ಬೆಂಗಳೂರು(ಅ. 25):  ಶುಕ್ರವಾರ ಸುರಿದ ಮಹಾಮಳೆ ಸೃಷ್ಟಿಸಿದ ಅನಾಹುತದಿಂದ ನೈಋುತ್ಯ ಬೆಂಗಳೂರಿನ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಶುಕ್ರವಾರ ರಾತ್ರಿ ಪೂರ್ತಿ ಮನೆ ತಾರಸಿ ಹಾಗೂ ನೆರೆಮನೆಗಳ ಆಶ್ರಯ ಪಡೆದಿದ್ದ ಸಂತ್ರಸ್ತರು, ಶನಿವಾರ ದಿನವಿಡೀ ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಮನೆಗೆ ನುಗ್ಗಿದ ತ್ಯಾಜ್ಯ ನೀರಿನಿಂದ ಪ್ರತಿ ಮನೆಯಲ್ಲೂ ಒಂದೊಂದು ರೀತಿಯ ಅವಾಂತರ ಸೃಷ್ಟಿಯಾಗಿದ್ದು, ಸಂತ್ರಸ್ತರು ದಿನಪೂರ್ತಿ ಗೋಳಾಡುತ್ತಾ ಮನೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದರು. ಇದರ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮನೆಗಳಿಗೆ ನೀರು ನುಗ್ಗಿರುವ ಪ್ರತಿ ಕುಟುಂಬಕ್ಕೆ 25 ಸಾವಿರ ರು. ಪರಿಹಾರ ಘೋಷಣೆ ಮಾಡಿದರು. ಈ ವೇಳೆ ಕೆಲವೇ ಮನೆಗಳಿಗೆ ಭೇಟಿ ನೀಡಿದರು ಎಂಬ ಆರೋಪದ ಮೇಲೆ ಹಲವು ಸಂತ್ರಸ್ತರು ಮುಖ್ಯಮಂತ್ರಿಗಳ ಕಾರಿಗೆ ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು.

ನೀರಿನ ಹರಿವು ಕಡಿಮೆಯಾದ ಬಳಿಕ ಮನೆಗಳು ಗದ್ದೆಗಳಂತಾಗಿದ್ದು, ಬೆಲೆ ಬಾಳುವ ವಸ್ತುಗಳು ಮಾತ್ರವಲ್ಲದೆ ಆಹಾರ ಪದಾರ್ಥ, ಔಷಧ, ಪಠ್ಯಪುಸ್ತಕಗಳೂ ನೀರುಪಾಲಾಗಿ ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಹೊಸಕೆರೆಹಳ್ಳಿಯಲ್ಲಿ ಹತ್ತಾರು ಮನೆಗಳಿಗೆ ವಿಷಸರ್ಪಗಳು ನುಗ್ಗಿ ಆತಂಕ ಸೃಷ್ಟಿಸಿವೆ.

ಮಹಾಮಳೆಗೆ ಮುಳುಗಿದ ಬೆಂಗಳೂರು: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

ಮನೆಗೊಂದು ವ್ಯಥೆ:

ಬರೋಬ್ಬರಿ 103 ಮಿ.ಮೀ.ನಷ್ಟು ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ನದಿಯಂತಾಗಿ ಕಾರುಗಳೇ ತೇಲಿಕೊಂಡು ಹೋಗಿದ್ದವು. ಪರಿಣಾಮ ನೂರಾರು ಕಾರು ಹಾಗೂ ದ್ವಿಚಕ್ರ ವಾಹನಗಳು ಹಾಳಾಗಿದ್ದು, ಮಾಲೀಕರು ಪರಿತಪಿಸುವಂತಾಗಿದೆ.

ಅತಿಹೆಚ್ಚು ಮಳೆಹಾನಿಗೆ ಒಳಗಾಗಿರುವ ಹೊಸಕೆರೆಹಳ್ಳಿ, ದತ್ತಾತ್ರೇಯನಗರ, ರಾಜರಾಜೇಶ್ವರಿನಗರ, ಕೆಂಗೇರಿ ಉಪನಗರ ಪ್ರದೇಶಗಳ ಮನೆಗಳಲ್ಲಿ ಕೊಳಚೆ, ಕೆಸರು ಮೆತ್ತಿಕೊಂಡಿದ್ದ ವಸ್ತುಗಳನ್ನು ಮನೆ ಆವರಣದಲ್ಲಿ ಗುಡ್ಡೆ ಹಾಕಿಕೊಂಡು ಕಣ್ಣೀರಿಡುವ ದೃಶ್ಯ ಸಾಮಾನ್ಯವಾಗಿತ್ತು.

ಹೊಸಕೆರೆಹಳ್ಳಿಯಲ್ಲಿ ವಿದ್ಯಾರ್ಥಿಗಳು, ಮಳೆಯಿಂದ ತಮ್ಮ ಪಠ್ಯಪುಸ್ತಗಳು ಹಾಳಾಗಿವೆ. ಒಂದೇ ಒಂದು ಪೆನ್‌ ಸಹ ಉಳಿದಿಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ದತ್ತಾತ್ರೇಯ ನಗರದ 80 ವರ್ಷದ ರಾಜಮ್ಮ ಎಂಬ ಅಜ್ಜಿ, ಮನೆಗೆ ನೀರು ನುಗ್ಗಿ ನನ್ನ ಜೀವನ ಮುಗಿಯಿತು ಎಂದುಕೊಂಡಿದ್ದೆ. ಅಷ್ಟರಲ್ಲಿ ಇಬ್ಬರು ಹುಡುಗರು ಪ್ರವಾಹದಲ್ಲಿ ಈಜಿಕೊಂಡು ಬಂದು ಜೀವ ಕಾಪಾಡಿದರು ಎಂದು ನೆನೆದು ಭಾವುಕರಾದರು. ಬೇಕರಿ, ಅಂಗಡಿಮುಂಗಟ್ಟುಗಳಿಗೂ ನೀರು ನುಗ್ಗಿದ್ದು ಲಕ್ಷಾಂತರ ಮೌಲ್ಯದ ಹಾನಿ ಉಂಟಾಗಿದೆ. ಇದಕ್ಕೆ ಪರಿಹಾರ ಕೊಡಿ ಎಂದು ದತ್ತಾತ್ರೇಯನಗರದ ಅಂಗಡಿಗಳ ಮಾಲೀಕರು ಅಳಲು ತೋಡಿಕೊಂಡರು.