Vijayapura: ಡೋಣಿ ನದಿಯಲ್ಲಿ ಭಾರಿ ಪ್ರವಾಹ: ಸೇತುವೆ ಮುಳುಗಡೆಯಾಗಿ ಪ್ರಯಾಣಿಕರ ಪರದಾಟ
ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿ ತುಂಬಿ ಹರಿಯುತ್ತಿದ್ದು, ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ 61ರಲ್ಲಿರುವ ಸೇತುವೆ ಮುಳುಗಡೆ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜು.30): ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿ ತುಂಬಿ ಹರಿಯುತ್ತಿದ್ದು, ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ 61ರಲ್ಲಿರುವ ಸೇತುವೆ ಮುಳುಗಡೆ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಈ ನಡುವೆ ಡೋಣಿ ನದಿ ಪ್ರವಾಹವನ್ನ ಪರಿಶೀಲಿಸಿದ ಮಾಜಿ ಸಚಿವ ಸಿ.ಎಸ್.ನಾಡಗೌಡ ಈ ಕುರಿತು 6 ತಿಂಗಳ ಹಿಂದೆಯೇ ಎಚ್ಚರಿಸಿದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಮತ್ತು ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಡೋಣಿ ಪ್ರವಾಹ, ಕೆಳಹಂತದ ಸೇತುವೆ ಮುಳುಗಡೆ: ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಹಾದು ಹೋಗುವ ಬಿಜ್ಜಳ ರಾಜ್ಯ ಹೆದ್ದಾರಿ 61ರಲ್ಲಿರುವ ಮೇಲ್ಮಟ್ಟದ ಸೇತುವೆ ಶಿಥಿಲವಾಗಿದ್ದರಿಂದ ಕಳೆದ ಆರು ತಿಂಗಳ ಹಿಂದೆಯೇ ಸೇತುವೆ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸೇತುವೆ ಮೇಲೆ ಪರ್ಯಾಯ ರಸ್ತೆ ಮಾಡಲಾಗಿದೆ. ಶನಿವಾರ ಬೆಳಿಗ್ಗೆಯಿಂದ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದರಿಂದ ಕೆಳಮಟ್ಟದ ಸೇತುವೆಯೂ ಕೂಡಾ ಮುಳುಗಡೆ ಆಗಿ ಅಲ್ಲಿಯೂ ಸಂಚಾರ ಬಂದ್ ಮಾಡಲಾಗಿದೆ. ಡೋಣಿ ನದಿಗೆ ಹಡಗಿನಾಳ ಮಾರ್ಗದಲ್ಲಿ ನೆಲಮಟ್ಟದ ಸೇತುವೆ ರಾತ್ರಿಯೇ ಸಂಚಾರ ಸ್ಥಗಿತವಾಗಿದೆ. ಇದಕ್ಕೆ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ನೂತನ ಮೇಲ್ಸೇತುವೆ ಕಾರ್ಯ ಮುಕ್ತಾಯವಾಗಿದ್ದರೂ ರಸ್ತೆ ಜೋಡಣೆ ಕಾರ್ಯ ಮುಗಿದಿಲ್ಲ ಇದರಿಂದ ಅಲ್ಲಿಯೂ ಸಹ ಸಂಚಾರ ಇಲ್ಲವಾಯಿತು.
ವಿಜಯಪುರಕ್ಕೆ ಎಂಟ್ರಿ ಕೊಡ್ತಾ ಟವಲ್ ಗ್ಯಾಂಗ್?: ಸಿಸಿಟಿವಿ ದೃಶ್ಯ ಕಂಡು ಬೆಚ್ಚಿಬಿದ್ದ ಜನ..!
ಪ್ರಯಾಣಿಕರ ತೀವ್ರ ಪರದಾಟ: ತಾಳಿಕೋಟೆ ಪಟ್ಟಣದಿಂದ ಜಿಲ್ಲಾ ಕೇಂದ್ರಗಳಾದ ವಿಜಯಪುರ, ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಪಟ್ಟಣಕ್ಕೆ ಆಗಮಿಸುವ ಪ್ರಯಾಣಿಕರು ಸಂಪರ್ಕ ಇಲ್ಲದೇ ಪರದಾಟ ನಡೆಸುವಂತಾಯಿತು. ಪ್ರಯಾಣಿಕರ ಅನುಕೂಲಕ್ಕಾಗಿ ಶಿಥಿಲಗೊಂಡ ಮೇಲ್ಸೇತುವೆ ಮೇಲೆ ಬೈಕ್‌ಗಳು ಹಾಗೂ ಜನರ ಸಂಚಾರ ಆರಂಭಿಸಲಾಯಿತು. ಇದರಿಂದ ಪ್ರಯಾಣಿಕರು ನಡೆದುಕೊಂಡು ಸೇತುವೆ ಮೇಲೆ ಡೋಣಿ ನದಿ ದಾಟಿ ಖಾಸಗಿ ವಾಹನಗಳನ್ನು ಹಿಡಿದುಕೊಂಡು ಪಟ್ಟಣ ಸೇರುವಂತಾದರೆ ಸ್ವಂತ ವಾಹನ ಇರುವವರು ಪಟ್ಟಣದಿಂದ ವಿಜಯಪುರ ಹೋಗಲು ದೇವರ ಹಿಪ್ಪರಗಿಯಿಂದ, ಬಾಗಲಕೋಟೆಯತ್ತ ಹೋಗುವವರು ಕೊಡೆಕಲ್ಲ, ನಾರಾಯಣಪೂರ ಮಾರ್ಗವಾಗಿ ಸುತ್ತುವರೆದು ಸಂಚಾರ ಮಾಡಿದರೆ ಬಸ್ ಅವಲಂಭಿಸಿದವರು ಪರದಾಟ ನಡೆಸುವಂತಾಯಿತು.
ಎಚ್ಚರಿಕೆ ವಹಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ: ತಾಳಿಕೋಟೆ ಬಳಿಯಲ್ಲಿ ಡೋಣಿ ನದಿಗೆ ಭಾರಿ ಪ್ರಮಾಣದಲ್ಲಿ ಪ್ರವಾಹ ಬರುತ್ತದೆ. ಪ್ರವಾಹದಿಂದ ಸಂಚಾರ ಬಂದ್ ಆಗುತ್ತದೆ. ಸೂಕ್ತ ಕ್ರಮ ಕೈಕೊಳ್ಳುವಂತೆ 6 ತಿಂಗಳ ಹಿಂದೆಯೇ ಏಚ್ಚರಿಕೆ ನೀಡಿದರೂ ಸಹಿತ ಅಧಿಕಾರಿಗಳು ಯಾವುದೇ ಕ್ರಮ ಕೈಕೊಂಡಿಲ್ಲ. ಆಡಳಿತ ಮಾಡುವವರ ನಿರ್ಲಕ್ಷದಿಂದ ಜನತೆ ಪರದಾಟ ನಡೆಸುವಂತಾಗಿದೆ. ಜನರು ಸಹ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ..
ದೇವರ ಪೂಜೆ ಸಲ್ಲಿಸಿ ಸ್ವತಃ ತಾನೇ ದೇವರನಾದ ತಪಸ್ವಿ.!
ಸುದ್ದಿಗೋಷ್ಟಿ ನಡೆಸಿದ ಮಾಜಿ ಶಾಸಕ: ಮಾಜಿ ಶಾಸಕ ಸಿ.ಎಸ್.ನಾಡಗೌಡ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡೋಣಿ ನದಿ ಶಿಥಿಲಾವಸ್ಥೆ ತಲುಪಿದ ನಂತರ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಡಿ. ಕೇವಲ ದುರಸ್ತಿ ಮಾಡಿ ಅದಕ್ಕೆ 20 ಲಕ್ಷ ತಗುಲುತ್ತದೆ. ಶೀಘ್ರದಲ್ಲಿಯೇ ಮೇಲ್ಸುತುವೆ ದುರಸ್ಥಿ ಮಾಡಿ, ನಂತರ ನೂತನ ಸೇತುವೆ ನಿರ್ಮಾಣ ಮಾಡಿ ಎಂದು ತಿಳಿಸಿದ್ದೆ. ಆದರೆ 1.80 ಕೋಟಿ ವೆಚ್ಚದಲ್ಲಿ ಪರ್ಯಾಯ ರಸ್ತೆ ಮಾಡಿದರು. ಪರ್ಯಾಯ ರಸ್ತೆ ನೀರಲ್ಲಿ ಮುಳುಗಿದೆ. 2 ಕೋಟಿ ವೆಚ್ಚದಲ್ಲಿ ಹಳೆ ಸೇತುವೆ ದುರಸ್ತಿ ಮಾಡಬಹುದಿತ್ತು. ಇಲ್ಲಿ ದುಂದು ವೆಚ್ಚ ಮಾಡಿ ಸರಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ. ಆದರೆ ದುಡ್ಡು ಖಾಲಿಯಾದರೂ ಸಹಿತ ಸಾರ್ವಜನಿಕರ ಸಂಕಟ ತಪ್ಪಿಲ್ಲ. ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜನ ರೋಸಿ ಹೋಗಿದ್ದಾರೆ. ಅಭಿವೃದ್ದಿ ಕಾರ್ಯಗಳು ಮಾಡಲು ಜನಹಿತವನ್ನು ಪರಿಗಣಿಸಬೇಕು. ಸ್ವಹಿತಾಸಕ್ತಿಯಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವದಕ್ಕೆ ಡೋಣಿ ನದಿ ಸೇತುವೆ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.