ಕಲಬುರಗಿಯಲ್ಲಿ ಭಾರೀ ಮಳೆ: ಮುಲ್ಲಾಮಾರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ
* ಕಲಬುರಗಿ ಜಿಲ್ಲೆ ಚಿಂಚೋಳಿ- ಅಫಜಲ್ಪುರದಲ್ಲಿ ವರುಣನ ಅಬ್ಬರ
* ಭಾರೀ ಮಳೆಗೆ ಜೀವನ ಜೀವನ ತತ್ತರ
* ಸೇತುವೆ ಮೇಲೆ ನೀರು ಹರಿದ್ದರಿಂದ ಸಂಚಾರಕ್ಕೆ ಅಡ್ಡಿ
ಕಲಬುರಗಿ(ಜು.19): ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ ಹೊತ್ತು ಚಿಂಚೋಳಿ ಹಾಗೂ ಅಫಜಲ್ಪುರದಲ್ಲಿ ಬಿರುಸಿನಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆರಾಯನ ಆರ್ಭಟದಿಂದ ಚಿಂಚೋಳಿಯಲ್ಲಿ ಪ್ರವಹಿಸುವ ಮುಲ್ಲಾಮಾರಿ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನೀರಿನ ಸೆಳೆತಕ್ಕೆ ಓರ್ವ ವ್ಯಕ್ತಿ ಕೊಚ್ಚಿ ಹೋಗಿರುವ ದುರಂತ ಘಟನೆಯೂ ಸಂಭವಿಸಿದೆ.
ಪೋತಂಗಲ ಗ್ರಾಮದ ಪ್ರಲ್ಹಾದ ದಶರಥ ಕಬ್ಬಲಿಗ (30) ನದಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುತ್ತಾನೆ. ಮೃತನು ತೆಲಂಗಾಣ ರಾಜ್ಯಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿ ದಾಟುತ್ತಿರುವಾಗ ಕಾಲು ಜಾರಿ ಆಳವಾದ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ಡಿವೈಎಸ್ಪಿ ಬಸವೇಶ್ವರ ಹೀರಾ, ಸುಲೇಪೇಟ ಸಿಪಿಐ ಜಗದೀಶ ಕೆಜಿ, ಪಿಎಸ್‌ಐ ವಾತ್ಸಲ್ಯ ಪಿಡಿಓ ಜಟ್ಟೂರ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮದಲ್ಲಿಯೇ ಬಿಡಾರ ಹೂಡಿದ್ದಾರೆ.
ಉಭಯ ತಾಲೂಕುಗಳಲ್ಲಿ ಮಳೆಯ ಆರ್ಭಟ ಭಾನುವಾರ ಜೋರಾಗಿತ್ತು. ಗುಡುಗು ಸಿಡಿಲಿನ ಆರ್ಭಟದಿಂದ ಸುರಿದ ಮಳೆಯಿಂದಾಗಿ ಮುಲ್ಲಾಮಾರಿ ನದಿಯಲ್ಲಿ ಪೋತಂಗಲ ಗ್ರಾಮದ ವ್ಯಕ್ತಿಯೋರ್ವನು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆಂದು ವರದಿಗಳು ತಿಳಿಸಿವೆ.
ಚಿಂಚೋಳಿ: ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಭೀತಿ
ಇತ್ತ ಅಫಜಲ್ಪುರ ತಾಲೂಕಿನ ಮಣ್ಣೂರ, ಮಾಶಾಳ, ಕರ್ಜಗಿ, ಶಿವೂರ್, ಕುಡಿಗನೂರ್ ಸೇರದಂತೆ ಸುತ್ತಲಿನ ಬೀಮಾ ತೀರದಲ್ಲಿ ಬಾರಿ ಮಲೆ ಸುರಿದಿದೆ. ಈ ಮಳೆಗೆ ಊರುಗಳಲ್ಲಿ ನೀರು ಹರಿದಿದ್ದು ಅನೇಕರು ತೊಂದರೆಗೆ ಸಿಲುಕಿದ್ದಾರೆ.
ಸೇಡಂ ತಾಲೂಕಿನ ಸಂಗಾವಿ, ಹಾಬಾಳ,ಮೀನಹಾಬಾಳ, ಎಡ್ಡೆಳ್ಳಿ, ದಂಡೊತ್ತಿ ಗ್ರಾಮದರೆಗೆ ಶೋಧ ನಡೆಸಲಾಗಿದೆ. ಆದರೆ ಶವ ಪತ್ತೆಯಾಗಿಲ್ಲ. ಸೋಮವಾರ ಎಸ್‌ಡಿಆರ್‌ಎಫ್ ತಂಡ ಶವ ಪತ್ತೆಗಾಗಿ ಶೋಧ ಕಾರ್ಯ ನಡೆಸಲಿದೆ ಎಂದು ತಹಸಿಲ್ದಾರ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ. ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತದೆ ಯಾರು ನದಿಯತ್ತ ಹೋಗಬಾರದು ಎಂದು ಮುಲ್ಲಾಮಾರಿ ನದಿ ತೀರದ ಗ್ರಾಮಸ್ಥರಿಗೆ ಡಂಗೂರ ಸಾರಿ ತಿಳಿಸಿದರು ಸಹಾ ಒಬ್ಬ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತಾನೆ.
ತಾಲೂಕಿನಲ್ಲಿ ರವಿವಾರ ಮಧ್ಯಾಹ್ನ ಆರ್ಭಟದಿಂದ ಮಳೆ ಸುರಿದ ಪರಿಣಾಮಅನೇಕ ಗ್ರಾಮಗಳಲ್ಲಿ ಸಣ್ಣಪುಟ್ಟನಾಲಾಗಳು ತುಂಬಿ ಹರಿದಿವೆ. ಭಂಟನಕನಳ್ಳಿ, ಭಂಟನಳ್ಳಿ, ಕುಪನೂರ, ಕೆರೋಳಿ, ಗಡಿಕೇಶ್ವರ, ಚಿಂತಪಳ್ಳಿ, ಶಿರೋಳಿ, ರುದನೂರ, ಸಾಲೇಬೀರನಳ್ಳಿ ಗ್ರಾಮಗಳ ಅನೇಕ ಮನೆಗಳಿಗೆ ನೀರು ನುಗ್ಗಿ ಸಾಕಷ್ಟುಹಾನಿಯನ್ನುಂಟು ಮಾಡಿದೆ.
ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ
ದೇಗಲಮಡಿ ಗ್ರಾಮದ ಬಸವೇಶ್ವರ ವೃತ್ತಬಳಿ ಇರುವ ಚಹಾ ಹೋಟಲದೊಳಗೆ ನೀರು ನುಗ್ಗಿದೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು ಎಂದು ಗ್ರಾಮದ ಮಸ್ತಾನ ಕೋಡ್ಲಿ ತಿಳಿಸಿದ್ದಾರೆ.
ಸಾಲೆಬೀರನಳ್ಳಿ ಗ್ರಾಮದ ಹತ್ತಿರ ನದಿ ತುಂಬಿ ಹರಿದಿದೆ ಕೆಲವು ಹೊಲಗಳಲ್ಲಿ ಬೆಳೆದು ನಿಂತ ಹೆಸರು, ಉದ್ದು, ತೊಗರಿ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ದೇಗಲಮಡಿ ಗ್ರಾಮದ ಮಲ್ಲಿಕಾರ್ಜುನ ಪರೀಟ ಇವರ 8 ಎಕರೆ ಹೊಲದಲ್ಲಿ ಬೆಳೆದು ನಿಂತ ಹೆಸರು, ಉದ್ದು ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದನ್ನು ನೋಡಿದ ರೈತ ಮಲ್ಲಿಕಾರ್ಜುನ ಪರೀಟ ಆಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಂಚೋಳಿ ಹಾಗೂ ಅಫಜಲ್ಪುರದ ಕೆಲ ಹೋಬಳಿಗಳಲ್ಲಿ ಮಳೆ ಜಿಟಿಜಿಟಿ ಮುಂದುವರಿದಿದ್ದು ಜನಜೀವನ, ಅನೇಕ ಗ3ಆಮೀಣ ಕುಟುಂಬಗಲು ತೊಂದರೆಗೀಡಾಗಿವೆ. ಚಿಂಚೋಳಿಯ ಕುಂಚಾವರಮ್ ಅರಣ್ಯ ಪ್ರದೇಶ, ಐನೋಳ್ಳಿ ಹೋಬಳಿ, ದೇಗಲ್ಮಡಿ, ನಿಡಗುಂದಾ ಹೋಬಲಿಗಳಲ್ಲಿ ಮಳೆ ವ್ಯಾಪಕವಾಗಿದೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ವ್ಯಾಪಕ ಜೋರಾಗಿ ಮಳೆ ಬೀಳುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.