ಜಿಟಿಜಿಟಿ ಮಳೆಗೆ ಕಲಬುರಗಿ ಜನಜೀವನ ಸ್ಥಬ್ಧ
* ಕಲಬುರಗಿ ಜಿಲ್ಲೆಯಾದ್ಯಂತ ಪುಷ್ಯ ಮಳೆ ಅಬ್ಬರ
* ಚಿಂಚೋಳಿಯಲ್ಲಿ ಮುಲ್ಲಾಮಾರಿಗೆ ನೆರೆ ಭೀತಿ
* ಕಾಗಿಣಾ, ಕಮಲಾವತಿ ಅಬ್ಬರ ಜೋರು, ಭೀಮಾ ನದಿಗೂ ಹೆಚ್ಚುತ್ತಿದೆ ನೀರಿನ ಒಳ ಹರಿವು
ಕಲಬುರಗಿ(ಜು.23): ಜಿಲ್ಲೆಗೆ ಈ ಬಾರಿ ವರುಣ ತುಂಬಾನೇ ಕೃಪೆ ತೋರುತ್ತಿದ್ದಾನೆ. ಕಳೆದ 2 ವಾರದಿಂದ ಪುನರ್ವಸು ಮಳೆ ನಿತಂರ ಸುರಿದಿತ್ತು, ಇದೀಗ ಜು.20ರಿಂದ ಪುಷ್ಯ ಮಳೆಯೂ ಒಂದೇ ಸವನೆ ಎಡೆಬಿಡದಂತೆ ಸುರಿಯುವ ಮೂಲಕ ಜಿಲ್ಲೆಯಲ್ಲಿ ಮಳೆಯ ಅಬ್ಬರ ಬಿರುಸುಗೊಳ್ಳುವಂತೆ ಮಾಡಿದೆ.
ಪುನರ್ವಸು ಮಳೆ ರಾತ್ರಿ ಸುರಿದು ಹಗಲು ಕೊನೆಪಕ್ಷ ಸೂರ್ಯನ ದರುಶನವಾದರೂ ಆಗುತ್ತಿತ್ತು. ಆದರೀಗ ಪುಷ್ಯ ಮಳೆ ಇದಕ್ಕೂ ಅವಕಾಶ ನೀಡದಂತೆ ಹಗಲು- ರಾತ್ರಿ ಸುರಿಯುತ್ತ ಬಿಸಿಲೂರು ಕಲಬುರಗಿಯನ್ನು ಮಲೆನಾಡಾಗಿಸಿದೆ. ಚಿಂಚೋಳಿ, ಅಫಜಲ್ಪುರ, ಕಲಬುರಗಿ, ಸೇಡಂ , ಚಿತ್ತಾಪುರ, ಶಹಾಬಾದ್ ಇಲ್ಲೆಲ್ಲಾ ಮಳೆ ಎಡೆಬಿಡದೆ ಸುರಿಯುತ್ತಿರೋದರಿಂದ ಕಾಗಿಣಾ, ಭೀಮಾ, ಅಮರ್ಜಾ, ಕಮಲಾವತಿ ನದಿಗಳು ಹೆಚ್ಚಿನ ನೀರು ಪಡೆದುಕೊಂಡು ಕಂಗೊಳಿಸುತ್ತಿವೆ.
ಮಳೆ ನೀರು ಹೊಲಗದ್ದೆಗಳಲ್ಲಿ ನಿಂತು ಕೆರೆಯ ನೋಟ ಹುಟ್ಟು ಹಾಕಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತಲಾಗಿದ್ದ ಹೆಸರು, ಉದ್ದು, ಎಳ್ಳು, ಅಲಸಂದಿ ಹೊಲಗಳಂತೂ ಮಳೆಯಿಂದಾಗಿ ಜಲಾವೃತಗೊಂಡಿವೆ. ಹೆಸರು ಹೂವಾಡುವ ಹಂತ ತಲುಪಿತ್ತು, ಸತತ ಮಳೆಗೆ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಎಳ್ಳು, ಅಲಸಂದಿ ಬೆಳೆಗಳು ಮುರುಟಿ ಹೋಗುತ್ತಿವೆ. ಹೀಗಾಗಿ ರೈತರು ಕೈಗೆ ಬಂತು ಬಂಪರ್ ಫಸಲು ಎಂದು ಲೆಕ್ಕ ಹಾಕಿದ್ದವರು ಜೋಲು ಮೋರೆ ಹಾಕಿಕೊಂಡು ಅದ್ಯಾವಾಗ ಮಳೆ ಸುರಿಯೋದು ನಿಲ್ಲುವುದೋ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.
ಚಿಂಚೋಳಿಯಲ್ಲಿ ಜಲಪ್ರಳಯ
ಜಿಲ್ಲೆಯ ಚಿಂಚೋಳಿಯಲ್ಲಿ ಕಳೆದ 15 ದಿನಿದಂದ ಸುರಿಯುತ್ತಿರುವ ಮಳೆ ಇನ್ನೂ ನಿಂತಿಲ್ಲ. ಇಲ್ಲಿನ ಕೆಳದಂಡೆ ಮುಲ್ಲಾಮಾರಿ ನದಿ ಉಕ್ಕೇರಿದೆ. ಚಂದ್ರಂಪಳ್ಳಿ ಜಲಾಶಯದಿಂದ ನಿತ್ಯ 7 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ತೀರದ ಊರುಗಳಲ್ಲಿ ನೆರೆಯ ಭೀತಿ ಕಂಡಿದೆ. ಇಲ್ಲದೆ ಸತತ ಮಳೆಯಿಂದಾಗಿ ತಾಲೂಕಿನ ಜನ ತತ್ತರಿಸಿಹೋಗಿದ್ದಾರೆ. ಕಳೆದ 2 ವಾರದಿಂದ ಸೂರ್ಯನನ್ನೇ ಕಂಡಿಲ್ಲವೆಂದು ಕಂಗಾಲಾಗಿದ್ದಾರೆ. 1, 300 ಚಕಿ ವನ್ಯಧಾಮ ಹೊಂದಿರುವ ಇಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಮಲೆ ಸುರಿಯುತ್ತದೆ. ಈ ಬಾರಿ ಇನ್ನೂ ಹೆಚ್ಚಿನ ಮಳೆ ಇಲ್ಲಿ ಸುರಿಯುತ್ತಿರೋದರಿಂದ ತಾಲೂಕಿನಲ್ಲಿ ರೈತರು ಕಂಗಾಲಾಗುವಂತೆ ಮಾಡಿದೆ.
ಕಲಬುರಗಿಯಲ್ಲಿ ಭಾರೀ ಮಳೆ: ಮುಲ್ಲಾಮಾರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ
ಮಳೆ ಮಾಹಿತಿ:
ಕಲಬುರಗಿಯಲ್ಲಿ ನಗರದ ಐವಾನ್ ಎ ಶಾಹಿ ಅತಿಥಿ ಗೃಹದ ವ್ಯಾಪ್ತಿಯಲ್ಲಿ 15 ಮಿಮಿ, ಡಿಸಿ ಕಚೇರಿ ವ್ಯಾಪ್ತಿಯಲ್ಲಿ 15. 8 ಮಿಮಿ, ಫರತಾಬಾದ್ 14. 2, ಪಟ್ಟಣ- 12. 2, ಅವರಾದ ಬಿ 11. 3 ಹಾಗೂ ಸಾವಳಗಿ ಬಿ ಊರಲ್ಲಿ 9 ಮಿಮಿ ಮಳೆ ಸುರಿದಿದೆ. ಇನ್ನು ಅಫಜಲ್ಪುರ ತಾಲೂಕಿನಲ್ಲಿ ಅಫಜಲ್ಪುರ ಊರಲ್ಲಿ 8. 4, ಅತನೂರಲ್ಲಿ 7. 2, ಕರಜಗಿ- 7. 8 ಹಾಗೂ ಗೊಬ್ಬೂರ (ಬಿ) ಯಲ್ಲಿ 4. 2 ಮಿಮಿ ಮಳೆಯಾಗಿದೆ.
ಚಿಂಚೋಳಿ ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯಿಂದಲೂ ಮಳೆ ಹಾಗೇ ಸುರಿಯುತ್ತಿದೆ. ಇದರಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಕೃಷಿ ಕೃಷಿ ಚಟುವಟಿಕೆ ಮೇಲೆ ಭಾರೀ ಪರಿಣಾಮ ಬೀರಿದೆ. ಮಕ್ಕಳು ಎಸ್ಸೆಸೆಲ್ಸಿ ಪರೀಕ್ಷೆಗೆ ಹಾಜರಾಗಲು ತೀವ್ರ ಪ್ರಯಾಸ ಪಡಬೇಕಾಯಿತು. ಚಿಮ್ಮನಚೋಡ್ ನದಿಯು ತುಂಬಿ ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತವಾಗಿದೆ. ಕಂಚನಾಳ ನದಿಯೂ ಸಹ ತುಂಬಿರುವ ಕಾರಣ ಮಕ್ಕಳು ಪರೀಕ್ಷೆಗೆ ಹಾಜರಾಗಲು ತೊಂದರೆ ಪಡಬೇಕಾಗಿದೆ.