Asianet Suvarna News Asianet Suvarna News

ಪರಿಹಾರ ಕೇಂದ್ರಕ್ಕೂ ನುಗ್ಗಿದ ಭೀಮೆ ನೀರು: ಭಾರೀ ಅನಾಹುತದಿಂದ ಪಾರಾದ ಜನ..!

ಶಾಲೆಯಲ್ಲಿದ್ದ ಸಂತ್ರಸ್ತರನ್ನು ಹತ್ತಿರದ ದೇವಾಲಯಕ್ಕೆ ಶಿಫ್ಟ್‌| ಸ್ಥಳಾಂತರಕ್ಕೆ ಬಸ್‌ ವ್ಯವಸ್ಥೆ, ಗ್ರಾಮ ಬಿಡಲೊಪ್ಪದ ಜನ| ನೀರಿನ ಸೆಳೆತಕ್ಕೆ ಸಿಲುಕಿದ್ದ ಇಬ್ಬರು ಪ್ರವಾಸಿಗರು| ಪ್ರವಾಹದಲ್ಲೇ ಮಹಿಳೆಯಿಂದ ಮಹಾನವಮಿ ಪೂಜೆ| 

People Faces Problems in Kallyana Karnataka Region Due to Flood grg
Author
Bengaluru, First Published Oct 19, 2020, 11:24 AM IST

ಕಲಬುರಗಿ(ಅ.19): ಕಳೆದ ನಾಲ್ಕು ದಿನಗಳಿಂದ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ 60ಕ್ಕೂ ಹೆಚ್ಚು ಸಂತ್ರಸ್ತರಿಗೆ ಆಶ್ರಯ ನೀಡಿದ್ದ ಪರಿಹಾರ ಕೇಂದ್ರಕ್ಕೆ ಶನಿವಾರ ಮಧ್ಯರಾತ್ರಿ ಪ್ರವಾಹದ ನೀರು ನುಗ್ಗಿ ತೊಂದರೆಯುಂಟಾಗಿದೆ. ಗ್ರಾಮದ ಶಾಲೆಯೊಂದರಲ್ಲಿ ತೆರೆದಿದ್ದ ಪರಿಹಾರ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಸಂತ್ರಸ್ತರು ಕಷ್ಟಅನುಭವಿಸಿದರು. ತಕ್ಷಣ ಅಲ್ಲಿನ ಸಿಬ್ಬಂದಿ ಈ ಕೇಂದ್ರವನ್ನು ಕೋಬಾಳದ ಹನುಮಾನ ಮಂದಿರಕ್ಕೆ ಸ್ಥಳಾಂತರಿಸಿ ಸಂತ್ರಸ್ತರಿಗೆಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದು, ಸಂತ್ರಸ್ತರಿಗೆ ಹೆಚ್ಚಿನ ಅನಾಹುತ ಆಗಿಲ್ಲ ಎನ್ನಲಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರ ರಕ್ಷಣೆ:

ಕಲಬುರಗಿಯ ಅಫಜಲಪುರ ತಾಲೂಕಿನ ಶಿರವಾಳ ಬಳಿ ಕರ್ಜಗಿ ಗ್ರಾಮದ ಕಡೆ ಹೊರಟಿದ್ದ ಸಾರಿಗೆ ಬಸ್‌, ಭೀಮಾ ನದಿ ಪ್ರವಾಹದ ಹಿನ್ನೀರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಆತಂಕಗೊಂಡಿದ್ದರು. ಈ ವೇಳೆ ಸ್ಥಳೀಯರು ಬಸ್‌ಗೆ ಹಗ್ಗ ಕಟ್ಟಿಟ್ರ್ಯಾಕ್ಟರ್‌ ಸಹಾಯದಿಂದ ಎಳೆದು ದಡ ಸೇರಿಸಿದ್ದಾರೆ. ಸೈಲೆನ್ಸರ್‌ನಲ್ಲಿ ನೀರು ಹೋಗಿದ್ದರಿಂದ ಮಧ್ಯದಲ್ಲಿ ಬಸ್‌ ಬಂದ್‌ ಆಗಿತ್ತು.

ಉಪವಾಸ ಕುಳಿತ ನೆರೆ ಸಂತ್ರಸ್ತರು:

ಕಲಬುರಗಿಯ ಅಫಜಲಪುರ ತಾಲೂಕಿನ ಹೊಳೆ ಬೋಸಗಾದಲ್ಲಿ ಭೀಮಾ ನದಿ ಪ್ರವಾಹ ನುಗ್ಗಿ ನಿರಾಶ್ರಿತರಾಗಿರುವ ಸುಮಾರು 200ಕ್ಕೂ ಅಧಿಕ ಕುಟುಂಬಸ್ಥರು ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಸಿಗುತ್ತಿಲ್ಲವೆಂದು ತಿಂಡಿ, ಊಟ ಸಿಗದೇ ಉಪವಾಸ ಕುಳಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಕಂಗಾಲಾದ ಜನತೆ..!

ಪ್ರವಾಹದಲ್ಲೆ ಮಹಿಳೆಯಿಂದ ಮಹಾನವಮಿ ಪೂಜೆ!

ವಿಜಯಪುರ(ಆಲಮೇಲ): ಭೀಮಾನದಿ ಪ್ರವಾಹದಲ್ಲಿಯೂ ಮನೆಯಲ್ಲಿ ಸ್ಥಾಪಿಸಿದ್ದ ಘಟಕ್ಕೆ ಮತ್ತಕ್ಕ ಗಂಗನಹಳ್ಳಿ ಎಂಬ ಮಹಿಳೆಯೊಬ್ಬರು ನಿತ್ಯ ಕೃತಕ ಬೋಟಿನಲ್ಲಿ ತೆರಳಿ ಮಹಾನವಮಿ ಪೂಜೆ ಸಲ್ಲಿಸಿರುವ ಘಟನೆ ವಿಜಯಪುರದ ಆಲಮೇಲ ತಾಲೂಕಿನ ದೇವಣಗಾಂವದಲ್ಲಿ ನಡೆದಿದೆ. ಪ್ರವಾಹ ಬರುವ ಮೊದಲು ಮನೆಯಲ್ಲಿ ಘಟ ದೀಪ ಕಟ್ಟಿದ್ದರು. ಆದರೆ, ಮಾರನೇ ದಿನವೇ ಪ್ರವಾಹದಿಂದಾಗಿ ಅವರ ಮನೆ ಜಲಾವೃತವಾಗಿತ್ತು. ಆದರೆ, ಘಟ ದೀಪ ಸತತ 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕಿದ್ದರಿಂದ ಸಹೋದರರು ಸಹಾಯದಿಂದ ನಿತ್ಯ ಕೃತಕ ಬೋಟಿನಲ್ಲಿ ಹೋಗಿ ಎಣ್ಣೆ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.

ಇಬ್ಬರು ಗರ್ಭಿಣಿಯರ ರಕ್ಷಣೆ

ಆಲಮೇಲ: ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಸಿದ್ದಮ ಮಾರದ ಹಾಗೂ ಶ್ರೀದೇವಿ ಪೂಜಾರಿ ಎಂಬ ಇಬ್ಬರು ಗರ್ಭಿಣಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ವಿಜಯಪುರದ ಆಲಮೇಲ ತಾಲೂಕಿನ ಕುಮಸಗಿಯಲ್ಲಿ ನಡೆದಿದೆ. ಇವರ ಮನೆಗಳು ಭೀಮಾ ನದಿ ಪ್ರವಾಹಕ್ಕೆ ಜಲಾವೃತವಾಗಿ ಆಸ್ಪತ್ರೆಗೆ ಆಗಿರಲಿಲ್ಲ. ಆಸ್ಪತ್ರೆಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾದರಿಂದ ಮಾಳಿಗೆ ಹತ್ತಿ ಸಹಾಯ ಹಸ್ತ ಚಾಚಿದರು. ಇದನ್ನು ತಿಳಿದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಗರ್ಭಿಣಿಯರನ್ನು ಸುರಕ್ಷಿತವಾಗಿ ಕರೆತಂದು ಕಾರಿನಲ್ಲಿ ಸಿಂದಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಭೀಮಾ ನದಿ ಪ್ರವಾಹಕ್ಕೆ ನಲುಗಿದ ಉತ್ತರ ಕರ್ನಾಟಕ: ಸಂತ್ರಸ್ತರ ರಕ್ಷಣೆಗೆ ಅರೆಸೇನಾ ಪಡೆ

ನೀರಿನ ಸೆಳೆತಕ್ಕೆ ಸಿಲುಕಿದ್ದ ಇಬ್ಬರು ಪ್ರವಾಸಿಗರು

ಕಲಬುರಗಿ: ಜಲಾಶಯ ವೀಕ್ಷಿಸಲು ಆಗಮಿಸಿದ ತೆಲಂಗಾಣದ ಜಹಿರಾಬಾದ್‌ ಮೂವರು ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಪರದಾಡಿದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಎತ್ತಪೋತೆ ಜಲಾಶಯದಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದ ಇವರು ನೀರಿಗಿಳಿದಿದ್ದಾರೆ. ಈ ವೇಳೆ ಪ್ರವಾಹ ಹೆಚ್ಚಾಗಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದು, ಈ ಪೈಕಿ ಓರ್ವ ಈಜಿ ದಡ ಸೇರಿದ್ದು, ಇನ್ನಿಬ್ಬರು ನೀರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ಸ್ಥಳಾಂತರಕ್ಕೆ ಬಸ್‌ ವ್ಯವಸ್ಥೆ, ಗ್ರಾಮ ಬಿಡಲೊಪ್ಪದ ಜನ

ರಾಯಚೂರು: ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮಸ್ಥರನ್ನು ಸ್ಥಳಾಂತರಿಸಲು 15 ಸಾರಿಗೆ ಸಂಸ್ಥೆ ಬಸ್‌ಗಳ ವ್ಯವಸ್ಥೆ ಮಾಡಿದ್ದರೂ ನದಿಯಲ್ಲಿ ನೀರಿನ ಮಟ್ಟಕಡಿಮೆ ಇರುವುದರಿಂದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಬರುತ್ತಿಲ್ಲ. ಆದರೂ ಜಿಲ್ಲಾಡಳಿತ ಗುರ್ಜಾಪುರ ಸೇರಿ ನೀರು ನುಗ್ಗುವ ಸಾಧ್ಯತೆಗಳಿರುವ ಗ್ರಾಮಗಳಲ್ಲಿ ಮಿಲಿಟರಿ, ಎನ್‌ಡಿಆರ್‌ಎಫ್‌ ನೆರವಿನಡಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ.
 

Follow Us:
Download App:
  • android
  • ios