ಚಾಮರಾಜನಗರ: ಗೃಹ ಮಂಡಳಿ ನಿವೇಶನ ಹಂಚಿಕೆ, ಭೂಸ್ವಾಧೀನ ಪ್ರಕ್ರಿಯೆ ಇಲ್ಲದೆ ಜನ ಕಂಗಾಲು..!
ಅರ್ಜಿ ಸಲ್ಲಿಸಿದ ಸಾರ್ವಜನಿಕರಿಂದ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೊಂದಣಿ ಶುಲ್ಕದ ರೂಪದಲ್ಲಿ ಕಟ್ಟುಸಿಕೊಂಡಿದ್ದ ಕರ್ನಾಟಕ ಗೃಹ ಮಂಡಳಿ ಮೂರು ವರ್ಷ ಕಳೆದರೂ ನಿವೇಶನ ಹಂಚದೆ ಅವರ ಕನಸಿಗೆ ಎಳ್ಳು ನೀರು ಬಿಟ್ಟಿದೆ.
ವರದಿ- ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ನ.17): ಅಲ್ಲಿ ಸ್ವಂತ ನಿವೇಶನ ಹೊಂದಬೇಕು, ಮನೆ ಕಟ್ಟಿಕೊಳ್ಳಬೇಕು ಎಂದು ಕನಸು ಹೊತ್ತು ನಿವೇಶನ ಕ್ಕಾಗಿ ನೂರಾರು ಜನ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಸಾರ್ವಜನಿಕರಿಂದ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೊಂದಣಿ ಶುಲ್ಕದ ರೂಪದಲ್ಲಿ ಕಟ್ಟುಸಿಕೊಂಡಿದ್ದ ಕರ್ನಾಟಕ ಗೃಹ ಮಂಡಳಿ ಮೂರು ವರ್ಷ ಕಳೆದರೂ ನಿವೇಶನ ಹಂಚದೆ ಅವರ ಕನಸಿಗೆ ಎಳ್ಳು ನೀರು ಬಿಟ್ಟಿದೆ.
ಹೇಳಿ ಕೇಳಿ ಚಾಮರಾಜನಗರ ಹಿಂದುಳಿದ ಹಾಗು ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದ್ದು ಬಹುತೇಕ ಜನರಿಗೆ ಸರಿಯಾಗಿ ಒಂದು ಸೂರು ಇಲ್ಲದ ಬಾಡಿಗೆ ಮನೆಯಲ್ಲೆ ವಾಸಿಸುತ್ತಿದ್ದ ಜನರಿಗೆ ಒಂದು ನಿವೇಶನ ಸಿಕ್ಕರೆ ಸಾಕು ಎನ್ನುವಂತಹ ಪರಿಸ್ಥಿತಿ ಇರುವಾಗ ಸರ್ಕಾರ ಕರ್ನಾಟಕ ಗೃಹ ಮಂಡಳಿಯಿಂದ ಸರ್ಕಾರಿ ಜಮೀನುಗಳನ್ನು ಇಲ್ಲವೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ನಿವೇಶನಗಳಾಗಿ ಪರಿವರ್ತಿಸಿ ಹಂಚುವ ಕರ್ನಾಟಕ ಗೃಹ ಮಂಡಳಿ ಚಾಮರಾಜನಗರದ ಮಾದಪುರದ ಬಳಿ ನಿವೇಶನ ಹಂಚುವುದಾಗಿ 2020 ರ ಏಪ್ರಿಲ್ ನಲ್ಲಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿತ್ತು. ದಿನಪತ್ರಿಕೆ ಗಳಲ್ಲಿ ಬಂದ ಜಾಹಿರಾತು ನೋಡಿದ 4 ಸಾವಿರಕ್ಕು ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಷ್ಟೂ ಜನರಿಂದ 3,300, 5,500, 11,000 , 16,000 ಹೀಗೆ ಅರ್ಜಿದಾರರಿಂದ ಸುಮಾರು 3.42 ಕೋಟಿ ರೂಪಾಯಿಗು ಹೆಚ್ಚು ನೊಂದಣಿ ಹಾಗು ಆರಂಭಿಕ ಠೇವಣಿ ಕಟ್ಟಿಸಿಕೊಂಡಿದ್ದ ಕರ್ನಾಟಕ ಗೃಹಮಂಡಳಿ ಮೂರು ವರ್ಷ ಕಳೆದರು ನಿವೇಶನ ಹಂಚದೆ ಜನರ ಕನಸಿಗೆ ಮಣ್ಣೆರಿಚಿದೆ. ಅರ್ಜಿ ಸಲ್ಲಿಸಿದವರಿಗೆ ಈವರೆಗು ಯಾವ ಮಾಹಿತಿಯನ್ನು ನೀಡದ ಕರ್ನಾಟಕ ಗೃಹಮಂಡಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಮಾದಪ್ಪನ ದೀಪಾವಳಿ ಜಾತ್ರೆ: ಭಕ್ತರಿಂದ ದೇವಸ್ಥಾನಕ್ಕೆ ಇಷ್ಟೊಂದು ಕೋಟಿ ಆದಾಯ ಬಂತಾ?
ಭೂಸ್ವಾಧೀನಕ್ಕು ಮೊದಲೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಗೃಹಮಂಡಳಿ ಎಡವಟ್ಟು ಮಾಡಿದೆ. ಜಂಟಿ ಸಹಭಾಗಿತ್ವದಲ್ಲಿ ಲೇಔಟ್ ನಿರ್ಮಿಸಲು ಉದ್ದೇಶಿಸಿದ್ದು, ಈ ಯೋಜನೆಗೆ ರೈತರು ತಮ್ಮ ಜಮೀನುಗಳನ್ನು ಕೊಡಲು ಒಪ್ಪುತ್ತಿಲ್ಲ, ಹಾಗಾಗಿ ಕಳೆದ ಮೂರು ವರ್ಷಗಳಿಂದ ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ಇಲ್ಲದೆ ಹಾಗೆ ಇದ್ದು ಇನ್ನು ಜಮೀನು ಹುಡುಕಾಟದಲ್ಲೇ ಇದೆ. ಹಾಗಾಗಿ ನಿವೇಶನ ಹಂಚಲು ಸಾಧ್ಯವಾಗಿಲ್ಲ ಎನ್ನುತ್ತಿದ್ದಾರೆ ಅಧಿಕಾರಿ ಮಹೇಶ್.
ಒಟ್ಟಾರೆ ಸದ್ಯಕ್ಕೆ ಈ ಸಮಸ್ಯೆ ಬಗೆಹರಿಯುವ ಹಾಗೆ ಕಾಣಿಸುತ್ತಿಲ್ಲ. ಮೂರು ವರ್ಷದಿಂದ ಅರ್ಜಿದಾರರು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದು ಜಂಟಿ ಸಹಭಾಗಿತ್ವಕ್ಕೆ ರೈತರನ್ನು ಒಪ್ಪಿಸಿ ಅವರಿಂದ ಜಮೀನುಗಳನ್ನು ಪಡೆದು ನಂತರ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಬೇಕಿತ್ತು. ಆದರೆ ಆ ಕೆಲಸ ಮಾಡದ ಗೃಹಮಂಡಳಿ ಅತ್ತ ಜನರಿಂದ ಕಟ್ಟಿಸಿಕೊಂಡಿದ್ದ ಆರಂಭಿಕ ಠೇವಣಿ ಹಾಗೂ ನೊಂದಣಿ ಶುಲ್ಕವನ್ನು ವಾಪಸ್ ಮಾಡದೆ ಇತ್ತ ನಿವೇಶನವನ್ನು ನೀಡದೆ ಜನರನ್ನು ದಿಕ್ಕುತಪ್ಪಿಸಿದೆ.