ತಹಸೀಲ್ದಾರ್‌ ಕಚೇರಿ-1, ಅಂಚೆ ಕಚೇರಿಯಲ್ಲಿ ಆಧಾರ ಸೇವಾ ಕೇಂದ್ರ ಸ್ಥಗಿತ, ವಿದ್ಯುತ್‌-ಸರ್ವರ್‌ ಸಮ​ಸ್ಯೆ, ನಿತ್ಯ ತಾಲೂಕಿನ ನೂರಾರು ಜನರ ಅಲೆದಾಟ. 

ನಾಗರಾಜ್‌ ನ್ಯಾಮತಿ

ಸುರಪುರ(ಜು.18):  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷಿ ್ಮೕ ಲಾಭ ಪಡೆದುಕೊಳ್ಳಲು ಆಧಾರ್‌ನ​ಲ್ಲಿ ಆಗಿರುವ ಲೋಪ ಸರಿಪಡಿಸಿಕೊಳ್ಳಲು ತಾಲೂಕಿನ ಮಿನಿ ವಿಧಾನಸೌಧದಲ್ಲಿರುವ ಎರಡು ಆಧಾರ್‌ ಸೇವಾ ಕೇಂದ್ರಗಳಲ್ಲಿ ಒಂದು ಸ್ಥಗಿತದಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ತಹಸೀಲ್ದಾರ್‌ ಕಚೇರಿಯಲ್ಲಿ-2, ಅಂಚೆಕಚೇರಿ-1, ಎಸ್‌ಬಿಐ-1 ಆಧಾರ್‌ ಸೇವಾ ಕೇಂದ್ರಗಳಿವೆ. ಇದರಲ್ಲಿ ಅಂಚೆಕಚೇರಿ, ತಹಸೀಲ್ದಾರ್‌ ಕಚೇರಿ ಸೇರಿ ಒಟ್ಟು ಎರಡು ಆಧಾರ್‌ ಕೇಂದ್ರ ಸ್ಥಗಿತವಾಗಿವೆ. ಇದರಿಂದ ಆಧಾರ್‌ ಹೆಸರು ತಿದ್ದುಪಡಿ, ಮೊಬೈಲ್‌ ನಂಬರ್‌ ಸೇರ್ಪಡೆ, ವಿಳಾ​ಸ ಬದಲಾವಣೆ, ಹೊಸ ಆಧಾರ ಕಾರ್ಡ್‌ ಮಾಡಿಸುವ ಕೆಲಸ್ಕೆ ತೀವ್ರ ತೊಂದ​ರೆ​ಯಾ​ಗಿದೆ.

ಬಾರದ ಮಳೆ: ಯಾದಗಿರಿಯಲ್ಲಿ ಅಳಿದುಳಿದ ಬೆಳೆ ಸಂರಕ್ಷಣೆಗೆ ರೈತರ ಹರಸಾಹಸ..!

ಗ್ಯಾರಂಟಿ ಕೈತಪ್ಪುವ ಭೀತಿ:

ಅನ್ನಭಾಗ್ಯದ 5 ಕೆ.ಜಿ ಅಕ್ಕಿ ಹಣ ಕುಟುಂಬದ ಯಜಮಾನಿ ಆಧಾರ್‌ ಲಿಂಕ್‌ ಇರುವ ಬ್ಯಾಂಕ್‌ ಖಾತೆಗೆ ಹಾಕಲಾಗಿದೆ. ಗೃಹಲಕ್ಷಿ ್ಮ ಯೋಜನೆಯಡಿ ಮಾಸಿಕ 2000 ರು. ಕುಟುಂಬದ ಯಜಮಾನಿ ಖಾತೆಗೆ ಹಾಲಾಗು​ತ್ತ​ದೆ. ಇದರಿಂದ ಆಧಾರ್‌ ಕಾರ್ಡ್‌ಗೆ ಕೊಟ್ಟಿರುವ ಮೊಬೈಲ್‌ ನಂಬರ್‌ ಬ್ಯಾಂಕ್‌ ಅಕೌಂಟ್‌ಗೆ ನೀಡಿರುವ ನಂಬರ್‌ ಒಂದೇ ಆಗಿರಬೇಕು. ಇದರಲ್ಲಿ ಕೊಂಚ ವ್ಯತ್ಯಾಸವಾದರೂ ಗ್ಯಾರಂಟಿ ಕೈತಪ್ಪುವ ಭೀತಿಯಿದೆ. ಹೀಗಾಗಿ ಜನರು ಆಧಾರ್‌ ಕೇಂದ್ರ​ಗ​ಳಿಗೆ ಮುಗೆ​ಬಿ​ದ್ದಿ​ದ್ದಾರೆ.

ನಿತ್ಯ ಅಲೆದಾಟ:

ಆಧಾರ ಲೋಪ ಸರಿಪಡಿಸಲು ಸೇವಾ ಕೇಂದ್ರಗಳಿಗೆ ಜನ ಎಡತಾಕುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಕೇಂದ್ರಗಳ ಮುಂದೆ ಕೂರುತಿದ್ದಾರೆ. ದಿನಕ್ಕೆ 30 ರಿಂದ 40 ಆಧಾರ್‌ ಸರಿ ಪಡಿಸಲು ಸಾಧ್ಯವಾಗುತ್ತಿದೆ. ಹೀಗಾ​ಗಿ ಜನರು ರೋಸಿ ಹೋಗಿದ್ದಾರೆ.

ಮೊದಲು ಬಂದವರಿಗೆ ದಿನಕ್ಕೆ 25 ಟೋಕನ್‌ ವಿತರಿಸಲಾಗುತ್ತಿದೆ. ಅವರಿಗೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಬಂದು ಆಧಾರ ಮಾಡಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ ನಂತರ ಬಂದವರಿಗೂ ಆಧಾರ ಮಾಡಿಕೊಡಲಾಗುತ್ತಿದೆ ಎಂಬುದಾಗಿ ಆಧಾರ ಮಾಡುವ ಸಿಬ್ಬಂದಿ ತಿಳಿಸಿದ್ದಾರೆ.

ಸರ್ವರ್‌, ವಿದ್ಯುತ್‌ ಸಮಸ್ಯೆ:

ಸುರಪುರ ತಾಲೂಕು ಆಡಳಿತ ಸೌಧದಲ್ಲಿ ಸರ್ವರ್‌ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಅಲ್ಲದೇ ಪದೇ ಪದೆ ಕೈಕೊಡುತ್ತಿರುವ ವಿದ್ಯುತ್‌ನಿಂದ ಆಧಾರ್‌ ತಿದ್ದುಪಡಿಗೆ ತೀವ್ರ ಸಮ​ಸ್ಯೆ​ಯಾ​ಗಿ​ದೆ. ತಾಲೂಕು ಕೇಂದ್ರದಲ್ಲಿರುವ ಜನರೇಟರ್‌ನ್ನು ಆರಂಭಿಸಿ ಜನರ ಕೆಲಸಕ್ಕೆ ಸಹಕರಿಸಬಹುದು. ಆದರೆ, ಯಾಕೆ ಪ್ರಾರಂಭಿಸುವುದಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಆಧಾರ್‌ ತಿದ್ದುಪಡಿ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಬರುವವರಿಗೆ ಟೋಕನ್‌ ನಂಬರ್‌ ನೀಡಲಾಗುತ್ತದೆ. ಆದ್ಯತೆವುಳ್ಳವರಿಗೆ ಕೂಡಲೇ ಮಾಡಿಕೊಡಲಾಗುತ್ತಿದೆ. ದಿನಕ್ಕೆ ಶಕ್ತಿಮೀರಿ 40 ಆಧಾರ್‌ ತಿದ್ದುಪಡಿ ಮಾಡಲಾಗುತ್ತಿದೆ. ಮಧ್ಯಾಹ್ನನದ ನಂತರ ಬಂದವರಿಗೂ ಕೆಲಸ ಮಾಡಿಕೊಡುತ್ತಿದ್ದೇವೆ. ವಿದ್ಯುತ್‌ ಮತ್ತು ಸರ್ವರ್‌ ಸಮಸ್ಯೆ ತಡೆಯಬೇಕು ಅಂತ ಆಧಾರ ಸೇವಾ ಸಿಬ್ಬಂದಿ ಸಂಗೀತಾ ಹೇಳಿದ್ದಾರೆ. 

ತಹಸೀಲ್‌ ಕಚೇರಿ, ಅಂಚೆಕಚೇರಿಯಲ್ಲಿ ಸ್ಥಗಿತಗೊಳಿಸಿರುವ ಆಧಾರ್‌ ಸೇವಾ ಕೇಂದ್ರಗಳನ್ನು ಪ್ರಾರಂಭಿಸಬೇಕು. ರಾಜ್ಯ ಸರ್ಕಾರದ ಗ್ಯಾರಂಟಿಗಳು ಜನರಿಗೆ ತಲುಪಲು ತಾಲೂಕಾಡಳಿತ ಸಹಕರಿಸಬೇಕು. ಗ್ಯಾರಂಟಿಗಳಿಂದ ಜನರು ವಂಚಿತರಾದರೆ ತಹಸೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡಿ ಪ್ರತಿಭಟನೆ ನಡೆಸಲಾಗುವುದು ಅಂತ ದಸಂಸ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.