದಿದ್ದರೂ ಚಿಂತೆಯಿಲ್ಲ, ರೇಷನ್‌ ಕಾರ್ಡ್‌ ರದ್ದಾಗಬಾರದೆಂದು ಬಯೋ ಮೆಟ್ರಿಕ್‌(ಥಂಬ್‌) ಕೊಡೋದನ್ನು ತಪ್ಪಿಸುತ್ತಿಲ್ಲ.

ಸೇಬಿಗಿಂತ ಈರುಳ್ಳಿಯೇ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ..!

ಕಾಟಾಚಾರದ ಸೀಮೆಎಣ್ಣೆ :

ಕಾರ್ಡ್‌ವೊಂದಕ್ಕೆ ಕನಿಷ್ಠ 3 ಲೀಟರ್‌ ಸೀಮೆ ಎಣ್ಣೆ ವಿತರಿಸಬೇಕು. ಅದರೆ ಇಲ್ಲಿ ಕಾರ್ಡ್‌ ಒಂದಕ್ಕೆ ಕೇವಲ ಒಂದು ಲೀಟರ್‌ ಸೀಮೆ ಎಣ್ಣೆ ವಿತರಿಸಲಾಗುತ್ತಿದೆ. ಇದನ್ನೂ ಕೂಡ ಕೇವಲ ಒಂದು ದಿನ ಮಾತ್ರ ಹುಲ್ಲೂರಿನಿಂದ ಬಂದು ವಿತರಿಸಲಾಗುತ್ತಿದೆ. ಸೀಮೆಎಣ್ಣೆ ವಿತರಣೆಗೆ ನಿರ್ದಿಷ್ಟದಿನಾಂಕ ಇರುವುದಿಲ್ಲ. ನಿತ್ಯವೂ ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎನ್ನುತ್ತಾ ದಿನವಿಡಿ ಕಾಯುವುದೇ ಗ್ರಾಮಸ್ಥರ ಕೆಲಸವಾಗಿದೆ ಎಂದು ಬಸನಗೌಡ ಚನ್ನಪ್ಪಗೌಡ್ರ ‘ಕನ್ನಡಪ್ರಭ’ ಎದುರು ಅಳಲು ತೋಡಿಕೊಂಡರು.

ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ನಮ್ಮೂರಲ್ಲಿಯೇ ರೇಷನ್‌ ವಿತರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುದೇನಗುಡಿ ಗ್ರಾಮದ ಹನುಮಂತಪ್ಪ ಚಿಕ್ಕಬಾವಿ, ಬಸಯ್ಯ ಬಿಲ್ಲದಂಡಗಿ, ಫಕೀರಪ್ಪ ಮಡಿವಾಳರ ಎಚ್ಚರಿಸಿದರು.

ಮುದೇನಗುಡಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸೂಕ್ತ ಜಾಗ ಸಿಗುತ್ತಿಲ್ಲ. ಅಲ್ಲದೇ 4 ತಿಂಗಳ ಹಿಂದೆ ಬಯೋ ಮೆಟ್ರಿಕ್‌ ಕೊಡುವ ವಿಚಾರದಲ್ಲಿ ಗಲಾಟೆ ಆಯ್ತು. ಇದರಿಂದಾಗಿ ಮುದೇನಗುಡಿಯಲ್ಲಿ ವಿತರಿಸುವ ವ್ಯವಸ್ಥೆಯನ್ನು ಕೈಬಿಟ್ಟು ಹುಲ್ಲೂರ ಗ್ರಾಮಕ್ಕೆ ಗ್ರಾಮಕ್ಕೆ ಸ್ಥಳಾಂತರಿಸಿ, ಅಲ್ಲಿಯೇ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹುಲ್ಲೂರ ವಿಎಸ್‌ಎಸ್‌ ಸೊಸೈಟಿ ಕಾರ್ಯದರ್ಶಿ ಸಂತೋಷ ಕೆಂಚನಗೌಡ್ರ ಹೇಳಿದ್ದಾರೆ. 

ಒಂದು ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಕನಿಷ್ಠ 500 ಕಾರ್ಡ್‌ ಇರಬೇಕು. ಆದರೆ ಮುದೇನಗುಡಿಯಲ್ಲಿ 450 ಕಾರ್ಡ್‌ ಮಾತ್ರ ಇದ್ದರಿಂದ ಹುಲ್ಲೂರಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಮುದೇನಗುಡಿಯಲ್ಲಿಯೇ ವಿತರಣೆ ಮಾಡಲಾಗುತ್ತಿತ್ತು. ಆದರೆ ಕೆಲ ಸಮಸ್ಯೆಯಿಂದಾಗಿ ಹುಲ್ಲೂರಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಚುನಾವಣೆ ಇದ್ದು, ಚುನಾವಣೆ ಮುಗಿದ ನಂತರ ಮುದೇನಗುಡಿ ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ಆಹಾರ ವಿತರಣೆಗೆ ವ್ಯವಸ್ಥೆ ಕಲ್ಪಿಸುವಂತೆ ಆಹಾರ ಉಪ ನಿರ್ದೇಶಕರಿಗೆ ತಿಳಿಸಲಾಗುವುದು ಎಂದು ರೋಣ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ತಿಳಿಸಿದ್ದಾರೆ.