Asianet Suvarna News Asianet Suvarna News

ಮಹಾಮಳೆಗೆ ಮುಳುಗಿದ ಬೆಂಗಳೂರು: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

ಜಲಾವೃತ: ಕರೆಯಂತದ ಪ್ರಮೋದ್‌ ಲೇಔಟ್‌| ಮೈಸೂರು ರಸ್ತೆಯಲ್ಲಿ ನಡುಮಟ್ಟಕ್ಕೆ ನೀರು| ಪ್ರವಾಹಕ್ಕೆ ತತ್ತರಿಸಿದ ನೈರುತ್ಯ-ದಕ್ಷಿಣ ಬೆಂಗಳೂರು| ತರಗೆಲೆಗಳಂತೆ ಕೊಚ್ಚಿಕೊಂಡು ಹೋದ ಕಾರುಗಳು| ಬೋಟ್‌ ಬಳಸಿ ಜನರ ರಕ್ಷಿಸಿದ ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳ| ನೆಲಮಹಡಿಯಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ| 

Heavy Rain in Bengaluru Yesterday grg
Author
Bengaluru, First Published Oct 24, 2020, 7:14 AM IST

ಬೆಂಗಳೂರು(ಅ.24): ಹೊಸಕೆರೆಹಳ್ಳಿಯಲ್ಲಿ ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್‌ ರಾಜಕಾಲುವೆಯ ಕಾಮಗಾರಿಗಾಗಿ ನೀರಿನ ದಿಕ್ಕನ್ನು ಬದಲಿಸಲಾಗಿತ್ತು. ಇದರಿಂದ ಭಾರೀ ಪ್ರಮಾಣದ ನೀರು ಒಮ್ಮೆಗೆ ನುಗ್ಗಿದ ಪರಿಣಾಮ ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳು ಜಲಾವೃತವಾಗಿದವು. ಈ ಭಾಗದಲ್ಲಿ ಅಂದಾಜು 350ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳಿಗೆ ಕಾಮಗಾರಿ ವಿಳಂಬದಿಂದಲೇ ಪ್ರವಾಹ ಉಂಟಾಗಿದೆ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ಹೊಸಕೆರೆಹಳ್ಳಿ ಪಿಇಎಸ್‌ ಕಾಲೇಜು ಹಿಂಭಾಗದ ರಾಜಕಾಲುವೆ ಪಕ್ಕದ ರಸ್ತೆಯಲ್ಲೇ ನೀರಿ ನದಿಯಂತೆ ರಭಸವಾಗಿ ಹರಿದ ಪರಿಣಾಮ ಮಾರುತಿ ಸ್ವಿಫ್ಟ್‌ ಕಾರೊಂದು ಕೊಚ್ಚಿಕೊಂಡು ಹೋಯಿತು. ದತ್ತಾತ್ರೇಯನಗರ ಒಂದರಲ್ಲೇ 300ಕ್ಕೂಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಬಡಾವಣೆಗಳ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಹೊಸಕೆರೆಹಳ್ಳಿಯಲ್ಲಿ ಜನರು ಕಟ್ಟಡಗಳ ಮೇಲೆ ಆಶ್ರಯಪಡೆದಿದ್ದರು. ನೆಲಮಹಡಿಯಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಬೋಟ್‌ ಮೂಲಕ ರಕ್ಷಿಸಿದರು. ಹೊಸಕೆರೆಹಳ್ಳಿ ದತ್ತಾತ್ರೇಯ ದೇವಾಲಯವೂ ಮುಳುಗಿದೆ. ಅ.21ರಂದು ಸುರಿದ ಮಳೆಯಿಂದಾಗಿ ಹೊಸಕೆರೆಹಳ್ಳಿ ಗುರುದತ್ತ ಲೇಔಟ್‌ನಲ್ಲಿ ರಾಜಕಾಲುವೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು.

ಬಡಾವಣೆ-ರಸ್ತೆಗಳು ಜಲಾವೃತ:

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಕೋರಮಂಗಲ 4ನೇ ಬ್ಲಾಕ್‌, ಸಿಟಿ ಬೆಡ್‌ ಭಾಸ್ಕರ್‌ ರಾವ್‌ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರದಾಡಿದರು.

ಧಾರಾಕಾರ ಮಳೆಗೆ ಕೊಚ್ಚಿ ಹೋದ ರಾಜಧಾನಿ, ವರುಣನ ಆಟ ಇನ್ನೆಷ್ಟು ದಿನ?

ಬನಶಂಕರಿ 2ನೇ ಹಂತ, ಎಲ್‌ಐಸಿ ಕಾಲೋನಿ 1ನೇ ಕ್ರಾಸ್‌, ಐಟಿಐ ಬಡಾವಣೆ, ಸಿಂಡಿಕೇಟ್‌ ಲೇಔಟ್‌, ವಿದ್ಯಾಪೀಠ, ಉತ್ತರಹಳ್ಳಿ, ವಿ.ವಿ.ಪುರಂ, ಕೋಣನಕುಂಟೆ, ಪುಟ್ಟೇನಹಳ್ಳಿ, ಯಲಚೇನಹಳ್ಳಿ, ಚಿಕ್ಕಲ್ಲಸಂದ್ರ, ಜೆ.ಪಿ.ನಗರ, ಕುಮಾರಸ್ವಾಮಿ ಬಡಾವಣೆ, ಬೆಳ್ಳಂದೂರು, ಮಹದೇವಪುರ, ವಸಂತಪುರ, ಉತ್ತರಹಳ್ಳಿ, ಬೇಗೂರು ಸೇರಿದಂತೆ ನಗರದ ಹಲವೆಡೆ ರಸ್ತೆಗಳು, ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ಪೀಠೋಪಕರಣ ನೀರುಪಾಲು:

ಹೊಸಕೆರೆಹಳ್ಳಿ, ಗುರುದತ್ತನಗರ, ಪ್ರಮೋದ್‌ ಬಡಾವಣೆ, ಕೋರಮಂಗಲ, ಜೆ.ಪಿ.ನಗರ, ಕುಮಾರಸ್ವಾಮಿ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಆಹಾರ ವಸ್ತುಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಪೀಠೋಪಕರಣ ಸೇರಿ ಬೆಲೆ ಬಾಳುವ ವಸ್ತುಗಳು ಹಾನಿಗೊಳಗಾಗಿವೆ.

2 ಕಿ.ಮೀ. ಟ್ರಾಫಿಕ್‌ ಜಾಂ, ಸಿಲುಕಿದ ಆಂಬ್ಯುಲೆನ್ಸ್‌

ನಗರದ ಮಿನರ್ವ ಸರ್ಕಲ್‌ನಲ್ಲಿ ಆಂಬ್ಯುಲೆನ್ಸ್‌ವೊಂದು ಮಳೆ ನೀರಿಗೆ ಸಿಲುಕಿತು. ಜೆ.ಸಿ.ರಸ್ತೆಯಲ್ಲಿ ನಾಲ್ಕು ಅಡಿ ಎತ್ತರಕ್ಕೆ ನೀರು ಹರಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಮುಂದಕ್ಕೆ ತೆರಳಲಾಗದೆ ನೀರಿನಲ್ಲಿ ಸಿಲುಕಿಗೊಂಡವು. ಇದರಿಂದ ಕೆ.ಆರ್‌.ಮಾರುಕಟ್ಟೆಗೆ ತೆರಳುವ ರಸ್ತೆ ಹಾಗೂ ಕಾರ್ಪೊರೇಷನ್‌ ರಸ್ತೆ, ಎಸ್‌.ಪಿ.ರಸ್ತೆ, ಟೌನ್‌ಹಾಲ್‌ ಸುತ್ತಮುತ್ತ ಭಾರೀ ವಾಹನ ಸಂಚಾರ ದಟ್ಟಣೆ ಉಂಟಾಯಿತು. ನೀರಿನ ಹರಿವಿನ ಮಟ್ಟತಗ್ಗುವವರೆಗೂ ವಾಹನ ಸವಾರರು ರಸ್ತೆಗೆ ಇಳಿಯಲಾಗದೆ ವಾಹನಗಳಲ್ಲೇ ಕೂರುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಲಾಲ್‌ಬಾಗ್‌ ರಸ್ತೆಯಲ್ಲಿಯೂ ಸುಮಾರು ಎರಡು ಅಡಿ ನೀರು ಹರಿದ ಪರಿಣಾಮ ವಾಹನಗಳು ಮುಂದಕ್ಕೆ ಚಲಿಸಲಾಗದೆ ರಸ್ತೆಯಲ್ಲಿ ನಿಂತ ಪರಿಣಾಮ ಸುಮಾರು 2 ಕಿ.ಮೀ. ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.

ಗವಿಗಂಗಾಧರ ಕಾಂಪೌಂಡ್‌ ಕುಸಿತ

ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಕೇಂಪೇಗೌಡನಗರ ಬಳಿಯ ಗವಿಪುರಂ ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಹರಿಹರ ಗುಡ್ಡ ಪಾರ್ಕ್ನ ಕಾಂಪೌಂಡ್‌ ಕುಸಿಯಿತು.

ಎಳೆಮಗು, ವ್ಯಕ್ತಿಯ ರಕ್ಷಣೆ

ರಾಜಕಾಲುವೆ ಒಡೆದು ಹೊಸಕೆರೆಹಳ್ಳಿ ಹಾಗೂ ದತ್ತಾತ್ರೇಯ ನಗರದ ಮನೆಗಳಿಗೆ ನೀರು ನುಗ್ಗಿ ಕೆರೆಯಂತಾಗಿದ್ದು, ಈ ವೇಳೆ ದತ್ತಾತ್ರೇಯ ನಗರದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ಆ ಮನೆಯಲ್ಲಿದ್ದ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಯುವಕನೋರ್ವ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಂತೆಯೇ ಹೊಸಕೆರೆಹಳ್ಳಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ರಕ್ಷಿಸಿದ ಪ್ರಸಂಗವೂ ನಡೆದಿದೆ.

ಸತತ ಮಳೆಗೆ ತತ್ತರಿಸಿದ ಆರ್‌.ಆರ್‌.ನಗರ, ಕೆಂಗೇರಿ

ಕಳೆದ 5-6 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್‌ ಸಿಟಿ ಮಂದಿ ತತ್ತರಿಸಿದ್ದು, ಇನ್ನು ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ರಾಜರಾಜೇಶ್ವರಿನಗರದ ಪ್ರಮೋದ ಲೇಔಟ್‌, ಮೀನಾಕ್ಷಿ ಕಲ್ಯಾಣ ಮಂಟಪ, ಕಾಫಿ ಕಟ್ಟೆಸುತ್ತಮುತ್ತಲ ಪ್ರದೇಶ ಮಳೆ ನೀರು ತುಂಬಿ ಕೆರೆಯಾಗಿತ್ತು. ಇಲ್ಲಿನ ಸುಮಾರು 100ಕ್ಕೂ ಹೆಚ್ಚಿನ ಕಟ್ಟಡಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಇಲ್ಲಿನ ಮನೆಗಳು ತಗ್ಗು ಪ್ರದೇಶಗಳಲ್ಲಿ ಇರುವುದರಿಂದ ನೀರು ತುಂಬಿಕೊಡಿತ್ತು.

ಅಂತೆಯೇ ಮನೆ ಎದುರು ನಿಲುಗಡೆ ಮಾಡಿದ್ದ ವಾಹನಗಳು ಅರ್ಧದಷ್ಟುನೀರಿನಲ್ಲಿ ಮುಳುಗಿದ್ದವು. ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಈ ಪ್ರದೇಶಗಳು ಜಲಾವೃತವಾಗಿದ್ದವು. ಇದೀಗ ಮತ್ತೊಮ್ಮೆ ಅದೇ ಪ್ರದೇಶಗಳು ಜಲಾವೃತವಾಗಿ ಅವಾಂತರ ಸೃಷ್ಟಿಯಾಗಿತ್ತು. ಕೆಂಗೇರಿಯ ಮೈಸೂರು ರಸ್ತೆಯಲ್ಲೂ ನಡುಮಟ್ಟಕ್ಕೆ ನೀರು ನಿಂತಿತ್ತು. ವಾಹನಗಳು ನೀರಿನಲ್ಲೇ ಅರ್ಧದಷ್ಟುಮುಳುಗಿದ್ದವು.

ಪ್ರವಾಹ ಪ್ರದೇಶಕ್ಕೆ ಆರ್‌.ಅಶೋಕ್‌ ಭೇಟಿ

ಹೊಸಕೆರೆಹಳ್ಳಿ ಸುತ್ತಮುತ್ತ ಮಳೆ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾಲುವೆ ಭರ್ತಿಯಾಗಿ ಉಕ್ಕಿ ಹರಿದ ಪರಿಣಾಮ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 15-20 ವರ್ಷಗಳ ಬಳಿಕ ಈ ರೀತಿ ಆಗಿದೆ. ಈ ಭಾಗದ ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ನಿವಾಸಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

17.22 ಮಿ.ಮೀ. ಮಳೆ

ಸಂಜೆ 7.30ರ ವೇಳೆಗೆ ಬೆಂಗಳೂರಿನಲ್ಲಿ ಸರಾಸರಿ 17.22 ಮಿ.ಮೀ. ಮಳೆ ಬಿದ್ದಿದೆ. ಆರ್‌.ಆರ್‌. ನಗರ (2ನೇ ಮಾಪನ ಕೇಂದ್ರ) ಹಾಗೂ ಕೆಂಗೇರಿಯಲ್ಲಿ ಅತೀ ಹೆಚ್ಚು 103 ಮಿ.ಮೀ ಮಳೆ ಆಗಿದೆ. ಉಳಿದಂತೆ ವಿದ್ಯಾಪೀಠ 95.5, ಉತ್ತರಹಳ್ಳಿ 87.5, ಕೋಣನಕುಂಟೆ ಮತ್ತು ಬೊಮ್ಮನಹಳ್ಳಿ 83, ಬಸವನಗುಡಿ 81, ಕುಮಾರಸ್ವಾಮಿ ಬಡಾವಣೆ 80, ವಿಶ್ವೇಶ್ವರ ಪುರಂ 71, ಉತ್ತರಹಳ್ಳಿ 67, ಆರ್‌.ಆರ್‌.ನಗರ (ಒಂದನೇ ಮಳೆ ಮಾಪನ ಕೇಂದ್ರ), ಸೂಳೆಕೆರೆ ಹಾಗೂ ಸಾರಕ್ಕಿ ತಲಾ 65.5, ದೊರೆಸಾನಿಪಾಳ್ಯ ಮತ್ತು ಲಕ್ಕಸಂದ್ರ ತಲಾ 55, ಅರೆಕರೆ 54, ಕೊಡಿಗೆಹಳ್ಳಿ 52.5, ಐಟಿಸಿ ಜಾಲ 49.5, ಗೊಟ್ಟಿಗೆರೆ 46, ಕೋರಮಂಗಲ 42, ಜ್ಞಾನಭಾರತಿ ಕ್ಯಾಂಪಸ್‌ 41.5, ಬೇಗೂರು 37.5, ಮಾರುತಿ ಮಂದಿರ 36.5 ಮಿ.ಮೀ. ಮಳೆಯಾಗಿದೆ.
 

Follow Us:
Download App:
  • android
  • ios