ರಾಮಕೃಷ್ಣ ದಾಸರಿ

ರಾಯಚೂರು(ಮೇ.17): ಕೊರೋನಾ ಲಾಕ್‌ಡೌನ್‌ ಪರಿಣಾಮ ಸಮಾಜದ ಎಲ್ಲ ಸ್ಥರದಲ್ಲಿರುವ ಜನರಿಗೆ ಅವರವರ ಆಸೆ, ಅಂತಸ್ತು, ವ್ಯಾಪಾರ, ವಹಿವಾಟು, ಖರ್ಚು-ವೆಚ್ಚಗಳಷ್ಟೇ ಅಲ್ಲದೇ ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ವಲಯಗಳಲ್ಲಿಯೂ ಗಾಢವಾದ ಪರಿಣಾಮವನ್ನುಂಟು ಮಾಡಿದೆ.

ಕಳೆದ ಐವತ್ತಕ್ಕೂ ಹೆಚ್ಚು ದಿನಗಳಿಂದ ಲಾಕ್‌ಡೌನ್‌ನಲ್ಲಿ ಸಿಕ್ಕಿಹಾಕಿಕೊಂಡ ಬುಡುಗ ಜಂಗಮರ ಬದುಕು ನಿಜಕ್ಕೂ ಜಟಕಾ ಬಂಡಿಯಂತಾಗಿದೆ. ಸ್ಥಳೀಯ ಆಶಾಪುರ ರಸ್ತೆಯಲ್ಲಿರುವ ಪದ್ಮಾವತಿ ಕಾಲೋನಿಯಲ್ಲಿ ಈ ಬುಡುಗ ಜಂಗಮರು ವಾಸವಿದ್ದು, ವ್ಯಾಪಾರವಿಲ್ಲದೇ ಜೀವನ ನಡೆಸಲು ಪರದಾಡುತ್ತಿದ್ದಾರೆ.

ರಾಯಚೂರು: ಕೊರೋನಾ ಸೋಂಕಿತ ವ್ಯಕ್ತಿಗಳೊಂದಿಗೆ ಜನರ ನಂಟಿನ ಕಗ್ಗಂಟು

ಪ್ಯಾಪಾರ ಮಾಡಿ ಜೀವನ:

ಪದ್ಮಾವತಿ ಕಾಲೋನಿಯಲ್ಲಿ ಸುಮಾರು 25 ಬುಡುಗ ಜಂಗಮರ ಸಮಾಜಕ್ಕೆ ಸೇರಿದ ಅಲೆಮಾರಿ ಕುಟುಂಬಗಳಿದ್ದು, ಅಲ್ಲಿ ಸುಮಾರು 150ಕ್ಕೂ ಹೆಚ್ಚು ಜನರಿದ್ದಾರೆ. ಅವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ಸಾಮಾನ್ಯ ದಿನಗಳಲ್ಲಿ ಮನೆ ಮನೆಗಳಿಗೆ ತಿರುಗಿ ಸ್ಟೇಷನರಿ ಸಾಮಗ್ರಿಗಳು, ಮಕ್ಕಳ ಬಟ್ಟೆ, ಪ್ಲಾಸ್ಟಿಕ್‌ ಕೊಡಗಳ ಮಾರಾಟ ಮಾಡುವುದು ಸೇರಿ ಇತರೆ ಬೀದಿ ವ್ಯಾಪಾರವನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈ ಕುಟುಂಬಗಳಿಗೆ ಕೊರೋನಾ ವೈರಸ್‌ನ ಲಾಕ್‌ಡೌನ್‌ ಸನ್ನಿವೇಶವು ಅವರ ಬದುಕನ್ನು ಕಿತ್ತುಕೊಂಡಿದೆ.

ಭಿಕ್ಷೆ ಬೇಡುವ ಸ್ಥಿತಿ:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಟುಂಬಗಳು ಎರಡು ತಿಂಗಳ ಪಡಿತರ ಪಡೆದಿದ್ದರು ಇದರ ಜೊತೆಗೆ ದಾನಿಗಳು ಸಹ ಅಗತ್ಯ ವಸ್ತುಗಳ ನೆರವನ್ನು ನೀಡಿದ್ದರು. ಆದರೆ ದಿನಗಳ ಕಳೆದಂತೆಲ್ಲಾ ಎಲ್ಲ ಸಾಮಗ್ರಿಗಳು ಖಾಲಿಯಾದ ಪರಿಣಾಮ ಹೊಟ್ಟೆತುಂಬಿಸಿಕೊಳ್ಳುವುದು ಕಷ್ಟವಾಗಿದೆ. ಸಮಯಕ್ಕೆ ಸರಿಯಾಗಿ ಊಟ ಸಿಗದ ಕಾರಣಕ್ಕೆ ಬುಡಗ ಜಂಗಮ ಸಮಾಜದ ಮಕ್ಕಳು ಸುತ್ತಮುತ್ತಲಿನ ಬಡಾವಣೆಗಳನ್ನು ತಿರುಗಿ ಅಕ್ಕಿ ಸೇರಿ ಇತರೆ ವಸ್ತುಗಳನ್ನು ಭಿಕ್ಷೆ ಬೇಡುವಂತಹ ದುಸ್ಥಿತಿಯು ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ವರದಿಯಾಗದಿದ್ದರು ಸಹ ಮೊದಲ ಹಾಗೂ ಎರಡನೇ ಹಂತದ ಲಾಕ್‌ಡೌನ್‌ವನ್ನು ಬಹಳ ಕಠಿಣವಾಗಿ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಿಂಗಳ ಕಾಲ ಎಲ್ಲರೂ ತಮ್ಮ ತಮ್ಮ ವ್ಯಾಪಾರ, ವಹಿವಾಟು ಬಿಟ್ಟು ಸರ್ಕಾರ ಹಾಗೂ ದಾನಿಗಳು ನೀಡಿದ ದಿನಸಿಗಳಿಂದಲೇ ಬದುಕು ಸಾಗಿಸುತ್ತಿದ್ದರು. ಮೂರನೇ ಹಂತದ ಲಾಕ್‌ಡೌನ್‌ ಸಡಲಿಕೆಗೊಳಿಸಿದರು ಬುಡುಗ ಜಂಗಮರ ವ್ಯಾಪಾರವು ಸಂಪೂರ್ಣವಾಗಿ ನಿಂತುಹೋಗಿದೆ.

ಅವರು ಮಾರಾಟ ಮಾಡುತ್ತಿದ್ದ ಸ್ಟೇಷನರಿ ಸಾಮಗ್ರಿಗಳು, ಮಕ್ಕಳ ಬಟ್ಟೆ, ಪ್ಲಾಸ್ಟಿಕ್‌ ಕೊಡಗಳು ಪಕ್ಕದ ಆಂಧ್ರ ಮತ್ತು ತೆಲಂಗಾಣ ಪ್ರಾಂತಗಳ ಕರ್ನೂಲ್‌ ಹಾಗೂ ಹೈದರಾಬಾದ್‌ಗಳಿಂದ ಬರುತ್ತಿದ್ದವು. ಆದರೆ ಈ ಎರಡೂ ಜಿಲ್ಲೆಗಳು ಕೊರೋನಾ ರೆಡ್‌ಝೋನ್‌ನಲ್ಲಿ ಇರುವುದರಿಂದ ಅವರ ಸಾಮಗ್ರಿಗಳ ಖರೀದಿಯು ಅಸಾಧ್ಯವಾಗಿದ್ದು, ಇದರಿಂದಾಗಿ ವ್ಯಾಪಾರವಿಲ್ಲದೇ ಅಲೆಮಾರಿ ಕುಟುಂಬಗಳು ದಿಕ್ಕು ತೋಚದ ಸ್ಥಿತಿಯಲ್ಲಿ ಮುಳುಗಿವೆ.
ಇಂತಹ ಕಠಿಣ ಸನ್ನಿವೇಶ ಎದುರಿಸುತ್ತಿರುವ ಕುಟುಂಬಗಳಿಗೆ ಸರ್ಕಾರ ನೆರವು ನೀಡುವುದರ ಮೂಲಕ ಅವರ ವ್ಯಾಪಾರಕ್ಕೆ ಹಾಗೂ ಬದುಕಿಗೆ ಆಸರೆಯಾಗಬೇಕಾಗಿದೆ.